6
ಎರಡು ತಿಂಗಳುಗಳಿಂದ ನಷ್ಟ ಅನುಭವಿಸುತ್ತಿರುವ ಬೆಳೆಗಾರರು

ಕುಸಿದ ರೇಷ್ಮೆ ಗೂಡಿನ ಬೆಲೆ: ಕಂಗಾಲು

Published:
Updated:
ಮಳವಳ್ಳಿಯ ರೇಷ್ಮೆ ಮಾರುಕಟ್ಟೆಯಲ್ಲಿ  ರೇಷ್ಮೆ ಗೂಡಿನ ವಹಿವಾಟು ನಡೆಯುತ್ತಿರುವುದು

ಮಳವಳ್ಳಿ: ಪಟ್ಟಣದ ಹೊರವಲಯದಲ್ಲಿರುವ ರೇಷ್ಮೆ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಗೂಡಿನ ಬೆಲೆ ಕುಸಿತ ಕಂಡಿದ್ದು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.

ಎರಡು ತಿಂಗಳ ಹಿಂದೆ ₹ 500ರವರೆಗೂ ಇದ್ದ ಒಂದು ಕೆ.ಜಿ.ಗೂಡಿನ ಬೆಲೆ ಈಗ ₹ 180 ರಿಂದ ₹ 250ಕ್ಕೆ ಕುಸಿದಿದೆ. ಇದರಿಂದ ಉತ್ಪಾದನೆ ವೆಚ್ಚವೂ ಸಿಗದ ಪರಿಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ. ಕೆಲವು ರೇಷ್ಮೆ ಬೆಳೆಗಾರರು ಬೇರೆಯವರಿಂದ ಜಮೀನು ಗುತ್ತಿಗೆ ಪಡೆದು ಬೆಳೆದಿದ್ದಾರೆ. ಜಮೀನು ಮಾಲೀಕರಿಗೆ ಹಣ ನೀಡಲೂ ಸಾಧ್ಯವಾಗದೆ ರೈತರು ಸಂಕಷ್ಟ ಪರಿಸ್ಥಿತಿ ಅನುಭವಿಸುವಂತಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಹೀಗೆಯೇ ಆಗಿ ಒಂದು ಕೆ.ಜಿ.ಗೂಡಿಗೆ ಸರ್ಕಾರ ₹ 10 ಪ್ರೋತ್ಸಾಹಧನ ನೀಡಿತ್ತು. ಈಗ ಕೆ.ಜಿ.ಗೂಡಿಗೆ ₹ 200– 250 ಮಾತ್ರ ಸಿಗುತ್ತಿದ್ದು ಬೆಳೆಗಾರರಿಗೆ ನಷ್ಟವಾಗುತ್ತಿದೆ. ರಾಜ್ಯದಲ್ಲಿ ಮಳವಳ್ಳಿ ತಾಲ್ಲೂಕು ರೇಷ್ಮೆ ಗೂಡು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ಪ್ರತಿಷರ್ಷ 15 ಸಾವಿರ ಮೆಟ್ರಿಕ್ ಟನ್ ಗೂಡು ಉತ್ಪಾದನೆಯಾಗುತ್ತದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ 5,400 ಹೆಕ್ಟೇರ್ ವ್ಯಾಪ್ತಿಯಲ್ಲಿ 11 ಸಾವಿರಕ್ಕೂ ಹೆಚ್ಚಿನ ರೇಷ್ಮೆ ಬೆಳೆಗಾರರು ಇದ್ದಾರೆ.

‘ಈಗ ರೇಷ್ಮೆ ಗೂಡಿನ ದರ ಕುಸಿದಿದ್ದು ನಾವು ಖರ್ಚು ಮಾಡಿದ ಹಣವೂ ಸಿಕ್ಕಿಲ್ಲ. ₹ 500ರವರಗೆ ಮಾರಾಟವಾಗಬೇಕಾಗಿದ್ದ ಕೆ.ಜಿ ಗೂಡು ಕೇವಲ ₹ 220ಕ್ಕೆ ಮಾರಾಟವಾಗಿದೆ. ಲಾಭದ ನಿರೀಕ್ಷೆಯಲ್ಲಿದ್ದ ನನಗೆ ಅಪಾರ ನಷ್ಟವಾಗಿದೆ’ ಎಂದು ದುಗ್ಗನಹಳ್ಳಿ ಬಸವರಾಜು ಬೇಸರ ವ್ಯಕ್ತಪಡಿಸಿದರು.

‘ರೇಷ್ಮೆ ಗೂಡಿನ ಬೇಡಿಕೆ ಕಡಿಮೆ ಹಾಗೂ ವಾತಾವರಣ ಹೆಚ್ಚು ತಂಪಾಗಿರುವ ಹಿನ್ನೆಲೆಯಲ್ಲಿ ರೇಷ್ಮೆ ಗೂಡಿನ ಬೆಲೆ ಕುಸಿದಿದೆ. ರೀಲರ್‌ಗಳು ಗೂಡು ಖರೀದಿ ಮಾಡುವುದು ಕಡಿಮೆಯಾಗಿದೆ. ಬಿಸಿಲಿನ ವಾತಾವರಣ ಬಂದರೆ ಬೆಲೆ ಹೆಚ್ಚಳವಾಗಬಹುದು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಮಲ್ಲಿಕಾರ್ಜುನಸ್ವಾಮಿ.
–ಎನ್‌.ಪುಟ್ಟಸ್ವಾಮಾರಾಧ್ಯ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !