ರೈತರ ಸಮಸ್ಯೆ ಚರ್ಚಿಸುವಂತೆ ಮನವಿ

ಮಂಗಳವಾರ, ಜೂಲೈ 16, 2019
23 °C

ರೈತರ ಸಮಸ್ಯೆ ಚರ್ಚಿಸುವಂತೆ ಮನವಿ

Published:
Updated:
Prajavani

ಚಿಕ್ಕಬಳ್ಳಾಪುರ: ರೇಷ್ಮೆ ಬೆಳೆಗಾರರು ಮತ್ತು ಹೈನುಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ರೈತರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ‘ಪ್ರಸ್ತುತ ರೇಷ್ಮೆ ಉತ್ಪಾದನಾ ವೆಚ್ಚ ಹೆಚ್ಚಳವಾಗಿ ರೇಷ್ಮೆ ಗೂಡಿನ ಬೆಲೆ ಪಾತಾಳಕ್ಕೆ ಕುಸಿದಿದೆ. ರೈತರಿಗೆ ಕನಿಷ್ಠ ಉತ್ಪಾದನಾ ವೆಚ್ಚ ಕೂಡ ವಾಪಸ್‌ ಬರುತ್ತಿಲ್ಲ. 2017–18ರಲ್ಲಿ ಗೂಡಿನ ಬೆಲೆ ಸರಾಸರಿ ₹480 ರಿಂದ ₹500ರ ವರೆಗೆ ಇತ್ತು. ಇದೀಗ ಅವರು ₹280 ರಿಂದ ₹300ಕ್ಕೆ ಕುಸಿದಿದೆ’ ಎಂದು ಹೇಳಿದರು.

‘ಪ್ರಸ್ತುತ ಒಂದು ಕೆ.ಜಿ ಗೂಡಿನ ಉತ್ಪಾದನಾ ವೆಚ್ಚ ₹450 ರಷ್ಟು ತಗಲುತ್ತಿದೆ. ಹೀಗಾಗಿ ಒಂದು ಕೆ.ಜಿ ಗೂಡಿಗೆ ಕನಿಷ್ಠ ₹150 ರಿಂದ ₹200ರ ವರೆಗೆ ನಷ್ಟವಾಗುತ್ತಿದೆ. ರೇಷ್ಮೆ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಮನ ಹರಿಸಬೇಕಿದೆ’ ಎಂದು ತಿಳಿಸಿದರು.

‘ಇವತ್ತು ಹೈನುಗಾರಿಕೆ ಕೂಡ ಅಸಮತೋಲನ ಸ್ಥಿತಿಗೆ ತಲುಪಿದೆ. ಹಾಲು ಉತ್ಪಾದನೆಗೆ ಆಗುವ ಖರ್ಚಿಗಿಂತಲೂ ಸರ್ಕಾರ ಕಡಿಮೆ ಬೆಲೆ ಕೊಡುತ್ತಿದೆ. ನಮ್ಮ ನೆರೆಯ ರಾಜ್ಯಗಳಲ್ಲಿ ಒಂದು ಲೀಟರ್‌ ಹಾಲಿಗೆ ₹30 ರಿಂದ ₹32ರ ವರೆಗೆ ದರವಿದೆ. ಆದರೆ ನಮ್ಮ ಹಾಲು ಒಕ್ಕೂಟ ಲೀಟರ್‌ಗೆ ಕೇವಲ ₹22 ನೀಡುತ್ತಿದೆ. ಇದರಿಂದ ರೈತರು ಕೃಷಿ ತೊರೆದು ಪಟ್ಟಣಕ್ಕೆ ವಲಸೆ ಹೋಗುವ ಸ್ಥಿತಿ ತಲೆದೋರಿದೆ’ ಎಂದರು.

ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಉಮಾ, ಉಪಾಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಕೃಷ್ಣಪ್ಪ ಪದಾಧಿಕಾರಿಗಳಾದ ರಾಮಾಂಜನಪ್ಪ, ಸೀಕಲ್ ರಮಣರೆಡ್ಡಿ, ಲಕ್ಷ್ಮಣ ರೆಡ್ಡಿ, ಮುನಿನಂಜಪ್ಪ, ನಾರಾಯಣಸ್ವಾಮಿ, ಟಿ.ಕೃಷ್ಣಪ್ಪ, ದೇವರಾಜು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !