’ಪುಗಸಟ್ಟೆ ಜಮೀನು ಸಿಗುತ್ತೆ ಅಂದ್ರೆ ಮಣ್ಣು ತಿನ್ನೋಕು ತಯಾರು’

ಶನಿವಾರ, ಮೇ 25, 2019
32 °C
ಅರ್ಜಿದಾರನಿಗೆ ಹೈಕೋರ್ಟ್ ಛೀಮಾರಿ

’ಪುಗಸಟ್ಟೆ ಜಮೀನು ಸಿಗುತ್ತೆ ಅಂದ್ರೆ ಮಣ್ಣು ತಿನ್ನೋಕು ತಯಾರು’

Published:
Updated:

ಬೆಂಗಳೂರು: ‘ಪುಗಸಟ್ಟೆ ಸರ್ಕಾರಿ ಜಮೀನು ಸಿಗುತ್ತೆ ಅಂದ್ರೆ ಜನ ಮಣ್ಣು ತಿನ್ನೋಕು ತಯಾರಿರ್ತಾರೆ’ ಎಂದು ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರು ಈ ಅಭಿಪ್ರಾಯ ಹೊರಹಾಕಿದರು.

ಅರ್ಜಿದಾರರೊಬ್ಬರು, ‘ನಾನು 45 ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು ಅದು ನನ್ನ ಸ್ವಾಧೀನದಲ್ಲಿದೆ. ಅದನ್ನು ನನಗೆ ಮಂಜೂರು ಮಾಡಬೇಕು ಎಂದು ಕೋರಿದ್ದ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ’ ಎಂದು ದೂರಿದ್ದರು.

‘ಜಮೀನನ್ನು ನನಗೆ ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ರಿಟ್ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಅರ್ಜಿ ಜೊತೆ ಲಗತ್ತಿಸಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಅರ್ಜಿದಾರನಿಗೆ 40 ವರ್ಷ ಆಗಿರುವುದು ಕಂಡು ಬಂದಿತು.

ಇದರಿಂದ ಕೋಪೋದ್ರಿಕ್ತರಾದ ನ್ಯಾಯಮೂರ್ತಿಗಳು, ಅರ್ಜಿದಾರರ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಏನ್ರೀ ವಕೀಲರೇ...ನಿಮ್ಮ ಅರ್ಜಿದಾರನಿಗೆ ಈಗ 40 ವರ್ಷ ಎಂದು ಅರ್ಜಿಯಲ್ಲಿ ತಿಳಿಸಿದ್ದೀರಿ. ಆದರೆ, 45 ವರ್ಷಗಳಿಂದ ಜಮೀನಿನ ಸಾಗುವಳಿ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದೀರಿ. ಅರ್ಜಿದಾರನ ವಯಸ್ಸೇ 40 ವರ್ಷ ಎಂದಾದಾಗ, 45 ವರ್ಷದಿಂದ ಸಾಗುವಳಿ ಮಾಡಿಕೊಂಡಿರಲು ಹೇಗೆ ಸಾಧ್ಯ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಸರ್ಕಾರದ ಜಮೀನು ಉಚಿತವಾಗಿ ಸಿಗುತ್ತೆ ಅಂದರೆ ಜನ ಮಣ್ಣು ತಿನ್ನೋಕೂ ಸಿದ್ಧರಿರುತ್ತಾರಲ್ಲವೇ’ ಎಂದು ಖಾರವಾಗಿ ನುಡಿದರು.

‘ಜನ ಸುಳ್ಳು ಅರ್ಜಿ ಹಾಗೂ ದಾಖಲೆ ಸಿದ್ಧಪಡಿಸಿಕೊಂಡು ಸರ್ಕಾರಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸುತ್ತಾರೆ. ₹ 50 ಕೊಟ್ಟರೆ ಸಾಕು ಸರ್ಕಾರಿ ಕಚೇರಿಗಳಲ್ಲಿ ಯಾವ ಅರ್ಜಿಗೆ ಬೇಕಾದರೂ ಸರ್ಕಾರಿ ನೌಕರರು ಮೊಹರು ಒತ್ತುತ್ತಾರೆ. ಅಂತಹವರನ್ನು ಕಚೇರಿಗಳಿಂದ ಹೊರದಬ್ಬಬೇಕು. ನಕಲಿ ದಾಖಲೆಗೊಂದಿಗೆ ಸುಳ್ಳು ಅರ್ಜಿ ಸಲ್ಲಿಸುವವರನ್ನು ವಿಚಾರಣೆಗೆ ಒಳಪಡಿಸಬೇಕು. ಆದರೇನು ಮಾಡುವುದು ಅವರೇ ರಾಜಕಾರಣಿಗಳ ಮತ ಬ್ಯಾಂಕ್ ಆಗಿದ್ದಾರಲ್ಲಾ ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅರ್ಜಿದಾರ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿರುವ ಕಾರಣ ಅರ್ಜಿ ವಿಚಾರಣೆ ನಡೆಸಲು ಯೋಗ್ಯವಾಗಿಲ್ಲ’ ಎಂದು ಅರ್ಜಿಯನ್ನು ತಿರಸ್ಕರಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !