ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಲ್ಲದೆ ಬಾಡುತ್ತಿದೆ ಮೇವಿನ ಜೋಳ

Last Updated 19 ಮೇ 2019, 16:18 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಆರಂಭದಲ್ಲಿ ಬಿದ್ದ ಭರಣಿ ಮಳೆಯಿಂದ ಹಲವು ರೈತರು ಜಮೀನು ಉಳುಮೆ ಮಾಡಿ ಜಾನುವಾರುಗಳ ಮೇವಿಗಾಗಿ ಮುಸುಕಿನ ಜೋಳ ಬಿತ್ತಿದ್ದರು. ಈಗ ಮಳೆಯಿಲ್ಲದೆ ಆ ಬೆಳೆ ಬಾಡುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಕೆಲವರ ಹೊಲದಲ್ಲಿ ಜೋಳ ಗೇಣುದ್ದ ಬೆಳೆದಿದೆ. ಇನ್ನು ಕೆಲವು ಹೊಲಗಳಲ್ಲಿ ಮೊಳಕೆಯಲ್ಲಿಯೇ ಮರಟುತ್ತಿದೆ. ಮಳೆ ಬರುವುದೇ ಎಂದು ನಿತ್ಯ ಆಕಾಶದ ಕಡೆ ನೋಡುವ ಸ್ಥಿತಿ ಎದುರಾಗಿದೆ.

ಕಳೆದ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿಯೇ ಬಿದ್ದಿತ್ತು. ಅದರಂತೆ ಈ ಬಾರಿಯೂ ಮಳೆಯ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಭರಣಿ ಮಳೆಯಲ್ಲಿ ತೊಗರಿ, ಅವರೆ, ಮೆಣಸಿನ ಕಾಯಿ, ಜೋಳ ಬಿತ್ತನೆ ಮಾಡಿಕೊಳ್ಳುತ್ತಿದ್ದರು. ಈ ಬಾರಿ ಮಳೆಯೇ ಇಲ್ಲದ್ದರಿಂದ ಯಾವುದನ್ನು ಬಿತ್ತನೆ ಮಾಡಿಲ್ಲ.

ನೆಲಮಂಗಲ ತಾಲ್ಲೂಕಿನಲ್ಲಿ ಈಗಾಗಲೇ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಹುಲ್ಲಿನ ಬೆಲೆಯೂ ಹೆಚ್ಚುತ್ತಿದೆ. ಪೂರ್ವ ಮುಂಗಾರು ಬಾರದೆ ಇರುವುದರಿಂದ ಬೆಲೆ ಇನ್ನಷ್ಟು ಏರುವ ಆತಂಕ ರೈತರದು.

‘ಸ್ವಲ್ಪ ಮಳೆಯಿಂದ ಕಾಡುಮೇಡು, ಹೊಲ, ಮಾಳ, ತಕ್ಕಲುಗಳಲ್ಲಿ ಹಸಿರು ಚಿಗುರೊಡೆದಿತ್ತು. ಈಗ ಮಳೆಯಿಲ್ಲದೆ ಅದು ಸಹ ಬಾಡುತ್ತಿದೆ. ಕೆರೆ, ಕುಂಟೆ, ಚೆಕ್ ಡ್ಯಾಂಗಳು ಬತ್ತಿವೆ. ಜಾನುವಾರುಗಳಿಗೆ ಮನೆಯಲ್ಲಿಯೇ ನೀರು ಕುಡಿಸಬೇಕಿದೆ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಎರಡು ಮೂರು ದಿನಗಳಿಗೆ ಒಮ್ಮೆ ಮನೆಗಳಿಗೆ ನೀರು ಪೂರೈಕೆ ಆಗುತ್ತಿದೆ’ ಎಂದು ಅಳಲು ತೋಡಿಕೊಂಡರು ಕುರುವೆಲ್ ತಿಮ್ಮನಹಳ್ಳಿಯ ಸಂತೋಷ್.

‘ಮಳೆ ಕೊರತೆ ಹೀಗೆ ಮುಂದುವರೆದರೆ ಬರ ಆವರಿಸುವ ಲಕ್ಷಣಗಳು ಮೂಡುತ್ತವೆ. ಒಂದಷ್ಟು ರಾಗಿ, ದವಸ ಧಾನ್ಯ ಬೆಳೆದುಕೊಳ್ಳುವ ರೈತರ ಜೀವನ ಮತ್ತಷ್ಟು ದುಸ್ಥರವಾಗಲಿದೆ’ ಎಂದು ರೈತ ಜಗದೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT