ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಹೋರಾಟಕ್ಕೆ ಸ್ಪಂದಿಸದ ಜೋಶಿ: ಅಮೃತ್ ಇಜಾರಿ

'ಕಾಂಗ್ರೆಸ್– ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಗೆಲ್ಲಿಸಲು ನಿರ್ಧಾರ'
Last Updated 21 ಏಪ್ರಿಲ್ 2019, 12:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹದಾಯಿ, ಕಳಸಾ– ಬಂಡೂರಿ ಯೋಜನೆ ಜಾರಿಗೆ ಐತಿಹಾಸಿಕ ಹೋರಾಟ ನಡೆದರೂ ಅದಕ್ಕೆ ಸ್ಪಂದಿಸದೆ ನೀಚ ರಾಜಕಾರಣ ಮಾಡಿದ, ಹೋರಾಟಗಾರರನ್ನು ಗೂಂಡಾಗಳೆಂದು ನಿಂದಿಸಿ ಪ್ರಕರಣ ದಾಖಲಿಸಲು ಕುಮ್ಮಕ್ಕು ನೀಡಿದ ಸಂಸದ ಪ್ರಹ್ಲಾದ ಜೋಶಿ ಅವರನ್ನು ಈ ಬಾರಿ ಸೋಲಿಸಲು ತೀರ್ಮಾನಿಸಲಾಗಿದೆ’ ಎಂದು ಮಹದಾಯಿ ಕಳಸಾ– ಬಂಡೂರಿ ಹೋರಾಟ ಸಮನ್ವಯ ಸಮಿತಿ ಸಂಚಾಲಕ ಅಮೃತ್ ಇಜಾರಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘15 ವರ್ಷದಿಂದ ಸಂಸದರಾಗಿರುವ ಜೋಶಿ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈ ಭಾಗದ ಅಭಿವೃದ್ಧಿಗೆ ವಿಶೇಷ ಪ್ರಯತ್ನ ಮಾಡಿಲ್ಲ. ಅಲ್ಲದೆ, ಅಂತರ್‌ರಾಜ್ಯ ನದಿ ನೀರು ಹಂಚಿಕೆ ಸಮಸ್ಯೆ ಸಂದರ್ಭದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿ, ಸಮಸ್ಯೆ ಪರಿಹರಿಸಲು ಸಹ ಯತ್ನಿಸಿಲ್ಲ. ಆದ್ದರಿಂದ ಈ ಬಾರಿ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ. ಅವರು ಸಹ ರೈತರ ಪರ ಹೋರಾಟ ಮಾಡುವ ಭರವಸೆ ನೀಡಿದ್ದಾರೆ’ ಎಂದರು.

‘ಮಹದಾಯಿ ನದಿ ನೀರು ಹಂಚಿಕೆ ಬಗ್ಗೆ ನ್ಯಾಯಾಧೀಕರಣದ ತೀರ್ಪು ನೀಡಿದೆ. ರಾಜ್ಯ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ತೀರ್ಪಿನ ಅಧಿಸೂಚನೆ ಹೊರಡಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಪತ್ರ ಬರೆದರೂ ಕೇಂದ್ರ ಸ್ಪಂದಿಸುತ್ತಿಲ್ಲ. ಆದ್ದರಿಂದ ಮಲಪ್ರಭಾ ಅಚ್ಚುಕಟ್ಟು ಭಾಗದ ರೈತರು ಈ ಬಾರಿ ಬದಲಾವಣೆ ಬಯಸಿದ್ದಾರೆ’ ಎಂದು ಹೇಳಿದರು.

ಮಹದಾಯಿ, ಕಳಸಾ– ಬಂಡೂರಿ ಹೋರಾಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಸಂಸದ ಪ್ರಹ್ಲಾದ ಜೋಶಿ ಅವರು ಬರೆದುಕೊಟ್ಟರೆ ಅವರನ್ನು ಬೆಂಬಲಿಸಲಾಗುವುದು ಎಂದು ಅಮೃತ್ ಇಜಾರಿ ತಿಳಿಸಿದರು.

ಮುಖಂಡರಾದ ಶಿವಣ್ಣ ಹುಬ್ಬಳ್ಳಿ, ಡಿ.ಜಿ. ಜಂತ್ಲಿ, ಸುರೇಶಗೌಡ ಪಾಟೀಲ, ಎಂ.ಎಚ್‌. ಮುಲ್ಲಾ, ನಾಗರಾಜ ಬಡಿಗೇರ, ವಿನಯ್ ಗೋಕಾವಿ, ನಾಗಭೂಷಣ ಕಾಳೇ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT