ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಕರನಿಗಾಗಿ ಗಂಡನನ್ನೇ ಕೊಂದಳು

ಸೋಲದೇವನಹಳ್ಳಿ ಪೊಲೀಸರಿಂದ ಆರೋಪಿಗಳ ಬಂಧನ
Last Updated 18 ಮಾರ್ಚ್ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟದ ದಾಸೇನಹಳ್ಳಿಯಲ್ಲಿ 2018ರಲ್ಲಿ ನಡೆದಿದ್ದ ಉಮಾಶಂಕರ್ ಎಂಬುವರ ಕೊಲೆ ಪ್ರಕರಣವನ್ನು ವರ್ಷದ ಬಳಿಕ ಭೇದಿಸಿರುವ ಸೋಲದೇವನಹಳ್ಳಿ ಪೊಲೀಸರು, ಉಮಾಶಂಕರ್‌ ಅವರ ಪತ್ನಿ ಸುಖಿತಾ (30) ಹಾಗೂ ಆಕೆಯ ಪ್ರಿಯಕರ ಶ್ರೀನಿವಾಸ್‌ನನ್ನು (31) ಭಾನುವಾರ ಬಂಧಿಸಿದ್ದಾರೆ.

‘ಗಾರೆ ಕೆಲಸ ಮಾಡುತ್ತಿದ್ದ ಉಮಾಶಂಕರ್, 2018ರ ಫೆ. 25ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಚಿಕ್ಕಪ್ಪ ಅಶ್ವತ್ಥಪ್ಪ ದೂರು ನೀಡಿದ್ದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ಸುಖಿತಾ ಹಾಗೂ ಶ್ರೀನಿವಾಸ್ ನಡುವೆ ಅನೈತಿಕ ಸಂಬಂಧವಿತ್ತು. ಅದು ಗೊತ್ತಾಗುತ್ತಿದ್ದಂತೆ ಪತಿ ಉಮಾಶಂಕರ್, ಪತ್ನಿಗೆ ಎಚ್ಚರಿಸಿದ್ದರು. ಅವರು ಬದುಕಿದರೆ ತಮ್ಮ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲವೆಂದು ತಿಳಿದ ಆರೋಪಿಗಳು, ಅವರ ಬಾಯಿ, ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದರು’ ಎಂದು ತಿಳಿಸಿದರು.

ಎರಡು ವರ್ಷಗಳಿಂದ ಸಲುಗೆ: ‘ಉಮಾಶಂಕರ್ ಹಾಗೂ ಸುಖಿತಾ, 10 ವರ್ಷಗಳ ಹಿಂದೆ ಮದುವೆ ಆಗಿದ್ದರು. ದಂಪತಿ ತಮ್ಮಿಬ್ಬರು ಮಕ್ಕಳ ಜೊತೆ ದಾಸೇನಹಳ್ಳಿಯಲ್ಲಿ ವಾಸವಿದ್ದರು. ಅವರ ಪಕ್ಕದ ಮನೆಯಲ್ಲಿ ಶಾಲಾ ವಾಹನದ ಚಾಲಕ ಶ್ರೀನಿವಾಸ್‌ ನೆಲೆಸಿದ್ದ. ಆತನಿಗೆ ಮದುವೆ ಆಗಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಮದ್ಯವ್ಯಸನಿ ಉಮಾಶಂಕರ್, ನಿತ್ಯ ಕುಡಿದು ಬಂದು ಪತ್ನಿ ಜೊತೆ ಜಗಳ ಮಾಡುತ್ತಿದ್ದರು. ಸುಖಿತಾಳನ್ನು ಸಮಾಧಾನಪಡಿಸುವ ನೆಪದಲ್ಲಿ ಹತ್ತಿರವಾಗಿದ್ದ ಶ್ರೀನಿವಾಸ್. ಎರಡು ವರ್ಷಗಳಿಂದ ಅವರಿಬ್ಬರು ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು’ ಎಂದರು.

ಏಕಾಂತದಲ್ಲಿದ್ದಾಗ ನೋಡಿದ್ದ ಪತಿ: ‘2018ರ ಫೆ. 25ರಂದು ಸುಖಿತಾ, ಶ್ರೀನಿವಾಸ್‌ ಇಬ್ಬರೂ ಒಟ್ಟಿಗಿದ್ದರು. ತಡರಾತ್ರಿ ಉಮಾಶಂಕರ್, ಅವರಿಬ್ಬರನ್ನು ನೋಡಿ ಗಲಾಟೆ ಮಾಡಿದ್ದರು. ಗಾಬರಿಗೊಂಡ ಆರೋಪಿಗಳು, ಅವರನ್ನೇ ಕೊಲೆ ಮಾಡಿದ್ದರು’ ಸೋಲದೇವನಹಳ್ಳಿ ಪೊಲೀಸರು ಹೇಳಿದರು.

ವರದಿಯಿಂದ ರಹಸ್ಯ ಬಯಲು: ‘ಪತಿ ಕುಡಿದ ಅಮಲಿನಲ್ಲಿ ಸಾವನ್ನಪ್ಪಿದ್ದಾರೆಂದು ಬೆಳಿಗ್ಗೆ ಸುಖಿತಾ ಅಳಲಾರಂಭಿಸಿದ್ದರು. ಆಕೆಯ ಮಾತನ್ನು ಸ್ಥಳೀಯರು ನಂಬಿದ್ದರು. ಆದರೆ, ಉಮಾಶಂಕರ್ ಚಿಕ್ಕಪ್ಪ ಅಶ್ವತಪ್ಪ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಸಿಬ್ಬಂದಿ, ಶವವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಪರೀಕ್ಷೆ ನಡೆಸಿದ್ದ ವೈದ್ಯರು, ದೇಹದ ಕೆಲ ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿದ್ದರು. ‘ಉಮಾಶಂಕರ್‌ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ’ ಎಂದು ಎಫ್‌ಎಸ್‌ಎಲ್‌ ವರದಿ ನೀಡಿತ್ತು. ಅದನ್ನು ಆಧರಿಸಿಸುಖಿತಾಳನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಳು’ ಎಂದರು.

**

ಮುಂದುವರಿದ ಅನೈತಿಕ ಸಂಬಂಧ

‘ಉಮಾಶಂಕರ್‌ ಅಂತ್ಯಕ್ರಿಯೆ ಬಳಿಕ ಸುಖಿತಾ, ದಾಸೇನಹಳ್ಳಿಯ ಮನೆಯಲ್ಲೇ ಮಕ್ಕಳ ಜೊತೆ ವಾಸವಿದ್ದರು. ನಿತ್ಯವೂ ಆಕೆಯ ಮನೆಗೆ ಶ್ರೀನಿವಾಸ್ ಬಂದು ಹೋಗುತ್ತಿದ್ದ. ಮಕ್ಕಳಿಗೆ ತಿನಿಸುಗಳನ್ನು ಕೊಡಿಸಿ ಹತ್ತಿರವಾಗಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT