ಮಹಾರಾಣಿ ಕ್ಲಸ್ಟರ್‌, ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆ

ಶುಕ್ರವಾರ, ಮೇ 24, 2019
30 °C
ಎರಡು ‍ಪ್ರತ್ಯೇಕ ಮಸೂದೆಗೆ ಅಂಗೀಕಾರ

ಮಹಾರಾಣಿ ಕ್ಲಸ್ಟರ್‌, ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆ

Published:
Updated:

ಬೆಂಗಳೂರು: ಬೆಂಗಳೂರಿನಲ್ಲಿ ‘ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ’ ಮತ್ತು ಮಂಡ್ಯದಲ್ಲಿ ’ಮಂಡ್ಯ ವಿಶ್ವವಿದ್ಯಾಲಯ’ ಸ್ಥಾಪಿಸುವ ಉದ್ದೇಶದ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ’ಯನ್ನು ವಿಧಾನಪರಿಷತ್ತು ಗುರುವಾರ ಅಂಗೀಕರಿಸಿತು.

ಬೆಂಗಳೂರಿನ ಮೂರು ಮಹಿಳಾ ಕಾಲೇಜುಗಳ ಸಂಪನ್ಮೂಲಗಳನ್ನು ಸೇರಿಸಿ ‘ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಲಾಗುವುದು. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಬೇರ್ಪಡಿಸಿ ಕ್ಲಸ್ಟರ್‌ನಲ್ಲಿ ವಿಲೀನಗೊಳಿಸುವ ಕಾಲೇಜುಗಳೆಂದರೆ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ವ್ಯವಸ್ಥಾಪನಾ ಕಾಲೇಜು ಮತ್ತು ಶ್ರೀಮತಿ ವಿ.ಎಚ್‌.ಡಿ ಕೇಂದ್ರೀಯ ಗೃಹ ವಿಜ್ಞಾನ ಸಂಸ್ಥೆ. ಮಹಾರಾಣಿ ವಿಜ್ಞಾನ ಕಾಲೇಜನ್ನು ಮುಖ್ಯ ಸಂಸ್ಥೆಯನ್ನಾಗಿಸಿ, ಅದರ ಸುತ್ತ ಕ್ಲಸ್ಟರ್‌ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಮಸೂದೆ ಮಂಡಿಸಿದ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದಿಂದ ಮಂಡ್ಯದ ಸರ್ಕಾರಿ ಕಾಲೇಜನ್ನು ಪ್ರತ್ಯೇಕಗೊಳಿಸಿ, ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಮಂಡ್ಯದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಏಕಾತ್ಮಕ ಸ್ವರೂಪದ ಮಂಡ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದರು.

ಅಂಗೀಕಾರಗೊಂಡ ಇತರ ಮಸೂದೆಗಳು: ಭೂಸ್ವಾಧೀನ, ಪುನರ್‌ವಸತಿ ಮತ್ತು ಪುನರ್‌ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಮಸೂದೆ, ಕರ್ನಾಟಕ ಋಣ ಪರಿಹಾರ ಮಸೂದೆ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ತಿದ್ದುಪಡಿ ಮಸೂದೆ, ಎನ್‌ಐಇ ವಿಶ್ವವಿದ್ಯಾಲಯ ಮಸೂದೆ, ಆದಿಚುಂಚನಗಿರಿ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ, ಆರ್‌.ವಿ.ವಿಶ್ವವಿದ್ಯಾಲಯ ಮಸೂದೆಗಳು ಅಂಗೀಕಾರಗೊಂಡವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !