ಬೆಂಗಳೂರು: ಮತದಾರರನ್ನು ಸೆಳೆಯಲು ಹಣ–ಹೆಂಡದ ಹೊಳೆ ಹರಿಸುವುದನ್ನು ಕೇಳಿದ್ದೀರಿ. ಸೀರೆ, ಬೆಡ್‌ಶೀಟ್, ಕುಕ್ಕರ್ ಹಂಚುವುದನ್ನೂ ನೋಡಿದ್ದೀರಿ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಚುನಾವಣೆ ವೇಳೆ ಹಂಚಲೆಂದೇ ಮಹಿಳೆಯೊಬ್ಬರು ಮಾದಕ ವಸ್ತುವನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ!
ಮಾರ್ಚ್ 21ರ ಮಧ್ಯಾಹ್ನ ಅಂಜನಪ್ಪ ಗಾರ್ಡನ್‌ನ ಮನೆಯೊಂದರ ಮಹಡಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ, ಗಸ್ತು ಪೊಲೀಸರನ್ನು ನೋಡುತ್ತಿದ್ದಂತೆಯೇ ನಿಧಾನಕ್ಕೆ ಹಿಂದೆ ಸರಿದಿದ್ದ. ಆತನ ಈ ನಡೆಯಿಂದ ಸಂಶಯಗೊಂಡ ಪೊಲೀಸರು, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳ ಜತೆ ಆ ಮನೆ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ನಂದಿನಿ ಅಲಿಯಾಸ್ ಅಮುಲ (28) ಎಂಬಾಕೆ ಸಣ್ಣ ಸಣ್ಣ ಕವರ್‌ಗಳಿಗೆ ಗಾಂಜಾ ಸೊಪ್ಪನ್ನು ತುಂಬುತ್ತ ಕೂತಿದ್ದಳು.
ನಂದಿನಿ ಮನೆಯಲ್ಲಿ 103 ಗಾಂಜಾ ಪೊಟ್ಟಣಗಳು, 250 ಖಾಲಿ ಕವರ್‌ಗಳು, ಪ್ಯಾಕಿಂಗ್ ಮಾಡಲು ಬಳಸುತ್ತಿದ್ದ ಹೀಟಿಂಗ್ ಮೆಷಿನ್,ಗಾಂಜಾ ಗಿಡದ ಕಾಂಡಗಳು, ಬಿಯರ್ ಬಾಟಲಿಗಳು ಹಾಗೂ ₹ 33 ಸಾವಿರ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ ಆಕೆಯ ಸ್ನೇಹಿತ ಪೂಸುಕುಟ್ಟಿ (32) ಕಟ್ಟಡದಿಂದ ಜಿಗಿದು ಪರಾರಿಯಾಗಿದ್ದಾನೆ.
‘ಚುನಾವಣೆ ಸಮಯದಲ್ಲಿ ಹೆಚ್ಚಿನ ಲಾಭಕ್ಕೆ ಮಾರಲು ಹಾಗೂ ಮತದಾರರ ಓಲೈಕೆಗೆ ವಿವಿಧ ಪಕ್ಷಗಳ ಕಾರ್ಯಕರ್ತರಿಗೆ ಕೊಡಲು ಗಾಂಜಾ ಪೊಟ್ಟಣಗಳನ್ನು ಸಿದ್ಧಪಡಿಸುತ್ತಿದ್ದೆ’ ಎಂದು ನಂದಿನಿ ಹೇಳಿಕೆ ಕೊಟ್ಟಿದ್ದಾಳೆ. ಆದರೆ, ನಿರ್ದಿಷ್ಟವಾಗಿ ಯಾರ‍್ಯಾರು ಈಕೆಯಿಂದ ಡ್ರಗ್ಸ್ ಖರೀದಿಸುತ್ತಿದ್ದರು ಎಂಬುದನ್ನು ಆಕೆ ಬಾಯ್ಬಿಡುತ್ತಿಲ್ಲ. ವಿಶೇಷ ತಂಡವು ಪೂಸುಕುಟ್ಟಿಯ ಬಂಧನಕ್ಕೆ ಶೋಧ ನಡೆಸುತ್ತಿದೆ ಎಂದು ಕಾಟನ್‌ಪೇಟೆ ಪೊಲೀಸರು ಹೇಳಿದರು.
ಟ್ಯಾಂಕ್ ಹಿಂದೆ ಬಚ್ಚಿಟ್ಟಿದ್ದರು: ಹಲವು ವರ್ಷಗಳಿಂದ ಈ ದಂಧೆ ನಡೆಸುತ್ತಿರುವ ನಂದಿನಿ ಹಾಗೂ ಪೂಸುಕುಟ್ಟಿ, ಏಜೆಂಟ್‌ಗಳ ಮೂಲಕ ಚಾಮರಾಜನಗರ, ಚಂದಾಪುರ ಹಾಗೂ ಆಂಧ್ರಪ್ರದೇಶದ ಕೆಲ ಭಾಗಗಳಿಂದ ಗಾಂಜಾ ತರಿಸಿಕೊಳ್ಳುತ್ತಿದ್ದರು. ನಂತರ ಪೊಟ್ಟಣ ಕಟ್ಟಿ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾರುತ್ತಿದ್ದರು. ಚುನಾವಣೆ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತದೆ ಎಂದು ಮೊದಲೇ ಪೊಟ್ಟಣಗಳನ್ನು ಕಟ್ಟಿ, ಅದನ್ನು ಮಹಡಿಯಲ್ಲಿರುವ ನೀರಿನ ಟ್ಯಾಂಕ್ ಹಿಂಭಾಗದಲ್ಲಿ ಬಚ್ಚಿಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಮಾರ್ಚ್ 21ರ ಮಧ್ಯಾಹ್ನ 2.30ರ ಸುಮಾರಿಗೆ ಕಾಟನ್‌ಪೇಟೆ ಪಿಎಸ್‌ಐ ಡಿ.ಮೂರ್ತಿ ಸಿಬ್ಬಂದಿ ಜತೆ ಗಸ್ತು ತಿರುಗುತ್ತಿದ್ದರು. ಅವರನ್ನು ಕಂಡ ಪೂಸುಕುಟ್ಟಿ, ಕೈಲಿದ್ದ ಗಾಂಜಾದ ಬ್ಯಾಗನ್ನು ಬೇರೆಡೆ ಎಸೆದಿದ್ದ. ಅದನ್ನು ನೋಡಿದ ಪೊಲೀಸರು, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಾದ ಬಿ.ಒ.ದಿಲೀಪ್ ಕುಮಾರ್ ಹಾಗೂ ರಘುನಂದನ್ ಅವರಿಗೆ ವಿಷಯ ತಿಳಿಸಿದ್ದರು. ಅವರು ಸ್ಥಳಕ್ಕೆ ಬರುತ್ತಿದ್ದಂತೆಯೇ ಮನೆ ಮೇಲೆ ದಾಳಿ ನಡೆಸಿದ್ದರು.
ಅಡುಗೆ ಕೋಣೆಯಲ್ಲಿ ಬಿಯರ್ ಬಾಟಲಿಗಳು!
ಕೆಲ ಸ್ಥಳೀಯರನ್ನು ವಿಚಾರಣೆ ನಡೆಸಿದಾಗ ನಂದಿನಿ ಡ್ರಗ್ಸ್ ಮಾತ್ರವಲ್ಲದೆ, ಹೆಚ್ಚಿನ ಬೆಲೆಗೆ ಮದ್ಯವನ್ನೂ ಮಾರುತ್ತಾಳೆ ಎಂಬ ಮಾಹಿತಿ ಸಿಕ್ಕಿತು. ಇಡೀ ಮನೆಯನ್ನು ಶೋಧ ನಡೆಸಿದಾಗ ಅಡುಗೆ ಕೋಣೆಯಲ್ಲಿದ್ದ ಕೈಚೀಲ ಒಂದರಲ್ಲಿ 15 ಬಿಯರ್ ಬಾಟಲಿಗಳು ಹಾಗೂ ಓಲ್ಡ್ ತವರಿನ್ ವಿಸ್ಕಿ ಬ್ರ್ಯಾಂಡ್‌ನ 20 ಸ್ಯಾಷೆಗಳು ಪತ್ತೆಯಾದವು. ಹೀಗಾಗಿ, ಅಬಕಾರಿ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.