ಕನ್ನಡದ ಪ್ರಸಿದ್ಧ ನಟನ ಹತ್ಯೆಗೆ ಸಂಚು !

ಬುಧವಾರ, ಮಾರ್ಚ್ 27, 2019
22 °C

ಕನ್ನಡದ ಪ್ರಸಿದ್ಧ ನಟನ ಹತ್ಯೆಗೆ ಸಂಚು !

Published:
Updated:

ಬೆಂಗಳೂರು: ಕನ್ನಡದ ಪ್ರಸಿದ್ಧ ನಟರೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

ಶೇಷಾದ್ರಿಪುರದ ನಿತೇಶ್, ನಿತ್ಯಾನಂದ್, ವಿಜಯನಗರದ ಮಧುಸೂದನ್ ಹಾಗೂ ಪಿ.ಜಿ.ಹಳ್ಳಿಯ ಪೃಥ್ವಿರಾಜ್ ಬಂಧಿತರು . ನಾಲ್ವರ ಬಳಿಯೂ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಶೇಷಾದ್ರಿಪುರ ಠಾಣೆ ವ್ಯಾಪ್ತಿಯ ಆರ್‌.ಪಿ. ರಸ್ತೆಯ ಬಿಡಿಎ ಕಚೇರಿ ಬಳಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಆರೋಪಿಗಳು ನಿಂತುಕೊಂಡಿದ್ದರು. ಆ ಬಗ್ಗೆ ಭಾತ್ಮಿದಾರರಿಂದ ಮಾಹಿತಿ ಬರುತ್ತಿದ್ದಂತೆ, ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಯಿತು. ಒಬ್ಬಾತ ಪರಾರಿಯಾದ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ಕೊಲೆ ಸಂಚು ಬಾಯ್ಬಿಟ್ಟಿದ್ದ ಸ್ಲಂ ಭರತ: ‘ತನ್ನ ವಿರುದ್ಧ ಸಾಕ್ಷಿ ಹೇಳಿದ್ದವರಿಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದ ಕುಖ್ಯಾತ ರೌಡಿ ಭರತ ಅಲಿಯಾಸ್ ಸ್ಲಂ ಭರತನನ್ನು ಇತ್ತೀಚೆಗಷ್ಟೇ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿತ್ತು. ಕನ್ನಡದ ಪ್ರಸಿದ್ಧ ನಟರೊಬ್ಬರನ್ನು ಹತ್ಯೆ ಮಾಡಲು ತಂಡವೊಂದು ಸಂಚು ರೂಪಿಸುತ್ತಿದ್ದ ಬಗ್ಗೆ ಆತ ಬಾಯ್ಬಿಟ್ಟಿದ್ದ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಭರತ ನೀಡಿದ್ದ ಮಾಹಿತಿಯಂತೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಆ ತಂಡವೇ ಇದೀಗ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ’ ಎಂದರು. 

‘ಬಂಧಿತ ಆರೋಪಿಗಳು, ತಾವು ಹತ್ಯೆ ಮಾಡಬೇಕು ಎಂದುಕೊಂಡಿದ್ದ ನಟನ ಚಲನವಲನಗಳ ಮೇಲೆ ಗಮನ ಇಟ್ಟಿದ್ದರು.  ಸಮಯ ನೋಡಿಕೊಂಡು ದಾಳಿ ಮಾಡಲು ಹೊಂಚು ಹಾಕುತ್ತಿದ್ದರು. ಆ ಬಗ್ಗೆ ಅವರೆಲ್ಲ ತಪ್ಪೊಪ್ಪಿಕೊಂಡಿದ್ದಾರೆ.’

‘ಸ್ಲಂ ಭರತನೇ ಹತ್ಯೆಗೆ ಸಂಚು ರೂಪಿಸಿ ಕೊಲೆ ಮಾಡಲು ನಮಗೆ ಹೇಳಿದ್ದ’ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ. ಸದ್ಯ ಭರತ ಜೈಲಿನಲ್ಲಿದ್ದಾನೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳನ್ನು ಬಂಧಿಸಬೇಕಾಗಿದೆ. ಅಲ್ಲಿಯವರೆಗೂ ನಟನ ಹೆಸರನ್ನು ಬಹಿರಂಗಪಡಿಸಲಾಗದು’ ಎಂದು ಅಧಿಕಾರಿ ಹೇಳಿದರು. 

ಬರಹ ಇಷ್ಟವಾಯಿತೆ?

 • 17

  Happy
 • 4

  Amused
 • 2

  Sad
 • 2

  Frustrated
 • 14

  Angry

Comments:

0 comments

Write the first review for this !