ಕೆಪಿಎಸ್‌ಸಿ ವಿರುದ್ಧ ಹೈಕೋರ್ಟ್‌ ಗರಂ

7
ಅಕ್ರಮ ನೇಮಕಾತಿ ಹೊಂದಿದವರಿಗೆ ರಕ್ಷಣೆ

ಕೆಪಿಎಸ್‌ಸಿ ವಿರುದ್ಧ ಹೈಕೋರ್ಟ್‌ ಗರಂ

Published:
Updated:

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಕ್ರಮ ನೇಮಕಾತಿ ಹೊಂದಿದವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ’ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

‘20 ವರ್ಷಗಳಾದರೂ ನಮಗೆ ನೇಮಕಾತಿ ಆದೇಶ ನೀಡಿಲ್ಲ. ಈ ಕುರಿತ ಕೋರ್ಟ್‌ ಆದೇಶಕ್ಕೆ ಸರ್ಕಾರ ಮನ್ನಣೆ ನೀಡುತ್ತಿಲ್ಲ’ ಎಂದು ದೂರಿ ನೇಮಕಾತಿ ಪಡೆಯಬೇಕಾದ ಫಲಾನುಭವಿಗಳು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಅಶೋಕ ಜಿ.ನಿಜಗಣ್ಣವರ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನರ್ ಪರಿಶೀಲನಾ ಅರ್ಜಿ ವಿಚಾರಣೆಯ ಹಂತದಲ್ಲಿದೆ’ ಎಂದರು. ಅಂತೆಯೇ ಕೆಪಿಎಸ್‌ಸಿ ಪರ ವಕೀಲರು, ‘ಈ ಪ್ರಕರಣದಲ್ಲಿ ಸ್ಪಷ್ಟನೆ ಕೋರಿದ ಮಧ್ಯಂತರ ಅರ್ಜಿ ಬಾಕಿ ಇದೆ. ಹಾಗಾಗಿ ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ಆದರೆ, ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ‘ಅದೆಲ್ಲಾ ಗೊತ್ತಿಲ್ಲ, ಮುಂದಿನ ವಿಚಾರಣೆ ವೇಳೆಗೆ ನೀವು ನೇಮಕಾತಿ ಆದೇಶ ನೀಡುವ ಕುರಿತಂತೆ ಕ್ರಮ ಕೈಗೊಂಡಿರಬೇಕು’ ಎಂದು ಎಚ್ಚರಿಸಿತು.

ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಮತ್ತು ಕೆಪಿಎಸ್‌ಸಿ ಕಾರ್ಯದರ್ಶಿ ಆರ್‌.ಆರ್‌.ಜನ್ನು ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಲಾಗಿದೆ.

ಎಸ್‌.ಶ್ರೀನಿವಾಸ್‌ ಸೇರಿದಂತೆ ಐವರು ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ಡಿ.ಆರ್‌.ರವಿಶಂಕರ್‌ ವಾದ ಮಂಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !