‘ಕರಾಚಿ’ ಹೆಸರು ತೆಗೆಯುವಂತೆ ಗಲಾಟೆ

ಸೋಮವಾರ, ಮೇ 27, 2019
23 °C

‘ಕರಾಚಿ’ ಹೆಸರು ತೆಗೆಯುವಂತೆ ಗಲಾಟೆ

Published:
Updated:
Prajavani

ಬೆಂಗಳೂರು: ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ‘ಕರಾಚಿ’ ಬೇಕರಿ ಆ್ಯಂಡ್ ಕೆಫೆ ಎದುರು ಶುಕ್ರವಾರ ರಾತ್ರಿ ದಿಢೀರ್ ಗಲಾಟೆ ನಡೆಸಿದ ಯುವಕರ ಗುಂಪು, ಅಂಗಡಿಯ ಫಲಕದಲ್ಲಿರುವ ‘ಕರಾಚಿ’ ಹೆಸರು ಅಳಿಸಿ ಹಾಕುವಂತೆ ಒತ್ತಾಯಿಸಿತು.

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಘೋಷಣೆ ಕೂಗಿದ ಯುವಕರು, ‘ಪಾಕಿಸ್ತಾನದ ಕರಾಚಿ ಹೆಸರಿನಲ್ಲಿ ಇಂದಿರಾನಗರದಲ್ಲಿ ವ್ಯಾಪಾರ ಮಾಡುವುದು ಬೇಡ. ಕೂಡಲೇ ‘ಕರಾಚಿ’ ಹೆಸರು ತೆಗೆದು ಹಾಕಿ. ಇಲ್ಲದಿದ್ದರೆ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ಎಂದರು. ಬೇಕರಿ ಸಿಬ್ಬಂದಿ ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಬೇಕರಿ ಮಾಲೀಕ, ‘1953ರಿಂದ ಈ ಬೇಕರಿ ನಡೆಸುತ್ತಿದ್ದೇವೆ. ನೀವೆಲ್ಲರೂ ದಿಢೀರ್‌ ಬಂದು ಹೆಸರು ಕಿತ್ತುಹಾಕುವಂತೆ ಪ್ರತಿಭಟನೆ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

ಯುವಕರು, ‘ನಿಮ್ಮ ವ್ಯಾಪಾರಕ್ಕೆ ನಮ್ಮ ವಿರೋಧವಿಲ್ಲ. ದೇಶದ ಯೋಧರ ಸಾವಿಗೆ ಕಾರಣವಾದ ಪಾಕಿಸ್ತಾನ ನಗರದ ಹೆಸರು ನಮಗೆ ಬೇಕಿಲ್ಲ. ಅದನ್ನು ಕಿತ್ತು ಹಾಕಿ ವ್ಯಾಪಾರ ಮಾಡಿ’ ಎಂದು ಒತ್ತಾಯಿಸಿದರು.

ಯುವಕರ ಮಾತಿಗೆ ಒಪ್ಪಿದ ಮಾಲೀಕ, ಫಲಕದಲ್ಲಿ ಇಂಗ್ಲಿಷ್‌ನಲ್ಲಿದ್ದ ‘ಕರಾಚಿ’ ಅಕ್ಷರಗಳ ಮೇಲೆ ಬ್ಯಾನರ್‌ ಮುಚ್ಚಿದರು. ಅದರ ಮೇಲಿನ ಗಾಜಿಗೆ ತ್ರಿವರ್ಣ ಧ್ವಜವನ್ನು ಕಟ್ಟಿ ಪರಿಸ್ಥಿತಿ ತಿಳಿಗೊಳಿಸಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಲು ಮಾಲೀಕರು ನಿರಾಕರಿಸಿದರು.

‍ಪೊಲೀಸರಿಂದ ಪರಿಶೀಲನೆ: ವಿಷಯ ತಿಳಿದ ಹೊಯ್ಸಳ ಗಸ್ತು ವಾಹನದ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಯುವಕರು ಹೊರಟುಹೋಗಿದ್ದರು. ಬೇಕರಿಯ ಸಿಬ್ಬಂದಿ ಹಾಗೂ ಮಾಲೀಕರಿಂದ ಮಾಹಿತಿ ಪಡೆದ ಪೊಲೀಸರು, ಠಾಣೆಗೆ ಬರುವಂತೆ ಸೂಚಿಸಿ ಹೋದರು. 

‘ಬೇಕರಿಗೆ ಬಂದಿದ್ದ ಯುವಕರು ಯಾರು ಎಂಬುದು ಗೊತ್ತಾಗಿಲ್ಲ. ಮಾಲೀಕರು ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಇಂದಿರಾನಗರ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 26

  Happy
 • 3

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !