ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

7
ಸಂಚಾರ ಸಮಸ್ಯೆಗಳಿಗೆ ಚಿಕಿತ್ಸೆ

ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

Published:
Updated:

ಬೆಂಗಳೂರು: ರಾಜಧಾನಿ ನಿವಾಸಿಗಳ ಬದುಕು ಹೈರಾಣಾಗುವಂತೆ ಮಾಡುತ್ತಿರುವ ಸಂಚಾರ ಸಮಸ್ಯೆಗಳನ್ನು ಸಮಗ್ರವಾಗಿ ಗುರುತಿಸಿರುವ ಸರ್ಕಾರ ಇದರ ಪರಿಹಾರಕ್ಕೆ ‘ಚಲನಶೀಲ ಬೆಂಗಳೂರು’ ಯೋಜನೆ ಪ್ರಕಟಿಸಿದೆ. ನೀರಿನ ಬವಣೆ ನಿವಾರಿಸಲು ಅರ್ಕಾವತಿ, ದಕ್ಷಿಣ ಪಿನಾಕಿನಿ ನದಿಗಳ ಪುನಶ್ಚೇತನಗೊಳಿಸಲು ಮುಂದಾಗಿದ್ದು, ಇದಕ್ಕೆ ‘ಮತ್ತೊಂದು ಕಾವೇರಿ’ ಯೋಜನೆ ಎಂದು ಹೆಸರಿಸಿದೆ.  

ಬೆಂಗಳೂರು ಚಲನಶೀಲತೆಗಾಗಿ (ಮೊಬಿಲಿಟಿ) ಒಂದು ಸಮಗ್ರ ಯೋಜನೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಿರುವುದಾಗಿ ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಸಾರ್ವಜನಿಕ ಸಾರಿಗೆ ಮತ್ತು ಸುಸ್ಥಿರತೆ ಮೇಲೆ ಕೇಂದ್ರೀಕರಿಸುವ ಮೂಲಕ ಖಾಸಗಿ ವಾಹನಗಳ ಸಂಚಾರವನ್ನು ಕಡಿಮೆಗೊಳಿಸುವುದು, ಹೊಸ ಪಾರ್ಕಿಂಗ್ ನೀತಿ, ಈ ಯೋಜನೆಯ ಅತ್ಯಂತ ಮುಖ್ಯ ಅಂಶ.

ಹೆಚ್ಚು ದೂರ ಕ್ರಮಿಸಲು ಮೆಟ್ರೊ ಮತ್ತು ಬಸ್ ಕಾರಿಡಾರ್‌ಗಳನ್ನು ಹಾಗೂ ಅಲ್ಪ ದೂರ ಕ್ರಮಿಸಲು ಸೈಕಲ್‌ ಬಳಕೆ ಅಥವಾ ನಡಿಗೆಯನ್ನು ಉತ್ತೇಜಿಸುವಂತೆ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಬಸ್‌, ನಮ್ಮ ಮೆಟ್ರೊ, ಪಾದಚಾರಿ ಮಾರ್ಗ, ಸೈಕಲ್‌ ಪಥ ಮುಂತಾದ ಅಂಶಗಳನ್ನೂ ಈ ಯೋಜನೆ ಒಳಗೊಳ್ಳಲಿದೆ. ಬಿ.ಎಂ.ಟಿ.ಸಿ. ಬಸ್‍ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಆದರೆ ಇದಕ್ಕೆ  ಮುಂದಿನ ವರ್ಷಗಳಲ್ಲಿ ಅನುದಾನ ಒದಗಿಸಲಾಗುವುದು ಎಂದಿದ್ದಾರೆ. 

ಬಹುಚರ್ಚಿತ ಉಕ್ಕಿನ ಸೇತುವೆ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವೇ ಇಲ್ಲ. ಎಲಿವೇಟೆಡ್‌ ಕಾರಿಡಾರ್‌ಗೆ  ಈ ಬಾರಿ ಮತ್ತೆ ಅನುದಾನ ಒದಗಿಸಿರುವುದು ಈ ಯೋಜನೆಯನ್ನು ವಿರೋಧಿಸುತ್ತಿದ್ದವರ ಕಣ್ಣು ಕೆಂಪಗಾಗಿಸಿದೆ.

ಪಾದಚಾರಿ ಸ್ನೇಹಿ ಹೆಜ್ಜೆ: ಈ ವರ್ಷ ಕನಿಷ್ಠ 50 ಕಿ.ಮೀ ವ್ಯಾಪ್ತಿಯಲ್ಲಿ ಕಾಲುದಾರಿಗಳನ್ನು ಪಾದಚಾರಿಸ್ನೇಹಿಯನ್ನಾಗಿ ಅಭಿವೃದ್ಧಿಪಡಿಸಲು ₹ 50 ಕೋಟಿ ಒದಗಿಸಲಾಗಿದೆ. ಪ್ರಮುಖ ವಾಣಿಜ್ಯ ರಸ್ತೆಗಳಾದ ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಗಳನ್ನು ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತಿಸುವ ಪ್ರಸ್ತಾವವೂ ಬಜೆಟ್‌ನಲ್ಲಿದೆ.

ತ್ಯಾಜ್ಯಮುಕ್ತ ನಗರ: ನಗರವನ್ನು ತ್ಯಾಜ್ಯಮುಕ್ತಗೊಳಿಸುವ ನಿಟ್ಟಿನಲ್ಲಿ  ಕೆ.ಪಿ.ಸಿ.ಎಲ್. ವತಿಯಿಂದ ಕಸದಿಂದ ವಿದ್ಯುತ್ ಉತ್ಪಾದನೆ
ಮಾಡುವ 400 ಮೆಟ್ರಿಕ್ ಟನ್ ಸಾಮರ್ಥ್ಯದ ಘಟಕ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಕಸದಿಂದ
ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಲಾಗಿದೆ.

ಟ್ರಾನ್ಸಿಟ್‌ ಹಬ್‌: ನಗರ ರಸ್ತೆಗಳ ದಟ್ಟಣೆಯನ್ನು ತಗ್ಗಿಸಲು ಹೆಬ್ಬಾಳ, ಬೈಯಪ್ಪನಹಳ್ಳಿ, ಕೆ.ಆರ್.ಪುರ, ಕಾಡುಗೋಡಿ, ಚಲ್ಲಘಟ್ಟ ಮತ್ತು ಪೀಣ್ಯಗಳಲ್ಲಿ ಬಹುಮಾದರಿ ಪ್ರಯಾಣ ಹಬ್ (ಮಲ್ಟಿ ಮಾಡೆಲ್‌ ಟ್ರಾನ್ಸಿಟ್‌ ಹಬ್‌) ಸ್ಥಾಪಿಸಲು ಕಾರ್ಯಸಾಧ್ಯತಾ ವರದಿ ಹಾಗೂ ವಿನ್ಯಾಸಗಳನ್ನು ಸಿದ್ಧಪಡಿಸುವ ಪ್ರಸ್ತಾವ ಆಯವ್ಯದಲ್ಲಿದೆ.

ಯಶವಂತಪುರ, ಬನಶಂಕರಿ, ವಿಜಯನಗರ, ಪೀಣ್ಯ ಮತ್ತು ಇತರೆ ಪ್ರದೇಶಗಳಲ್ಲಿ ತಡೆರಹಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ನಮ್ಮ ಮೆಟ್ರೊ ಮತ್ತು ಟಿ.ಟಿ.ಎಂ.ಸಿ ಸಂಪರ್ಕಕ್ಕೆ ಮೂಲಸೌಕರ್ಯ ಯೋಜನೆಯ ಉಲ್ಲೇಖವಿದೆ. ಆದರೆ, ಇದಕ್ಕೆ ತಗಲುವ ವೆಚ್ಚಗಳನ್ನು ನಮೂದಿಸಿಲ್ಲ. ನಮ್ಮ ಮೆಟ್ರೊ ಹಾಗೂ ಬಿಬಿಎಂಪಿಗೆ ಬಜೆಟ್‌ನಲ್ಲಿ ಪ್ರಕಟಿಸಿರುವ ಬಹುತೇಕ ಯೋಜನೆಗಳು ಈಗಾಗಲೇ ಘೋಷಣೆ ಆಗಿರುವಂತಹವು. ಅವುಗಳಿಗೆ ಮೀಸಲಿಟ್ಟ ಅನುದಾನದಲ್ಲಿ ಈ ಸಾಲಿನ ಕಂತನ್ನು ಬಿಡುಗಡೆ ಮಾಡಲಾಗಿದೆ. ‘ನವ ಬೆಂಗಳೂರು’ ಯೋಜನೆಯಡಿ ನಗರದ ಅಭಿವೃದ್ಧಿಗೆ ಮೂರು ವರ್ಷಗಳ ಅವಧಿಗೆ ₹ 8,015 ಕೋಟಿ ಅನುದಾನ ನೀಡುವುದಾಗಿ ಈ ಹಿಂದೆಯೇ ಮುಖ್ಯಮಂತ್ರಿ ಪ್ರಕಟಿಸಿದ್ದರು. ಈ ವರ್ಷದ ಕಂತು ಮಂಜೂರು ಮಾಡಿದ್ದಾರೆ.

ತಿಪ್ಪಗೊಂಡನಹಳ್ಳಿ ಜಲಾಶಯದ ಪುನಶ್ಚೇತನ, ನಗರದ ವಿವಿಧ ಭಾಗಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಬಜೆಟ್‌ ಆದ್ಯತೆ ನೀಡಿದೆ. 2020ರ ವೇಳೆಗೆ ಬೆಂಗಳೂರು ನಗರದಲ್ಲಿ 1,700 ಎಂಎಲ್‌ಡಿಗೂ ಹೆಚ್ಚು ತ್ಯಾಜ್ಯ ನೀರು ಸಂಸ್ಕರಣಾ ಸಾಮರ್ಥ್ಯ ಸೃಷ್ಟಿಯಾಗುವ ನಿರೀಕ್ಷೆ ಇದೆ. ನಗರದ ತ್ಯಾಜ್ಯನೀರನ್ನು ಸಂಪೂರ್ಣ ಸಂಸ್ಕರಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಬಿಬಿಎಂಪಿಗೆ ಎಷ್ಟು ಅನುದಾನ?

* ₹ 300 ಕೋಟಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುತ್ತಿರುವ ಅಧಿಸೂಚಿತ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಮಂಜೂರಾದ ಅನುದಾನ

* ₹ 50 ಕೋಟಿ ಬೆಂಗಳೂರಿನ ಆಟೋ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಆರಂಭಿಸಿರುವ ಬಾಡಿಗೆ ಆಧಾರದ ‘ಸಾರಥಿಯ ಸೂರು’ ವಸತಿ ಯೋಜನೆಗೆ ಮೀಸಲಿಟ್ಟ ಮೊತ್ತ

* ₹ 2,300 ಕೋಟಿ ‘ನವ ಬೆಂಗಳೂರು’ ಯೋಜನೆಗೆ ಕ್ರಿಯಾ ಯೋಜನೆಯ ಮೊದಲ ಕಂತು

* ₹ 1,000 ಕೋಟಿ ಆರು ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಈ ಸಾಲಿನಲ್ಲಿ ಮಂಜೂರು ಮಾಡಲಾಗಿದೆ

* 5 ಲಕ್ಷ ಬೀದಿದೀಪಗಳನ್ನು 3 ವರ್ಷಗಳಲ್ಲಿ ಹಂತ ಹಂತವಾಗಿ ಸ್ಮಾರ್ಟ್ ಎಲ್.ಇ.ಡಿ. ಬೀದಿ ದೀಪಗಳನ್ನಾಗಿ ಪರಿವರ್ತಿಸಿ ವಿದ್ಯುತ್‌ ಉಳಿತಾಯಕ್ಕೆ ಕ್ರಮ

* 10,000 ವಾಹನಗಳ ನಿಲುಗಡೆಗೆ 87 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ

* ಹೆಬ್ಬಾಳ ಮತ್ತು ಕೆ.ಆರ್.ಪುರ ಮಧ್ಯೆ ಮೇಲ್ಸೇತುವೆಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣಕ್ಕೆ ₹ 195 ಕೋಟಿ.

ಉಪನಗರ ಯೋಜನೆ ರೈಲು ಯೋಜನೆಗೆ ‘ಬಿ–ರೈಡ್‌’

ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಬೆಂಗಳೂರು ಉಪ ನಗರ ರೈಲು ಯೋಜನೆ ಅನುಷ್ಠಾನ. ‘2018ರ ಉಪನಗರ ರೈಲು ನೀತಿಗೆ ಮಾರ್ಪಾಡು ಮಾಡಲಾಗುತ್ತದೆ. ಈ ಯೋಜನೆಯ ಅನುಷ್ಠಾನಕ್ಕೆ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಹಾಗೂ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಬಿ–ರೈಡ್‌) ಸ್ಥಾಪನೆ.

* ₹ 23,093 ಕೋಟಿ ಉಪನಗರ ರೈಲು ಯೋಜನೆ ಅಂದಾಜು ಮೊತ್ತ

‘ನಮ್ಮ ಮೆಟ್ರೊ’ ನಿಲ್ದಾಣಕ್ಕೆ ಸಣ್ಣ ಬಸ್‌

* ನಮ್ಮ ಮೆಟ್ರೊ ಮತ್ತು ಬಿಎಂಟಿಸಿ ಬಸ್‌ಗಳೆರಡರಲ್ಲೂ ಬಳಸಬಹುದಾದ ಸ್ಮಾರ್ಟ್‌ ಚಾಲನೆ ಕಾರ್ಡ್‌ ಪರಿಚಯ

* 3 ಕೋಚ್‍ಗಳಿರುವ ಎಲ್ಲಾ 50 ಮೆಟ್ರೊ ರೈಲುಗಳನ್ನು 6 ಕೋಚ್‍ ರೈಲುಗಳನ್ನಾಗಿ ಪರಿವರ್ತಿಸುವುದು

* 10 ಮೆಟ್ರೊ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳಿಗೆ ವಿದ್ಯುತ್ ಚಾರ್ಜಿಂಗ್ ಸೌಕರ್ಯ

* ಕೊನೆಯ ತಾಣದ ಸಂಪರ್ಕಕ್ಕೆ 10 ಮೆಟ್ರೊ ನಿಲ್ದಾಣಗಳಲ್ಲಿ ಸಣ್ಣ ಸಾಮರ್ಥ್ಯದ ಬಿ.ಎಂ.ಟಿ.ಸಿ ಬಸ್‍ ಸೌಲಭ್ಯ

* ಯಶವಂತಪುರದಲ್ಲಿ ರೈಲ್ವೆ ಮತ್ತು ಮೆಟ್ರೊ ನಿಲ್ದಾಣಗಳ ನಡುವೆ ಪಾದಚಾರಿ ಮೇಲು ಸೇತುವೆ ನಿರ್ಮಾಣ

* ಸಿಲ್ಕ್ ಬೋರ್ಡ್‌–ಕೆ.ಆರ್.ಪುರ–ಹೆಬ್ಬಾಳ – ವಿಮಾನ ನಿಲ್ದಾಣ ಮಾರ್ಗ ನಿರ್ಮಾಣಕ್ಕೆ ₹ 16,579 ಕೋಟಿ

* ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಸಮೀಪದ ಪಟ್ಟಣಗಳಾದ ಬಿಡದಿ ಮತ್ತು ರಾಮನಗರದಿಂದ
ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಗೇರಿ ಮೆಟ್ರೊ ಜಾಲದ ಪಶ್ಚಿಮ ತುದಿಯನ್ನು ವಿಸ್ತರಿಸಿ ಚಲ್ಲಘಟ್ಟದಲ್ಲಿ ಹೆಚ್ಚುವರಿ ನಿಲ್ದಾಣ ನಿರ್ಮಾಣ

ಬಿಡಿಎ: ಪಿಆರ್‌ಆರ್‌ಗೆ ₹ 1 ಸಾವಿರ ಕೋಟಿ

ಬೆಂಗಳೂರು ನಗರ ವಾಹನ ದಟ್ಟಣೆ ನಿವಾರಣೆ ನಿಟ್ಟಿನಲ್ಲಿ ₹ 17,200 ಕೋಟಿ ವೆಚ್ಚದಲ್ಲಿ ಪೆರಿಫೆರಲ್ ರಿಂಗ್ ರಸ್ತೆಯನ್ನು (ನಿರ್ವಹಣಾ ವೆಚ್ಚ ಸೇರಿ) ನಿರ್ಮಿಸಲಾಗುತ್ತದೆ. ಈ ಯೋಜನೆಗೆ ಈ ಸಾಲಿನಲ್ಲಿ ₹ 1,000 ಕೋಟಿ ಮಂಜೂರು

ಅರ್ಕಾವತಿ, ದಕ್ಷಿಣ ಪಿನಾಕಿನಿಗೆ ಮರುಜೀವ

ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳಲ್ಲಿ ಮತ್ತೆ ನೀರು ಹರಿಯುವಂತೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ನದಿಗಳು ಮತ್ತೆ ಜೀವ ಕಳೆ ಪಡೆಯುವಂತೆ ಮಾಡಿ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’ ಹರಿಯುವಂತೆ ಮಾಡುವುದು ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಸಲುವಾಗಿ ಬಿ.ಎಂ.ಆರ್.ಡಿ.ಎ. ಪ್ರದೇಶದಲ್ಲಿ ಜಲ ಸಂವರ್ಧನೆಗಾಗಿ ಸಮಗ್ರ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ. ಇದರ ಅನುಷ್ಠಾನಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತದೆ. ಸಚಿವರು, ಶಾಸಕರು, ಚುನಾಯಿತ ಪ್ರತಿನಿಧಿಗಳು, ನಾಗರಿಕ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಇದರ ಸದಸ್ಯರಾಗಿರುತ್ತಾರೆ. ಬಿ.ಎಂ.ಆರ್.ಡಿ.ಎ. ಹಾಗೂ ಬಿ.ಡಿ.ಎ ಮೂಲಕ ಅವಶ್ಯಕ ಕ್ರಮ ಕೈಗೊಳ್ಳಲು ₹ 50 ಕೋಟಿ ಒದಗಿಸಲಾಗುತ್ತದೆ.

* ಈ ಪ್ರದೇಶದಲ್ಲಿ ಸಾಧ್ಯವಾದಷ್ಟು ಹೆಚ್ಚು ಮಳೆ ನೀರನ್ನು ಸಂಗ್ರಹ ಮಾಡಲು ಸಮಗ್ರ ಕಾರ್ಯಕ್ರಮ

*ಈ ನದಿಗಳ ಜಲಾನಯನ ಪ್ರದೇಶದ ಎಲ್ಲಾ ಕೆರೆ ಹಾಗೂ ನೀರು ನಿಲ್ಲುವ ತಾಣಗಳ ಸಂರಕ್ಷಣೆ ಮತ್ತು ಪುನಶ್ಚೇತನ

* ಇಲ್ಲಿ ಭವಿಷ್ಯದಲ್ಲಿ ನಿರ್ಮಿಸುವ ಮನೆಗಳಲ್ಲಿ ಹಾಗೂ ಫ್ಲ್ಯಾಟ್‍ಗಳಲ್ಲಿ ತ್ಯಾಜ್ಯ ನೀರನ್ನು ಎರಡು ಕೊಳಾಯಿ ಮೂಲಕ ಸಂಗ್ರಹಿಸಲು ಕ್ರಮ. ಮಲ ಮೂತ್ರ ಸೇರದಿರುವ ನೀರನ್ನು ಶುದ್ಧೀಕರಿಸಿ ಮರು ಬಳಕೆಗೆ ಕ್ರಮ

* ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿ ದಂಡೆಗಳಲ್ಲಿನ ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಟ್ಟು, ಆಕರ್ಷಕವಾದ ವಾತಾವರಣ ನಿರ್ಮಿಸುವುದು

ಕಾವೇರಿ 5ನೇ ಹಂತಕ್ಕೆ ₹ 500 ಕೋಟಿ

ನಗರದ ನೀರಿನ ಅವಶ್ಯಕತೆಯನ್ನು ಪೂರೈಸಲು ಜಲಮಂಡಳಿಯು ಜೈಕಾ ನೆರವಿನೊಂದಿಗೆ ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ಅನುಷ್ಠಾನ. ಈ ಕಾಮಗಾರಿ ಪ್ರಾರಂಭಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. ₹ 5,550 ಕೋಟಿ ವೆಚ್ಚದ ಈ ಯೋಜನೆಗೆ ಈ ಸಾಲಿನಲ್ಲಿ ₹ 500 ಕೋಟಿ ಒದಗಿಸಲಾಗಿದೆ.

110 ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆ ಈ ಸಾಲಿನಲ್ಲಿ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ನಗರದಲ್ಲಿ ಮಳೆನೀರು ಹರಿಯುವ ಚರಂಡಿಗೆ ತ್ಯಾಜ್ಯನೀರು ಸೇರುವ 914 ಪ್ರವೇಶ ಸ್ಥಳಗಳನ್ನು ಜಲಮಂಡಳಿಯು ಗುರುತಿಸಿದೆ. ಇದನ್ನು ತಡೆಗಟ್ಟುವ ಕಾಮಗಾರಿಗೆ ಮುಂದಿನ 2 ವರ್ಷಗಳಿಗೆ ₹ 76.55 ಕೋಟಿ ಅನುದಾನ ಒದಗಿಸಿದೆ.

ಮಾಲಿನ್ಯ ನಿಯಂತ್ರಣ– ಹೊಸ ಹೆಜ್ಜೆ

ರಾಜ್ಯ ಹಸಿರು ನ್ಯಾಯ ಮಂಡಳಿ ಪ್ರಧಾನ ಪೀಠ ಆದೇಶದ ಪ್ರಕಾರ ಬೆಳ್ಳಂದೂರು ಕೆರೆ, ಅಗರ ಕೆರೆ ಮತ್ತು ವರ್ತೂರು ಕೆರೆಗಳಲ್ಲಿ ನೀರಿನ ಗುಣಮಟ್ಟ ಮಾಪನ ಮಾಡಲು ನಿರಂತರ ಪರಿವೇಷ್ಟಕ ಜಲಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆ ಸಲುವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ₹ 9 ಕೋಟಿ ಒದಗಿಸಲಾಗಿದೆ.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆಯ ಹವಾಮಾನ ಬದಲಾವಣೆ ಸ್ಟ್ರಾಟಜಿಕ್ ಜ್ಞಾನ ಕೇಂದ್ರದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿವಿಧ ಸಂಶೋಧನೆ ಮತ್ತು ಅಧ್ಯಯನಕ್ಕೆ ₹ 2 ಕೋಟಿ ಮಂಜೂರು ಮಾಡಲಾಗಿದೆ

ಹೊಸ ಪೀಳಿಗೆ ಉನ್ನತ ಶಿಕ್ಷಣ

ಉನ್ನತ ಶಿಕ್ಷಣದಲ್ಲಿ ಹೊಸ ಕಲಿಕೆಯ ವಿಧಾನಗಳ ಅಳವಡಿಕೆ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರಿನ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ’ಹೊಸ ಪೀಳಿಗೆಯ ಉನ್ನತ ಶಿಕ್ಷಣ’ (ನೆಕ್ಸ್ಟ್‌ ಜನರೇಷನ್‌ ಲರ್ನಂಗ್‌ ಇನಿಷಿಯೇಟಿವ್‌ ) ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿಗಳ ನೇತೃತ್ವದ ಸಮಿತಿ ರಚನೆ.

ಕಾರ್ಯಕ್ರಮದ ಉದ್ದೇಶ
* ಆಜೀವ ಪರ್ಯಂತ ಕಲಿಕೆ

* ಪಠ್ಯ ಕ್ರಮದೊಂದಿಗೆ ಕೌಶಲ ಅಳವಡಿಸಿಕೊಳ್ಳುವುದು

* ತಾಂತ್ರಿಕ ಸಹಾಯದಿಂದ ಕಲಿಕೆ

* ಬಹು ವಿಷಯಾಧಾರಿತ ಕಲಿಕೆ

ಇತರ ಕಾರ್ಯಕ್ರಮಗಳು

* ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ 100 ಹಾಸಿಗೆಗಳ ಸೌಲಭ್ಯವುಳ್ಳ ಘಟಕ ಸ್ಥಾಪಿಸಲು ಹಾಗೂ ರೋಬೋಟಿಕ್ ಶಸ್ತ್ರಚಿಕಿತ್ಸೆ ಸೌಲಭ್ಯ ಒದಗಿಸಲು ₹ 10 ಕೋಟಿ

* ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಪ್ರಾರಂಭಿಸಲು ₹ 100 ಕೋಟಿ

* ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ₹ 100 ಕೋಟಿ

* ಎಸ್.ಡಿ.ಎಸ್.ಟಿ.ಬಿ. ಸಂಸ್ಥೆಯ ಆವರಣದಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಹಾಗೂ ಕೆಮಿಕಲ್, ಬಯಲಾಜಿಕಲ್‌, ರೇಡಿಯೇಷನ್, ನ್ಯೂಕ್ಲಿಯರ್ ನ್ಯಾಚುರಲ್ ಡಿಸಾಸ್ಟರ್ ಕೇಂದ್ರ ನಿರ್ಮಾಣಕ್ಕೆ ₹ 40 ಕೋಟಿ.

* ಸಂವಿಧಾನ ಮ್ಯೂಸಿಯಂ ಸ್ಥಾಪಿಸಲು ₹ 20 ಕೋಟಿ

* ಹಲಸೂರು ಗುರುದ್ವಾರಕ್ಕೆ ₹ 25 ಕೋಟಿ

* ಸೊನ್ನೇನಹಳ್ಳಿಯ ಸ್ಫಟಿಕಪುರಿ ಮಹಾಸಂಸ್ಥಾನ ಶಾಖಾ ಮಠಕ್ಕೆ ₹ 5 ಕೋಟಿ

* ಪುಷ್ಟಗಿರಿ ಮಹಾಸಂಸ್ಥಾನ ಮಠದ ಸಿದ್ಧರಾಮೇಶ್ವರ ಭವನದ ನಿರ್ಮಾಣಕ್ಕೆ ₹ 2 ಕೋಟಿ

* ಕೆಂಗೇರಿ ಹೋಬಳಿಯ ರಾಮೋಹಳ್ಳಿಯ ಸಿದ್ಧಾರೂಢ ಮಿಷನ್‍ಗೆ ₹ 1 ಕೋಟಿ

* ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 5 ಕೋಟಿ

* ಕರ್ನಾಟಕ ರಾಜ್ಯ ಕುಂಚಿಟಿಗರ-ಒಕ್ಕಲಿಗರ ಸಂಘದ ಅಭಿವೃದ್ಧಿಗೆ ₹ 2 ಕೋಟಿ

* ಕೆಂಗಲ್ ಹನುಮಂತಯ್ಯ ಹಾಸ್ಟೆಲ್‌ ಟ್ರಸ್ಟ್‌ನ ಸಾಂಸ್ಕೃತಿಕ ಮತ್ತು ಗ್ರಂಥಾಲಯ ಕೇಂದ್ರ ಅಭಿವೃದ್ಧಿಗೆ ₹ 5 ಕೋಟಿ

* ನಗರದಲ್ಲಿ 8 ಹೊಸ ಸೈಬರ್ ಎಕಾನಾಮಿಕ್ ನಾರ್ಕೋಟಿಕ್ ವಿಂಗ್ ಆರಂಭಿಸಲು ₹ 4 ಕೋಟಿ

* ದೊಡ್ಡಬಿದರಕಲ್ಲು ಬಳಿ ಕಾವೇರಿ ಎಂಪೋರಿಯಂ ಒಡೆತನದಲ್ಲಿನ ಜಾಗವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು, ಅಲ್ಲಿ ಕಲಾಗ್ರಾಮ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮ್ಯೂಸಿಯಂ, ಬಯಲು ರಂಗಮಂದಿರ ನಿರ್ಮಿಸಲು ₹ 10 ಕೋಟಿ

* ನಗರದಲ್ಲಿ ಗಗನಚುಂಬಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡ ಸಂಭವಿಸಿದರೆ, ಅದರ ನಿಯಂತ್ರಣಕ್ಕೆ 90 ಮೀಟರ್‌ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲ್ಯಾಟ್‍ಫಾರ್ಮ್ ವಾಹನ ಖರೀದಿ

* ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ಘಟಕ ಪ್ರಾರಂಭ

* ₹ 40 ಕೋಟಿ ಕೆ.ಸಿ.ವ್ಯಾಲಿ ಯೋಜನೆ ಅಡಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 40 ಎಂಎಲ್‍ಡಿ ನೀರು ಸಾಗಿಸುವ ಕೊಳವೆ ಮಾರ್ಗಕ್ಕೆ ಒದಗಿಸಿದ ಅನುದಾನ

* ಇವನ್ನೂ ಓದಿ...

ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ

* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ

ಬಜೆಟ್‌: ಯಾರು ಏನಂತಾರೆ?

ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ 

ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ

ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ

ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ

ಬೆಂಗಳೂರೇ ಮೊದಲು; ಉಳಿದವು ನಂತರ...

ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್

ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

ಮತ ಫಸಲಿಗಾಗಿ ಕುಮಾರ ಬಿತ್ತನೆ

ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ

ಸಹಸ್ರ ಶಾಲೆಗಳ ಸ್ಥಾಪನೆ

ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು

ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ

‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ

ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ

ಬಜೆಟ್‌: ಯಾರು ಏನಂತಾರೆ?

ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !