ದುರಾಡಳಿಕ್ಕೆ ಕುಮಾರಸ್ವಾಮಿ ಸರ್ಕಾರ ಉತ್ತಮ ಉದಾಹರಣೆ: ಜಗದೀಶ ಶೆಟ್ಟರ್

7
"‘ಮನೆ ಮನೆಗೆ ಕಾಂಗ್ರೆಸ್’ ಎಂದ ಮುಖಂಡರು ಮತದಾರರ ಬದಲು ತಮ್ಮ ಮನೆಗೆ ಹೋದರು'

ದುರಾಡಳಿಕ್ಕೆ ಕುಮಾರಸ್ವಾಮಿ ಸರ್ಕಾರ ಉತ್ತಮ ಉದಾಹರಣೆ: ಜಗದೀಶ ಶೆಟ್ಟರ್

Published:
Updated:
Deccan Herald

ಹುಬ್ಬಳ್ಳಿ: ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ ದುರಾಡಳಿತಕ್ಕೆ ಅತ್ಯುತ್ತಮ ಉದಾಹರಣೆ ಎಂದು ಶಾಸಕ ಜಗದೀಶ ಶೆಟ್ಟರ್ ಟೀಕಿಸಿದರು.

ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಮಹಾನಗರ ಘಟಕದ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಸಚಿವರ ಮಧ್ಯೆ ಹೊಂದಾಣಿಕೆ ಇಲ್ಲ. ಸಚಿವ ಮಹೇಶ್ ಮತ್ತು ಪುಟ್ಟರಂಗಶೆಟ್ಟಿ ಪರಸ್ಪರ ನಿಂದಿಸಿದ್ದನ್ನು ನೋಡಿದ್ದೇವೆ. ಈ ಸರ್ಕಾರ ಯಾವಾಗಬೇಕಾದರೂ ಪತನವಾಗಬಹುದು, ಅಂತಹ ಸಂದರ್ಭ ಬಂದಾಗ ಬಿಜೆಪಿ ಚುನಾವಣೆಗೆ ಸಿದ್ಧವಾಗಿರಬೇಕು. ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಬಿಟ್ಟು ಹೋಗಿರುವ ಹೆಸರನ್ನು ಸೇರಿಸಲು ಅರ್ಜಿ ನೀಡಿ. ಸರ್ಕಾರ ಅವರದ್ದೇ ಇರುವುದರಿಂದ ಕೊನೆಯ ಕ್ಷಣದಲ್ಲಿ ಹೆಸರು ಸೇರಿಸಲು ಅಧಿಕಾರಿಗಳು  ಅವಕಾಶ ನೀಡದಿರಬಹುದು’ ಎಂದರು.

‘ಸಂಘಟನೆಯ ಮಹತ್ವ ಅರಿತಿರುವ ಹಾಗೂ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿರುವ ಏಕೈಕ ಪಕ್ಷ ಬಿಜೆಪಿ. ಕಾಂಗ್ರೆಸ್ ಸಹ ಸಂಘಟನೆ ವಿಷಯದಲ್ಲಿ ಬಲಶಾಲಿಯಾಗಿಲ್ಲ. ಯಾವುದೋ ಹವಾದಲ್ಲಿ ಅವರು ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಾರೆ. ಬಿಜೆಪಿ ಮಾಡಿದ ‘ಮನೆ ಮನೆಗೆ ಬಿಜೆಪಿ’ ಕಾರ್ಯಕ್ರಮವನ್ನು ಕಾಂಗ್ರೆಸ್ ನಕಲು ಮಾಡಿತು. ಆದರೆ ಆ ಪಕ್ಷದ ನಾಯಕರು ಮತದಾರರ ಮನೆಗೆ ಹೋಗುವ ಬದಲು ಅವರವರ ಮನೆಗೆ ಹೋದರು. ಪರಿಣಾಮ ಹಿಂದಿನ ಚುನಾವಣೆಯಲ್ಲಿ 79 ಸ್ಥಾನಕ್ಕಿಳಿದರು’ ಎಂದು ವ್ಯಂಗ್ಯವಾಡಿದರು.

ಒಟ್ಟು ಬೆಳೆಯ ಪ್ರಮಾಣದಲ್ಲಿ ಶೇ25ರಷ್ಟನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ನೆರವು ನೀಡುವುದು ವಾಡಿಕೆ. ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಹೆಸರು ಕಾಳು ಬೆಳೆಯಲಾಗಿದೆ ಎಂಬ ನಿಖರ ಮಾಹಿತಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಿಲ್ಲ. ಪರಿಣಾಮ ಸಮಸ್ಯೆ ಎದುರಾಗಿದೆ. ಶೇ40ರಷ್ಟು ಖರೀದಿಗೆ ಹಣ ನೀಡಲು ಕೇಂದ್ರ ತಯಾರಿದೆ, ರಾಜ್ಯ ಸರ್ಕಾರ ಹೆಚ್ಚುವರಿ ಹಣವನ್ನು ತನ್ನ ಕೈಯಿಂದ ಹಾಕಿ ಖರೀದಿ ಮಾಡಬೇಕು ಎಂದರು.

ಮೇಯರ್ ಸುಧೀರ ಸರಾಫ್, ಉಪ ಮೇಯರ್ ಮೇನಕ ಹುರುಳಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕ ಅಶೋಕ್ ಕಾಟವೆ, ಮಹಾನಗರ ಬಿಜೆಪಿ ಅಧ್ಯಕ್ಷ ನಾಗೇಶ್ ಕಲಬುರ್ಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !