ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿ ಕೆರೆಗೆ ಬಿಬಿಎಂಪಿಯಿಂದಲೇ ತ್ಯಾಜ್ಯ

ದುರ್ನಾತ: ಮೂಗು ಮುಚ್ಚಿ ತಿರುಗುವ ಜನ
Last Updated 11 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ಸಮೀಪದ ಹೂಡಿ ಗ್ರಾಮದ ಕೆರೆಯ ಒಡಲಿಗೆ ದಿನವೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಲಾರಿಗಳಲ್ಲೇ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಮೊದಲೇ ವಿನಾಶದ ಅಂಚನ್ನು ತಲುಪಿರುವ ಕೆರೆ, ಇದರಿಂದಾಗಿ ಮತ್ತಷ್ಟು ಮಲಿನವಾಗುತ್ತಿದೆ.

ಹೂಡಿಯಿಂದ ಕೃಷ್ಣರಾಜಪುರಕ್ಕೆಹೋಗುವ ಮುಖ್ಯರಸ್ತೆಯ ಬದಿಯಲ್ಲಿರುವ ಕೆರೆ ಇದೀಗ ತ್ಯಾಜ್ಯಗಳ ಆಗರವಾಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.

‘ಪ್ರತಿದಿನ ರಾತ್ರಿ ವೇಳೆಯಲ್ಲಿ ಬಿಬಿಎಂಪಿಯ ಕಸದ ಲಾರಿಗಳು ಬಂದು ಕೆರೆಯ ದಂಡೆಗೆ ತ್ಯಾಜ್ಯವನ್ನು ಸುರಿದು ಹೋಗುತ್ತಿವೆ. ಅಲ್ಲದೆ ಸುರಿದ ತ್ಯಾಜ್ಯಕ್ಕೆ ಬೆಳಿಗ್ಗೆ ಪೌರಕಾರ್ಮಿಕರು ಬೆಂಕಿ ಹಚ್ಚಿ ಹೋಗುತ್ತಿದ್ದಾರೆ. ಇದರಿಂದಾಗಿ ಕೆರೆಯ ಸುತ್ತಮುತ್ತ ದುರ್ನಾತ ಹೆಚ್ಚಿದೆ. ಹೊಗೆ ಕೂಡ ಆವರಿಸಿಕೊಂಡಿರುತ್ತದೆ. ಸುತ್ತಮುತ್ತಲಿನ ನಿವಾಸಿಗಳು ಉಸಿರು ಬಿಗಿಹಿಡಿದುಕೊಂಡು ಬದುಕುವಂತಾಗಿದೆ’ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

‘ಕೆರೆ ಬಳಿಯಲ್ಲಿಯೇ ಕೋಳಿ ಮಾಂಸದ ಅಂಗಡಿಗಳು ಇವೆ. ಆ ಅಂಗಡಿಗಳಲ್ಲಿನ ಅಳಿದುಳಿದ ತ್ಯಾಜ್ಯವನ್ನು ರಾತ್ರಿಯಾಗುತ್ತಲೇ ಕೆರೆಗೆ ಸುರಿಯಲಾಗುತ್ತಿದೆ. ಹಾಗೆ ಸುರಿದ ಮಾಂಸದ ತ್ಯಾಜ್ಯವನ್ನು ತಿನ್ನಲು ನೂರಾರು ನಾಯಿಗಳು ಕೆರೆ ದಂಡೆಯಲ್ಲಿಯೇ ಬಿಡಾರ ಹೂಡಿರುತ್ತವೆ. ನಾಯಿಗಳ ಕಾಟವೂ ಹೆಚ್ಚಾಗಿದೆ. ಕೆರೆಯ ಬದಿ ಭಯದಿಂದಲೇ ಸಂಚರಿಸುವಂತಾಗಿದೆ’ ಎಂದು ಸ್ಥಳೀಯ ನಿವಾಸಿ ವಿಜಯ್‌ ಅಳಲು ತೋಡಿಕೊಂಡರು.

ಕೆರೆಯ ಪಶ್ಚಿಮ ಭಾಗದಲ್ಲಿ ಕಬ್ಬಿಣದ ತಂತಿ ಬೇಲಿಯನ್ನು ಕಿತ್ತು ಹಾಕಿರುವ ಕೆಲ ಸ್ಥಳೀಯರು, ಅನಧಿಕೃತವಾಗಿ ಪೆಟ್ಟಿ ಅಂಗಡಿಯನ್ನು ಹಾಕಿಕೊಂಡಿದ್ದಾರೆ.

‘ಒತ್ತುವರಿ ಮಾಡಿಕೊಳ್ಳುವ ಉದ್ದೇಶದಿಂದ ತಂತಿ ಕಿತ್ತಿದ್ದಾರೆ’ ಎಂದೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ಹತ್ತು ವರ್ಷಗಳ ಹಿಂದೆ ಕೆರೆಯಲ್ಲಿ ನೀರು ಶುದ್ಧವಾಗಿತ್ತು. ಆಗ ಇಲ್ಲಿ ಕಸ ಹಾಕುತ್ತಿರಲಿಲ್ಲ. ದನ ಕರುಗಳು ನೀರು ಕುಡಿಯುತ್ತಿದ್ದವು. ನೂರಾರು ಪಕ್ಷಿಗಳಿಗೆ ಇದು ವಾಸಸ್ಥಾನವಾಗಿತ್ತು. ಈಗ ಇಡೀ ಕೆರೆ ತ್ಯಾಜ್ಯದ ಗುಂಡಿಯಾಗಿ ಪರಿವರ್ತನೆಗೊಂಡಿದೆ’ ಎಂದು ಸ್ಥಳೀಯರಾದ ಹರೀಶ್‌ ದೂರಿದರು.

ಇದೇ ಕೆರೆಯ ದಂಡೆಯಲ್ಲಿರುವ ರಸ್ತೆಯಲ್ಲಿಯೇ ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಸಂಚರಿಸುತ್ತಾರೆ. 500 ಮೀಟರ್ ಅಂತರದಲ್ಲಿಯೇ ಬಿಬಿಎಂಪಿ ವಾರ್ಡ್‌ ಕಚೇರಿ ಇದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಕೆರೆ ವಿಷಯದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT