ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ತಿದ್ದುಪಡಿಗೆ ಅಭ್ಯಂತರವಿಲ್ಲ: ಹೈಕೋರ್ಟ್

Last Updated 23 ಮಾರ್ಚ್ 2019, 18:54 IST
ಅಕ್ಷರ ಗಾತ್ರ

ಬೆಂಗಳೂರು: ‘ಜನನ, ಮರಣ ದಾಖಲೆಗಳಲ್ಲಿ ಹೆಸರು ತಪ್ಪಾಗಿ ನಮೂದಾಗಿದೆ ಎಂದು ಆಕ್ಷೇಪಿಸಿ, ತಿದ್ದುಪಡಿ ಮಾಡುವಂತೆ ಕೋರುವ ಅರ್ಜಿಗಳನ್ನು ಜನನ, ಮರಣ ನೋಂದಣಿ ಇಲಾಖೆ ಪರಿಗಣಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಹಲಸೂರಿನ ಲಕ್ಷ್ಮೀಪುರಂದ ಸಂಜಿಬ್‌ ದಾಸ್‌ ದಂಪತಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ನ್ಯಾಯಪೀಠ ಮಾನ್ಯ ಮಾಡಿದೆ.

‘ಆದೇಶದ ಪ್ರತಿ ತಲುಪಿದ ಆರು ವಾರಗಳಲ್ಲಿ ಅರ್ಜಿದಾರರ ಮನವಿಯನ್ನು ಪರಿಗಣಿಸಿ’ ಎಂದು ಬಿಬಿಎಂಪಿ ವ್ಯಾಪ್ತಿಯ ಜನನ ಮರಣ ನೋಂದಾಣಾಧಿಕಾರಿಗೆ ನಿರ್ದೇಶಿಸಿದೆ.

ಪ್ರಕರಣವೇನು?: ‘ಜನನ ಪ್ರಮಾಣ ಪತ್ರದಲ್ಲಿ ನಮ್ಮ ಹೆಸರುಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಇದನ್ನು ತಿದ್ದುಪಡಿ ಮಾಡಬೇಕು’ ಎಂದು ಕೋರಿ ಮಗುವಿನ ಪೋಷಕರು ಅರ್ಜಿ ಸಲ್ಲಿಸಿದ್ದರು.

ತಿದ್ದುಪಡಿಗೆ ಅನುವಾಗುವಂತೆ ತಮ್ಮ ಆಧಾರ್ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ಪಾನ್‌ ಕಾರ್ಡ್‌ ಮತ್ತು ತಮ್ಮ ಮಗನ ಶೈಕ್ಷಣಿಕ ದಾಖಲೆಗಳನ್ನೂ ಸಲ್ಲಿಸಿದ್ದರು. ಆದರೆ ನೋಂದಣಾಧಿಕಾರಿ, ‘ತಂದೆಯ ಎರಡು ಹೆಸರು ಒಬ್ಬರದೇ ಎಂದು ಪುಷ್ಟೀಕರಿಸುವ ದಾಖಲೆ ಸಲ್ಲಿಸದಿರುವುದರಿಂದ ತಿದ್ದುಪಡಿ ಸಾಧ್ಯವಿಲ್ಲ’ ಎಂಬ ಹಿಂಬರಹ ನೀಡಿದ್ದರು.ಇದನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘2008ರ ಜನನ ಪ್ರಮಾಣ ಪತ್ರಕ್ಕೆ 2018ರಲ್ಲಿ ತಿದ್ದುಪಡಿ ಕೋರುವ ಮೂಲಕ ಅರ್ಜಿದಾರರು ತುಂಬಾ ತಡ ಮಾಡಿದ್ದಾರೆ’ ಎಂದು ಆಕ್ಷೇಪಿಸಿದ್ದರು.

ಬಬಿಎಂಪಿ ಪರ ವಕೀಲರ ವಾದವನ್ನು ಒಪ್ಪದ ನ್ಯಾಯಪೀಠ, ‘ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ–1969ರ ಕಲಂ 15ರ ಅನುಸಾರ ತಿದ್ದುಪಡಿ ಮಾಡುವಂತೆ ಕೋರುವ ಅರ್ಜಿಗಳನ್ನು ಮಾನ್ಯ ಮಾಡಲು ಯಾವುದೇ ಅಭ್ಯಂತರವಿಲ್ಲ. ಈ ಕುರಿತಂತೆ 1999ರ ನಿಯಮಗಳ ಅಡಿಯಲ್ಲಿ ನೋಂದಣಾಧಿಕಾರಿಗೆ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಿಲೇವಾರಿ ಮಾಡಿದೆ.

ಅರ್ಜಿದಾರರ ಪರ ಎನ್‌.ಎಸ್‌.ಸಂಜಯಗೌಡ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT