ದಕ್ಷಿಣದ ದರ್ಪಣದಲ್ಲಿ ಎಲಿವೇಟೆಡ್‌ ಕಾರಿಡಾರ್‌

ಶನಿವಾರ, ಏಪ್ರಿಲ್ 20, 2019
27 °C
‘ಬೆಳ್ಳಂದೂರು ಜೊತೆಗೆ’ ಪರ–ವಿರೋಧ ಗುಂಪುಗಳ ಮಧ್ಯೆ ಅರ್ಥಪೂರ್ಣ ಸಂವಾದ

ದಕ್ಷಿಣದ ದರ್ಪಣದಲ್ಲಿ ಎಲಿವೇಟೆಡ್‌ ಕಾರಿಡಾರ್‌

Published:
Updated:

ಬೆಂಗಳೂರು: ಎಲಿವೇಟೆಡ್‌ ಕಾರಿಡಾರ್‌ ಯೋಜನೆಯ ಪರ ವಿರೋಧದ ಧ್ವನಿಗಳು ನಗರದಲ್ಲಿ ನಿರಂತರವಾಗಿ ಧ್ವನಿಸುತ್ತಿವೆ.

‘ಬೆಳ್ಳಂದೂರು ಜೊತೆಗೆ’ ನಾಗರಿಕ ಸಂಘಟನೆಯು ‘ದಕ್ಷಿಣ ಉಪನಗರಗಳ ಕನ್ನಡಿಯಲ್ಲಿ ಎಲಿವೇಟೆಡ್‌ ಕಾರಿಡಾರ್‌’ ಎನ್ನುವ ಚರ್ಚೆಯನ್ನು ಹಮ್ಮಿಕೊಂಡಿತ್ತು.

ಎರಡು ತಂಡಗಳು ಚರ್ಚೆಯಲ್ಲಿ ಭಾಗವಹಿಸಿದ್ದವು, ಆರ್‌.ಕೆ.ಮಿಶ್ರಾ, ಕ್ಲಿಮೆಂಟ್‌ ಜಯಕುಮಾರ, ಪ್ರತೀಕ್‌ ಘೋಷ್‌ ಮತ್ತು ನಿತಿನ್‌ ಶೇಷಾದ್ರಿ ಅವರು ಯೋಜನೆ ಪರ ಮಾತನಾಡಿದರು.ಶ್ರೀನಿವಾಸ ಅಲವಿಲ್ಲಿ, ರಾಧಾ ಚಂಚಣಿ, ನಾಗೇಶ್‌ ಅರಸು ಮತ್ತು ನರೇಂದ್ರ ಕುಮಾರ ಯೋಜನೆಯ ವಿರುದ್ಧ ವಾದ ಮಂಡಿಸಿದರು.

ಯೋಜನೆ ಪರ ವಾದ‌: ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರಣ ರಸ್ತೆ ವಿಸ್ತರಣೆಯ ಅಗತ್ಯವಿದೆ. ಎಲಿವೇಟೆಡ್ ಕಾರಿಡಾರ್‌ ಒಂದೇ ಅದಕ್ಕೆ ಪರಿಹಾರ. ಹೊಸದಾಗಿ ರಸ್ತೆ ನಿರ್ಮಿಸಿದರೆ ಭೂಸ್ವಾಧೀನ ಅನಿವಾರ್ಯ. ಅದರಿಂದಾಗುವ ವಿಳಂಬವನ್ನು ಕಾರಿಡಾರ್‌ ಯೋಜನೆ ಕಡಿಮೆಗೊಳಿಸುತ್ತದೆ. ಮೆಟ್ರೊ ಮತ್ತು ಉಪನಗರ ರೈಲನ್ನು ತಲುಪಲು ಅನುಕೂಲವಾಗಲಿದೆ. ಬಸ್‌ನಲ್ಲಿ ನಗರದ ಒಂದು ಗಮ್ಯಸ್ಥಾನದಿಂದ ಮತ್ತೊಂದು ಗಮ್ಯಸ್ಥಾನವನ್ನು ಬೇಗ ತಲುಪಬಹುದು ಎಂದು ವಾದವನ್ನು ಮುಂದಿಟ್ಟರು.

ಕ್ಲಿಮೆಂಟ್ ಜಯಕುಮಾರ್‌ ಮಾತನಾಡಿ,‘ದಟ್ಟಣೆ ಅವಧಿಯಲ್ಲಿ ವಾಹನಗಳ ವೇಗ ಗಂಟೆಗೆ ಸರಾಸರಿ 5–8 ಕಿ.ಮೀ ಇರುತ್ತದೆ. ವಾಹನದ ವೇಗ ಗಂಟೆಗೆ 30 ಕಿ.ಮೀ ಆದರೆ, ಮಾಲಿನ್ಯ ಐದು ಪಟ್ಟು ಕಡಿಮೆಯಾಗಲಿದೆ. ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣವಾದರೆ ಮಾತ್ರ ಅದು ಸಾಧ್ಯ’ ಎಂದು ಹೇಳಿದರು.

‘ಕಡಿಮೆ ವೇಗದಿಂದಾಗಿ ವರ್ತುಲ ರಸ್ತೆಯಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಎತ್ತರಿಸಿದ ಸೇತುವೆ ನಿರ್ಮಾಣವಾದರೆ ಮಾಲಿನ್ಯ ಕಡಿಮೆಯಾಗಿ, ಸಮಸ್ಯೆಯಿಂದ ಅವರಿಗೆ ಮುಕ್ತಿ ಸಿಗಲಿದೆ. ಇದು ಸಾರಿಗೆ ಆಯ್ಕೆಗಳ ಹೆಚ್ಚಳಕ್ಕೂ ಕಾರಣವಾಗಲಿದೆ’ ಎಂದು ಅವರು ತಿಳಿಸಿದರು.

ಆರ್‌.ಕೆ.ಮಿಶ್ರಾ,‘ಕೆಲವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.

ಅದರ ಬದಲಾಗಿ ಪರ್ಯಾಯ ಮಾರ್ಗಗಳನ್ನು ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಕೇಳಿಕೊಳ್ಳಲಿ’ ಎಂದು ಅವರು ಹೇಳಿದರು.

‘ಸೇತುವೆ ವಿರೋಧಿಸುವವರು ದಯವಿಟ್ಟು ಇದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬಾರದು. ನಿಮಗೆ ಒಂದು ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದರ ಜ್ಞಾನ ಇಲ್ಲ. ನೀವು ಇದನ್ನು ವಿರೋಧಿಸುವುದರಿಂದ ಏನೋ ಆಗಿ ಹೋಗುತ್ತದೆ ಎನ್ನುವ ಭ್ರಮೆಯನ್ನು ಬಿಡಿ’ ಎಂದರು.

ಯೋಜನೆ ವಿರೋಧದ ಧ್ವನಿ: ಪೂರ್ವ ತಯಾರಿಯಿಲ್ಲದೇ ಸರ್ಕಾರ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು, ಇದೊಂದು ಕಾನೂನು ಬಾಹಿರ ಯೋಜನೆಯಾಗಿದೆ. ಇದರಿಂದ ದಟ್ಟಣೆ ಕಡಿಮೆಯಾಗುವುದಿಲ್ಲ.

ಯೋಜನೆಯ ಹೆಸರಿನಲ್ಲಿ ಜನರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. ಇದಕ್ಕೆ ಬದಲಾಗಿ 30 ವರ್ಷದಿಂದ ನನೆಗುದಿಗೆ ಬಿದ್ದಿರುವ ಉಪನಗರ ರೈಲು ಯೋಜನೆಯನ್ನು ಅನುಷ್ಠಾನಕ್ಕೆ ತಂದು, ಮೆಟ್ರೊ ಜಾಲವನ್ನು ವಿಸ್ತರಿಸಲಿ ಎಂದು ವಾದ ಮಂಡಿಸಿದರು.

ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಸ್ಥೆಯ ಸಹಸಂಸ್ಥಾಪಕ ಶ್ರೀನಿವಾಸ ಅಲವಿಲ್ಲಿ,‘ಮೊದಲು ಸಾರ್ವಜನಿಕ ಸಾರಿಗೆ ಕಡೆ ಗಮನಹರಿಸಬೇಕು. ಎಲಿವೇಟೆಡ್‌ ಕಾರಿಡಾರ್‌ ಯೋಜನೆಯು ಕಾರಿನ ಬಳಕೆಯನ್ನು ಉತ್ತೇಜಿಸುತ್ತದೆ.

ಜಗತ್ತಿನ ಇತರೆ ನಗರಗಳಿಂದ ನಾವು ತುಂಬಾ ಕಲಿಯಬೇಕಿದೆ’ ಎಂದರು.

‘ದೇವೇಗೌಡರಿಂದ ಹಿಡಿದು ಸಿದ್ದರಾಮಯ್ಯರವರೆಗೂ ಯಾವ ಮುಖ್ಯಮಂತ್ರಿಗಳೂ ಉಪನಗರ ರೈಲು ಯೋಜನೆ ಕುರಿತು ಸೊಲ್ಲೆತ್ತಲಿಲ್ಲ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತಕುಮಾರ ಅವರು ಇದಕ್ಕಾಗಿ ಧ್ವನಿ ಎತ್ತಿದ್ದರು. ಜನರ ನಿರಂತರ ಒತ್ತಡ ಹಾಗೂ ಪ್ರತಿಭಟನೆಗಳ ಕಾರಣ 33 ವರ್ಷಗಳ ಬೇಡಿಕೆ ಈಗ ಈಡೇರುವ ಹಂತ ತಲುಪಿದೆ’ ಎಂದು ಅವರು ಹೇಳಿದರು.

ರಾಧಾ ಮಾತನಾಡಿ,‘‍ಇದು ಸರಿಯಾದ ಯೋಜನೆಯ ಕುರಿತು ಕೇಳುವ ಸಮಯ, ನಾವು ಎಲಿವೇಟೆಡ್‌ ಕಾರಿಡಾರ್‌ ಕೇಳಿದರೆ, ಮುಂದಿನ ವರ್ಷಗಳಲ್ಲಿ ಅಸ್ಥಿರ ಸಾರಿಗೆ ವ್ಯವಸ್ಥೆಯನ್ನು ಕೇಳಿದಂತಾಗುತ್ತದೆ.

ಬದಲಾಗಿ ಹೆಚ್ಚು ಜನರನ್ನು ಸಾಗಿಸುವ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರೆ, ಸಾರ್ವಜನಿಕರು ತಮ್ಮ ಖಾಸಗಿ ವಾಹನ
ಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆ ಕಡೆ ಮುಖ ಮಾಡುತ್ತಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !