ಬುಧವಾರ, ಆಗಸ್ಟ್ 21, 2019
25 °C
ಕಾರವಾರ: ಕೊಡಸಳ್ಳಿ ಅಣೆಕಟ್ಟೆಯಲ್ಲಿ ಬಿರುಕು ಎಂದು ಹರಡಿದ ಸುಳ್ಳು ಸುದ್ದಿ

ವದಂತಿಗೆ ಕಿವಿಗೊಟ್ಟು ಊರು ಬಿಟ್ಟರು!

Published:
Updated:
Prajavani

ಕಾರವಾರ: ತಾಲ್ಲೂಕಿನ ಕೊಡಸಳ್ಳಿ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂಬ ವದಂತಿಗೆ ಬೆದರಿದ ಕದ್ರಾ ಮತ್ತು ಮಲ್ಲಾಪುರದ ಗ್ರಾಮಸ್ಥರು, ಗುರುವಾರ ಸುರಿಯುವ ಜೋರು ಮಳೆಯಲ್ಲೇ ಮನೆ ತೊರೆದರು. ಮಹಿಳೆಯರು ಸಣ್ಣ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಓಡೋಡಿ ಬಂದು ಕಣ್ಣೀರಿಟ್ಟರು.

ನಿರಂತರ ಮಳೆಯಿಂದ ಜಲಾಶಯದ ಜಲಾನಯನ ಪ್ರದೇಶದ ಕೆರೆಕಟ್ಟೆಗಳು ಕೋಡಿ ಬಿದ್ದು, ಜಲಾಶಯಕ್ಕೆ ಏಕಾಏಕಿ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂತು. ಇದೇ ವೇಳೆ, ಜಲಾಶಯದಿಂದ ಹೊರಹರಿವು ಕೂಡ ಸಿಕ್ಕಾಪಟ್ಟೆ ಏರಿಕೆ ಕಂಡಿತು. ಇದನ್ನು ನೋಡಿದ ಕೆಲವರು ಜಲಾಶಯವೇ ಬಿರುಕು ಬಿಟ್ಟಿದೆ ಎಂದು ಸುದ್ದಿ ಹಬ್ಬಿಸಿದರು.

ಕೊಡಸಳ್ಳಿ ಅಣೆಕಟ್ಟೆಯ ಕೆಳಭಾಗದಲ್ಲಿರುವ ಕದ್ರಾ ಅಣೆಕಟ್ಟೆಯಿಂದ ಕಾಳಿ ನದಿಗೆ ಮೂರು ದಿನಗಳಿಂದ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಅದರ ಪರಿಣಾಮವಾಗಿ ಕದ್ರಾ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಗ್ರಾಮದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ನೀರು ಸಂಗ್ರಹವಾಗಿದ್ದರಿಂದ ಆತಂಕಗೊಂಡಿದ್ದ ಗ್ರಾಮಸ್ಥರು, ಈ ವದಂತಿಯಿಂದ ಮತ್ತಷ್ಟು ಗಾಬರಿಯಾದರು. ತಮ್ಮ ಮನೆಗಳಲ್ಲಿ ಸಿಕ್ಕಿದ ವಸ್ತುಗಳನ್ನು ಗಂಟುಮೂಟೆ ಕಟ್ಟಿಕೊಂಡು ಉಟ್ಟಬಟ್ಟೆಯಲ್ಲೇ ಗ್ರಾಮ ತೊರೆದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಹಾಗೂ ಜಲಾಶಯದ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಜಲಾಶಯಗಳು ಸುರಕ್ಷಿತವಾಗಿವೆ, ತಮ್ಮ ಮನೆಗಳಿಗೆ ವಾಪಸ್ ಹೋಗಿ ಎಂದು ಧ್ವನಿವರ್ಧಕದ ಮೂಲಕವೂ ತಿಳಿಸಿದರು.

ಗ್ರಾಮದ ರಮೇಶ ಎಂಬುವವರು ಆಕ್ರೋಶಭರಿತರಾಗಿ, ‘ನಾವು 30 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಇಂತಹ ಸನ್ನಿವೇಶವನ್ನು ಎಂದೂ ಕಂಡಿರಲಿಲ್ಲ. ಮಕ್ಕಳು, ವೃದ್ಧರನ್ನು ಕರೆದುಕೊಂಡು ಓಡೋಡಿ ಬಂದಿದ್ದೇವೆ. ಅಧಿಕಾರಿಗಳೇನೋ ಏನೂ ಆಗಲ್ಲ ಎಂದು ಹೇಳುತ್ತಾರೆ. ನಾವು ಬಡವರು, ಏನಾದರೂ ಆದರೆ ಎಲ್ಲಿಗೆ ಹೋಗಬೇಕು’ ಎಂದು ಸುದ್ದಿಗಾರರನ್ನು ಕೇಳುತ್ತ, ಮಳೆಯಲ್ಲಿ ಸಂಪೂರ್ಣವಾಗಿ ತೊಯ್ದಿದ್ದ ತಮ್ಮ ಜೊತೆಗಿದ್ದ ಮೂರು ವರ್ಷದ ಬಾಲಕನ ತಲೆಯೊರೆಸಿದರು.

ಅಧಿಕಾರಿಗಳ ಮನವೊಲಿಕೆಯ ಬಳಿಕ ಕೆಲವರು ಗ್ರಾಮಕ್ಕೆ ವಾಪಸಾದರೆ, ಮತ್ತೆ ಕೆಲವರು ಜೊಯಿಡಾದತ್ತ ಸಿಕ್ಕಿದ ವಾಹನಗಳಲ್ಲಿ ಪ್ರಯಾಣಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಕಾಳಿ ನದಿಯ ಎಲ್ಲ ಜಲಾಶಯಗಳೂ ಸುರಕ್ಷಿತವಾಗಿವೆ. ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಚ್ಚರಿಕೆ ನೀಡಿದರು.

Post Comments (+)