ಅಗ್ನಿ ಕುಂಡಗಳಾಗಿವೆ ಮಾರ್ಕೆಟ್‌ಗಳು

ಭಾನುವಾರ, ಮೇ 19, 2019
32 °C

ಅಗ್ನಿ ಕುಂಡಗಳಾಗಿವೆ ಮಾರ್ಕೆಟ್‌ಗಳು

Published:
Updated:
Prajavani

ಬೆಂಗಳೂರು: ಗಬ್ಬು ನಾರುವ ಕಸದ ರಾಶಿ, ಕಟ್ಟಡದೊಳಗಿನ ದಾರಿಯಲ್ಲಿ ಕಾಲಿಡಲೂ ಜಾಗವಿಲ್ಲದಂತೆ ಅತಿಕ್ರಮಿಸಿರುವ ಅಂಗಡಿಗಳು, ಕಿಷ್ಕಿಂದೆಯಂತಹ ರಸ್ತೆಗಳು, ಒತ್ತುವರಿಯಾಗಿರುವ ಪಾದಚಾರಿ ಮಾರ್ಗಗಳು, ಅಲ್ಲಲ್ಲಿ ಕೆಸರು, ಇವುಗಳ ನಡುವೆಯೇ ವ್ಯಾಪಾರ– ಚೌಕಾಸಿಯ ಗದ್ದಲ... 

ಬೆಂಗಳೂರಿನ ಮಾರುಕಟ್ಟೆಗಳು ಎಂದ ಕೂಡಲೇ ಕಣ್ಣೆದುರು ಬರುವ ಚಿತ್ರಣವಿದು. ಅಕ್ಷರಶಃ ಏಳು ಸುತ್ತಿನ ಕೋಟೆಯಂತಾಗಿರುವ ಕೆಲವು ವ್ಯಾಪಾರ ತಾಣಗಳನ್ನು ಹೊಕ್ಕು ಹೊರಬರಬೇಕಾದರೆ ಎಂಟೆದೆ ಬೇಕು. ಎಲ್ಲವೂ ‘ಸ್ಮಾರ್ಟ್‌’ ಆಗುತ್ತಿರುವ ಭರಾಟೆಯ ನಡುವೆಯೂ ನಗರದ ಪ್ರಮುಖ ಮಾರುಕಟ್ಟೆಗಳಿನ್ನೂ ಗತ ಶತಮಾನದ ಪಳೆಯುಳಿಕೆಗಳಂತೆ ಭಾಸವಾಗುತ್ತವೆ.

ಮಾರುಕಟ್ಟೆಗೆ ಹೋಗಲು ಸುಗಮ ರಸ್ತೆ ಇಲ್ಲ. ಗ್ರಾಹಕರ ವಾಹನ ನಿಲುಗಡೆಗೆ ಪಾರ್ಕಿಂಗ್‌ ತಾಣಗಳಿಲ್ಲ, ಇದ್ದರೂ ಬೆಳಕಿನ ವ್ಯವಸ್ಥೆ ಇಲ್ಲ. ಕೆಲ ಮಾರುಕಟ್ಟೆಗಳಲ್ಲಿ ಸಾರ್ವಜನಿಕ ಶೌಚಾಲಯಗಳೇ ಇಲ್ಲ. ಇನ್ನೂ ಕೆಲವೆಡೆ ಶೌಚಾಲಯಗಳಿದ್ದರೂ ನಿರ್ವಹಣೆ ಇಲ್ಲದೇ ಕಾಲಿಡಲು ಸಾಧ್ಯವಾಗದ ಗಲೀಜು ಸ್ಥಿತಿ. ಕುಡಿಯುವ ನೀರಿನ ವ್ಯವಸ್ಥೆಯನ್ನಂತೂ ಕೇಳಲೇಬೇಡಿ. ಇವು ಮೂಲಸೌಕರ್ಯ ಕೊರತೆಯ ಗೋಳಾದರೆ, ಸುರಕ್ಷತೆಯದು ಬೇರೆಯೇ ಕತೆ. ಅಗ್ನಿ ದುರಂತ ಅಥವಾ ಕಟ್ಟಡ ಕುಸಿತದಂತಹ ಅವಘಡ ಸಂಭವಿಸಿದರೆ, ಜನ ಹೊರಗೆ ಓಡಿಹೋಗಿ ಪ್ರಾಣ ಉಳಿಸಿಕೊಳ್ಳಲೂ ಸಾಧ್ಯವಾಗದ ದುಃಸ್ಥಿತಿ ಇದೆ.

ಮಾರುಕಟ್ಟೆಯ ಇಂತಹ ಸ್ಥಿತಿಯನ್ನು ನೋಡಿ ಬೇಸತ್ತ ಹೂವಿನ ಹಾಗೂ ಉಪಕರಣ ವ್ಯಾಪಾರಿಗಳು ಹೈಕೋರ್ಟ್‌ ಮೆಟ್ಟಿಲೇರಿದರು. ‘ಮಾರುಕಟ್ಟೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ನಿಭಾಯಿಸಲೂ ಸಾಧ್ಯವಾಗದ ಪರಿಸ್ಥಿತಿ ಇದೆ’ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಇದನ್ನು ಆಧರಿಸಿ ಹೈಕೋರ್ಟ್‌, ನಗರದ ಎಲ್ಲ ಮಾರುಕಟ್ಟೆಗಳ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದರ ಜತೆಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತು.

ಹೈಕೋರ್ಟ್ ಚಾಟಿ ಬೀಸುತ್ತಿದ್ದಂತೆಯೇ ಎಚ್ಚೆತ್ತ ಪಾಲಿಕೆ, ಮಾರುಕಟ್ಟೆಗಳಲ್ಲಿ ಸುರಕ್ಷತೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ವರದಿ ನೀಡುವಂತೆ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು ಕೋರಿತು. ಈ ಕುರಿತು ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಅಗ್ನಿಶಾಮಕ ಇಲಾಖೆಯ ಮಹಾನಿರ್ದೇಶಕ ಎಂ.ಎನ್. ರೆಡ್ಡಿ ಅವರಿಗೆ ಮಾ.27ರಂದು ಪತ್ರ ಬರೆದರು.

‘ಆಕಸ್ಮಿಕವಾಗಿ ಅವಘಡಗಳು ಸಂಭವಿಸಿದರೆ ಜನರ ಪ್ರಾಣ ರಕ್ಷಣೆಗೆ ಮಾರುಕಟ್ಟೆಗಳಲ್ಲಿ ಅವಕಾಶಗಳಿಲ್ಲ. ಅಗ್ನಿಶಾಮಕ ವಾಹನಗಳು ಮತ್ತು ಆಂಬುಲೆನ್ಸ್‌ಗಳು ಒಳ ಪ್ರವೇಶಿಸಲು ಜಾಗವೇ ಇಲ್ಲ’ ಎಂದು ಅಗ್ನಿ ಶಾಮಕ ಇಲಾಖೆ ವರದಿ ಸಲ್ಲಿಸಿತ್ತು.

ಇದರ ಫಲವಾಗಿ ಬಿಬಿಎಂಪಿ, ‌ಕೆ.ಆರ್. ಮಾರುಕಟ್ಟೆ ಮತ್ತು ಶಿವಾಜಿನಗರದ ರಸೆಲ್ ಮಾರುಕಟ್ಟೆಯಲ್ಲಿ ಫುಟ್‌ಪಾತ್ ಹಾಗೂ ರಸ್ತೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದೆ. ಮಳಿಗೆಗಳಲ್ಲಿ ರಸ್ತೆಗೆ ಚಾಚಿಕೊಂಡಂತೆ ನಿರ್ಮಿಸಿದ್ದ ಹೆಚ್ಚುವರಿ ರಚನೆಗಳನ್ನು ಕಿತ್ತೊಗೆದಿದೆ. ಅಕ್ರಮವಾಗಿ ಕಟ್ಟಿದ್ದ ಗೂಡಂಗಡಿಗಳನ್ನು ಎತ್ತಂಗಡಿ ಮಾಡಿದೆ. ಮಾರುಕಟ್ಟೆ ಬಳಿ ಬೀದಿಬದಿ ವ್ಯಾಪಾರ ವಹಿವಾಟುಗಳನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದೆ.

ಕೆ.ಆರ್‌. ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿ ಒಂದು ತಿಂಗಳು ಕಳೆದಿದೆ. ಈಗ ಮಾರುಕಟ್ಟೆಗೆ ಒಂದು ಸುತ್ತು ಹಾಕಿದರೆ, ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಆದಂತೆ ಏನೂ ಕಾಣುವುದಿಲ್ಲ. ಫುಟ್‌ಪಾತ್‌ಗಳನ್ನು ವ್ಯಾಪಾರಿಗಳು ಮತ್ತೆ ಆವರಿಸಿಕೊಂಡಿದ್ದಾರೆ. ಈಗಲೂ ಅಲ್ಲಲ್ಲಿ ಕಸದ ರಾಶಿ ಕಾಣಸಿಗುತ್ತದೆ. ಅಗ್ನಿ ಅವಘಡ ಸಂಭವಿಸಿದರೆ, ಹೊರ ಹೋಗಲು ಜನ ದಾರಿ ಹುಡುಕಬೇಕಾದ ಸ್ಥಿತಿ ಈಗಲೂ ಇದೆ. 

ಶಿವಾಜಿನಗರ ರಸೆಲ್ ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿ ಒಂದು ವಾರವಷ್ಟೇ ಕಳೆದಿದೆ. ಮೇಲ್ನೋಟಕ್ಕೆ ಇಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದಂತೆ ಕಾಣಿಸುತ್ತಿದೆ. ಆದರೂ, ಕಾರ್ಯಾಚರಣೆ ದಿನ ಅಂಗಡಿಯ ಒಳಕ್ಕೆ ಸೇರಿದ್ದ ಸಾಮಗ್ರಿಗಳು ಮತ್ತೆ ಕಾರಿಡಾರ್‌ಗೆ ಇಳಿದಿವೆ. ಕೆಲವೇ ದಿನಗಳಲ್ಲಿ ಈ ಮಾರುಕಟ್ಟೆಯೂ ಮತ್ತೆ ಹಿಂದಿನ ದುಃಸ್ಥಿತಿಗೆ ತಲುಪುವ ಎಲ್ಲಾ ಲಕ್ಷಣಗಳಿವೆ.

ದುಪ್ಪಟ್ಟಾಯಿತು ಮಾಮೂಲಿ

ಕೆ.ಆರ್. ಮಾರುಕಟ್ಟೆಯಲ್ಲಿ ಅನಧಿಕೃತ ವ್ಯಾಪಾರಿಗಳು ಅಧಿಕಾರಿಗಳಿಗೆ ಮಾಮೂಲಿ ಕೊಡುವುದು ಗುಟ್ಟಿನ ವಿಚಾರವೇನಲ್ಲ. ಹಾಗಾಗಿ ಏನೇ ಅಕ್ರಮ ನಡೆದರೂ ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗುತ್ತಾರೆ. ಹೈಕೋರ್ಟ್‌ ನಿರ್ದೇಶನದ ಮೇಲೆ ತೆರವು ಕಾರ್ಯಾಚರಣೆ ನಡೆದ ಒಂದೆರಡು ದಿನ ಮಾತ್ರ ಇಲ್ಲಿನ ವ್ಯವಸ್ಥೆ ಸುಧಾರಿಸಿತ್ತು. ಈಗ ಬಿಬಿಎಂಪಿಯವರೂ ಸುಮ್ಮನಾಗಿದ್ದಾರೆ.

‘ತೆರವು ಕಾರ್ಯಾಚರಣೆಯಿಂದ ವರ್ತಕರಿಗಾಗಲೀ, ಗ್ರಾಹಕರಿಗಾಗಲೀ ಅನುಕೂಲ ಆಗಿಲ್ಲ. ಬಿಬಿಎಂಪಿ ಸಿಬ್ಬಂದಿ ಪಡೆಯುತ್ತಿದ್ದ ‘ಮಾಮೂಲಿ’ ಪ್ರಮಾಣ ಹೆಚ್ಚಾಗಿದೆ. ಪ್ರತಿ ಅಂಗಡಿಗೆ ವಾರಕ್ಕೆ ₹2,000 ಇದ್ದ ‘ಮಾಮೂಲಿ’, ಈಗ ₹4,000ಕ್ಕೆ ಏರಿಕೆಯಾಗಿದೆ’ ಎಂದು ವರ್ತಕರೊಬ್ಬರು ದೂರಿದರು.

‘ಬಿಬಿಎಂಪಿಯ 60 ಸಿಬ್ಬಂದಿ ಮಾರುಕಟ್ಟೆ ನಿರ್ವಹಣೆ ಮಾಡುತ್ತಾರೆ. ಅವರು 10–15 ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ವರ್ಗಾವಣೆ ಆದರೂ, ಬದಲಾವಣೆ ಮಾಡಿಸಿಕೊಂಡು ಮತ್ತೆ ಇಲ್ಲಿಗೇ ವಕ್ಕರಿಸುತ್ತಾರೆ. ಅನಧಿಕೃತವಾಗಿ ಹಣ ವಸೂಲಿಗೆ ಮಹಿಳೆಯೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಅಕ್ರಮ ನಿಂತಿಲ್ಲ’ ಎಂದು ಮಾರುಕಟ್ಟೆಯ ಸಾಗರ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಆಸಿಫ್ ಪಾಷಾ ಆರೋಪಿಸಿದರು.

‘ಕಬ್ಬಿಣದ ಉಪಕರಣಗಳ ಅಂಗಡಿಗಳಿಗೆ ಮೊದಲನೇ ಮಹಡಿಯಲ್ಲಿ ಜಾಗ ನೀಡಲಾಗಿದೆ. ಇಲ್ಲಿ 100ಕ್ಕೂ ಹೆಚ್ಚು ಅಂಗಡಿಗಳಿವೆ. ಒಮ್ಮೊಮ್ಮೆ ಸಂಜೆ 4 ಗಂಟೆಯಾದರೂ ಬೋಣಿಯೇ ಆಗುವುದಿಲ್ಲ. ಮಾರುಕಟ್ಟೆಯ ಹೊರಗೆ ಫುಟ್‌ಪಾತ್‌ನಲ್ಲೇ ಈ ವಸ್ತುಗಳು ಸಿಗುವುದರಿಂದ ಜನ ಇಲ್ಲಿಗೆ ಬರುವುದೇ ಇಲ್ಲ. ನಾವು ಬಿಬಿಎಂಪಿಗೆ ಬಾಡಿಗೆ ಕಟ್ಟುತ್ತೇವೆ. ಫುಟ್‌ಪಾತ್‌ನಲ್ಲಿ ಇರುವವರು ಸಿಬ್ಬಂದಿಗೆ ‘ಮಾಮೂಲಿ’ ಕೊಡುತ್ತಾರೆ. ಹೀಗಾಗಿ, ಅವರನ್ನು ತೆರವು ಮಾಡುವುದಿಲ್ಲ’ ಎಂದು ಖಲೀಮ್ ದೂರುತ್ತಾರೆ.

‘ಮೊದಲನೇ ಮಹಡಿಗೆ ಬರಲು ಲಿಫ್ಟ್‌ ವ್ಯವಸ್ಥೆಯೂ ಇಲ್ಲ. ಒಳಬರುವ ಜನ ಹೊರ ಹೋಗಲು ದಾರಿಯನ್ನು ಹುಡುಕಿಕೊಂಡು ಅಲೆಯಬೇಕು. ಎಲ್ಲಿಯೂ ಫಲಕಗಳಿಲ್ಲ. ಹೊಸಬರು ಮಾರುಕಟ್ಟೆಗೆ ಬಂದರೆ, ಎಲ್ಲಿದ್ದೇವೆ ಎಂಬುದೇ ಗೊತ್ತಾಗದು. ಹೀಗಾಗಿ ಜನ ಮಾರುಕಟ್ಟೆಗೆ ಬರಲು ನಿರಾಸಕ್ತಿ ವಹಿಸುತ್ತಿದ್ದಾರೆ’ ಎಂದು ಅವರು ಅಳಲು ತೋಡಿಕೊಂಡರು.

ಅನಾರೋಗ್ಯ ಸಮಸ್ಯೆ: ‘ಮಾರುಕಟ್ಟೆಯ ವಾಯವ್ಯ ಭಾಗದಲ್ಲಿರುವ ಹೂವಿನ ಮಾರುಕಟ್ಟೆಗೆ ಬರಲು ಮೆಟ್ಟಿಲುಗಳು ಇವೆ. ಆದರೆ, ಮೆಟ್ಟಿಲಿನ ಬಳಿಗೆ ಬರಲು ರಸ್ತೆಯೇ ಇಲ್ಲ. ಕಸದ ರಾಶಿ, ಕೊಳಚೆ ನೀರಿನಲ್ಲಿ ರಸ್ತೆ ಹೂತು ಹೋಗಿದೆ. ಹೂವಿನ ಸುವಾಸನೆಯನ್ನು ಮೀರಿದ ದುರ್ವಾಸನೆ ಇಲ್ಲಿ ಆವರಿಸಿದೆ. ಕೊಳಚೆಯ ಪರಿಣಾಮವಾಗಿ ಅನಾರೋಗ್ಯವೂ ಕಾಡುತ್ತಿದೆ’ ಎನ್ನುತ್ತಾರೆ ಹೂವಿನ ವ್ಯಾಪಾರಿ ಎಚ್‌.ಎಂ. ಶ್ರೀನಿವಾಸ್.

ಸ್ಮಾರ್ಟ್‌ ಸಿಟಿಗೆ ಟೆಂಡರ್

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೆ.ಆರ್. ಮಾರುಕಟ್ಟೆ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್ ಹೇಳಿದರು.

‘ಈ ಯೋಜನೆ ಪೂರ್ಣಗೊಂಡ ನಂತರ ಮಾರುಕಟ್ಟೆ ಚಿತ್ರಣ ಬದಲಾಗಲಿದೆ. ಸದ್ಯದ ಅವ್ಯವಸ್ಥೆಗೆ ಬಿಬಿಎಂಪಿ 60 ಸಿಬ್ಬಂದಿ ಕಾರಣ ಎಂಬ ಆರೋಪವಿತ್ತು. ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರು ಬದಲಾವಣೆ ಆಗಿದ್ದಾರೆಯೋ ಇಲ್ಲವೋ ಎಂಬುದನ್ನು ಮತ್ತೆ ಪರಿಶೀಲಿಸುತ್ತೇವೆ’ ಎಂದು ತಿಳಿಸಿದರು.

ಕೆ.ಆರ್.ಪುರ ಮತ್ತು ಮಲ್ಲೇಶ್ವರ ಮಾರುಕಟ್ಟೆ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿದೆ ಎಂದು ಅವರು ಹೇಳಿದರು.

ದಲ್ಲಾಳಿಗಳ ದರ್ಬಾರ್‌

ಬೆಂಗಳೂರು ಪೂರ್ವದಲ್ಲಿರುವ ಕೆ.ಆರ್.ಪುರ ಮಾರುಕಟ್ಟೆ ಎಂದರೆ ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ ಸುತ್ತಮುತ್ತಲ ರೈತರು ಬೆಳೆದ ತರಕಾರಿ, ಹೂವುಗಳ ಪ್ರಮುಖ ಮಾರಾಟ ತಾಣ.

ರಾತ್ರಿ 10ರಿಂದಲೇ ಲಾರಿ ಮತ್ತು ಮಿನಿಲಾರಿಗಳಲ್ಲಿ ಲೋಡುಗಟ್ಟಲೆ ತರಕಾರಿ ಮತ್ತು ಹೂವು ಇಲ್ಲಿ ಬಂದಿಳಿಯುತ್ತದೆ. ಬೆಳಗಿನ ಜಾವ 4 ಗಂಟೆ ಸುಮಾರಿನಿಂದ ವ್ಯಾಪಾರ ವಹಿವಾಟು ಆರಂಭವಾಗುತ್ತದೆ. ಇಲ್ಲಿ ರೈತರು ನೇರವಾಗಿ ಗ್ರಾಹಕರಿಗೆ ವಸ್ತುಗಳನ್ನು ಮಾರಾಟ ಮಾಡಲು ಅವಕಾಶವೇ ಇಲ್ಲ. ದಲ್ಲಾಳಿಗಳು ನಿಗದಿ ಮಾಡಿದಷ್ಟು ಬೆಲೆ ಪಡೆದು ರೈತರು ಬಾಯಿ ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇದೆ ಎಂದು ಸ್ಥಳೀಯರು ದೂರುತ್ತಾರೆ.

‘ವರ್ತಕರು ರೈತರಿಂದ ಖರೀದಿಸಿದ ಸೊಪ್ಪು ತರಕಾರಿಗಳನ್ನು ಅರ್ಧ ಗಂಟೆಯಲ್ಲೇ ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರುತ್ತಾರೆ. ಇದನ್ನು ನೋಡಿದರೂ ಪ್ರಶ್ನೆ ಮಾಡುವ ಸ್ಥಿತಿ ಇಲ್ಲ. ದಬ್ಬಾಳಿಕೆಯಿಂದ ನಲುಗಿ ಹೋಗಿದ್ದೇವೆ’ ಎನ್ನುತ್ತಾರೆ ಕೋಲಾರ ಜಿಲ್ಲೆಯ ರೈತ ಮಂಜುನಾಥ.

ಬಸ್‌ ನಿಲ್ದಾಣವೇ ಮಾರುಕಟ್ಟೆ: ರಸ್ತೆಯಿಂದ ಸ್ವಲ್ಪ ದೂರದಲ್ಲಿ ಮಾರುಕಟ್ಟೆ ಇದ್ದರೂ, ಅದು ತಿಪ್ಪೆಗುಂಡಿಯಾಗಿ ಮಾರ್ಪಟ್ಟಿದೆ. ಹೀಗಾಗಿ, ರಸ್ತೆ ಬದಿಯಲ್ಲೇ ವ್ಯಾಪಾರ ನಡೆಯುತ್ತದೆ. ಪ್ರಯಾಣಿಕರು ಕುಳಿತುಕೊಳ್ಳಲು ಮಾಡಿರುವ ತಂಗುದಾಣವೇ ಹೂವಿನ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಪ್ರಯಾಣಿಕರು ರಸ್ತೆಯಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ.

ಕಟ್ಟಡದೆತ್ತರಕ್ಕೆ ಕಸದ ರಾಶಿ: ಮಾರುಕಟ್ಟೆ ಕಟ್ಟಡಕ್ಕಾಗಿ ಇಲ್ಲಿ 5 ಎಕರೆ 20 ಗುಂಟೆ ಜಾಗ ಮೀಸಲಿಡಲಾಗಿದೆ. ಇದರ ಬಹುತೇಕ ಭಾಗ ಒತ್ತುವರಿಯಾಗಿದೆ. ಉಳಿದ ಜಾಗ ಕಸದ ತೊಟ್ಟಿಯಂತಾಗಿದೆ. ಈ ನಡುವೆಯೇ ಬೆಳಿಗ್ಗೆ ಜನಜಂಗುಳಿ ನಡುವೆ ವ್ಯಾಪಾರ ವಹಿವಾಟು ನಡೆಯುತ್ತದೆ. ಕಸದ ರಾಶಿಯೊಂದು ಸರ್ಕಾರಿ ಕಟ್ಟಡವೊಂದನ್ನೇ ಮುಚ್ಚಿ ಹಾಕುವ ಹಂತಕ್ಕೆ ಬೆಳೆದು ನಿಂತಿದೆ. ಗಂಗಶೆಟ್ಟಿ ಕೆರೆ ಕೂಡ ತ್ಯಾಜ್ಯಮಯವಾಗುತ್ತಿದೆ.

‘250 ವರ್ಷಗಳ ಹಿಂದೆ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಾಣವಾದ ಮಾರುಕಟ್ಟೆ ಇಂದು ಅಧೋಗತಿಗೆ ತಲುಪಿದೆ. ಬಿಬಿಎಂಪಿ ಅಧಿಕಾರಿಗಳು ಇತ್ತ ತಿರುಗಿಯೇ ನೋಡುವುದಿಲ್ಲ’ ಎನ್ನುತ್ತಾರೆ ಎಲ್‌.ಐ.ಸಿ. ವೆಂಕಟೇಶ್.

‘₹ 60 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನಿರ್ಮಿಸಬೇಕು ಎಂಬ ಪ್ರಸ್ತಾವ ಇತ್ತು. ಅದಿನ್ನೂ ಕಾರ್ಯರೂಪಕ್ಕಿಳಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಬೀದಿಗೆ ಬಿದ್ದ ಬದುಕು

ಮಲ್ಲೇಶ್ವರದ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಯ ವ್ಯಾಪಾರಿಗಳು ಬೀದಿಗೆ ಬಿದ್ದು 5 ವರ್ಷಗಳೇ ಕಳೆದಿವೆ.

ಹೊಸ ಕಟ್ಟಡ ನಿರ್ಮಾಣದ ನೆಪದಲ್ಲಿ 275 ವ್ಯಾಪಾರಿಗಳನ್ನು ಅಲ್ಲಿಂದ ಹೊರ ಕಳುಹಿಸಲಾಯಿತು. ಅವರು ರಸ್ತೆ ಬದಿಯ ಫುಟ್‌ಪಾತ್ ಮೇಲೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.

‘ಫುಟ್‌ಪಾತ್‌ನಲ್ಲಿ ಒಂದು ಅಡಿ ಮುಂದಕ್ಕೆ ಬಂದರೆ ಪಾಲಿಕೆ ಅಧಿಕಾರಿಗಳು ತೆರವುಗೊಳಿಸುತ್ತಾರೆ. ಸಣ್ಣ ಜಾಗದಲ್ಲಿ ವ್ಯಾಪಾರ ನಡೆಸುವುದು ಕಷ್ಟವಾಗಿದೆ. ಯಾರ ಮುಂದೆ ಸಮಸ್ಯೆ ಹೇಳುವುದು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಹಣ್ಣಿನ ವ್ಯಾಪಾರಿ ರಾಮಕೃಷ್ಣ ಅಳಲು ತೋಡಿಕೊಳ್ಳುತ್ತಾರೆ.

‘ಕುಡಿಯುವ ನೀರಿಲ್ಲ‌. ಶೌಚಾಲಯದ ವ್ಯವಸ್ಥೆ ಇಲ್ಲವೇ ಇಲ್ಲ. ನೀರನ್ನು ಮನೆಯಿಂದ ತಂದಾದರೂ ಕುಡಿಯಬಹುದು, ಶೌಚಾಲಯ ಇಲ್ಲದಿದ್ದರೆ ಮಹಿಳೆಯರು ಎಲ್ಲಿ ಹೋಗಬೇಕು’ ಎಂದು ಹೂವಿನ ವ್ಯಾಪಾರಿ ಮಂಜುಳಾ ಪ್ರಶ್ನಿಸಿದರು.

ಕಾಯಕಲ್ಪ ನಿರೀಕ್ಷೆಯಲ್ಲಿ ಮಡಿವಾಳ ಮಾರುಕಟ್ಟೆ

ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಬೇಗೂರು ಹಾಗೂ ಸುತ್ತಮುತ್ತಲ ಪ್ರದೇಶದ ಜನ ಹಣ್ಣು–ತರಕಾರಿ ಖರೀದಿಲು ಈಗಲೂ ನೆಚ್ಚಿಕೊಂಡಿರುವುದು ಮಡಿವಾಳ ಮಾರುಕಟ್ಟೆಯನ್ನು.

750ಕ್ಕೂ ಹೆಚ್ಚು ಮಳಿಗೆಗಳಿರುವ ಈ ಮಾರುಕಟ್ಟೆ ಮಳೆ ಬಂದಾಗಲೆಲ್ಲ ಕೊಚ್ಚೆಗುಂಡಿಯಂತಾಗುತ್ತದೆ. ಇಲ್ಲಿ ಕೆಸರಿನ ನಡುವೆಯೇ ವ್ಯಾಪಾರ ನಡೆಯುತ್ತದೆ. ಎರಡೂ ಬದಿಗಳಲ್ಲಿ ವರ್ತಕರು ರಸ್ತೆಯನ್ನು ಆಕ್ರಮಿಸಿ ವ್ಯಾಪಾರಕ್ಕೆ ನಡೆಸುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ.

‘ಹೊಸ ಮಾರುಕಟ್ಟೆ ನಿರ್ಮಾಣ ಮಾಡುವ ಪ್ರಸ್ತಾವನೆ ಬಿಬಿಎಂಪಿ ಮುಂದಿದೆ. ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳ ನಿರ್ಮಾಣ ಪೂರ್ಣಗೊಂಡಿದೆ. ಒಟ್ಟಾರೆ 460 ಮಳಿಗೆಗಳನ್ನು ನಿರ್ಮಿಸುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ. ಚುನಾವಣೆ ಮುಗಿದ ಬಳಿಕ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ’ ಎಂದು ಮಡಿವಾಳ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ಯಾರಿಜಾನ್‌ ಹೇಳಿದರು.

‘ಮಳೆ ಬಂದರೆ ಮಾತ್ರ ಕೆಸರು ತುಂಬಿಕೊಳ್ಳುತ್ತದೆ. ಇಲ್ಲದಿದ್ದರೆ ಸಮಸ್ಯೆ ಇಲ್ಲ. ಆದರೆ, ಸೇಂಟ್‌ ಜಾನ್ ಆಸ್ಪತ್ರೆ ಎದುರು ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಮಾಡಿವಾಳ ಮಾರುಕಟ್ಟೆ ರಸ್ತೆಯಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಲಾಗಿದೆ. ಇದರಿಂದ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ಕಾಮಗಾರಿ ಮುಗಿಯುವ ತನಕ ಬೇರೆ ದಾರಿ ಇಲ್ಲ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳಿದ್ದಾರೆ. ಸದ್ಯಕ್ಕೆ ವ್ಯಾಪಾರ ಕ್ಷೀಣಿಸಿದೆ’ ಎಂದು ತಿಳಿಸಿದರು.

ಅಗ್ನಿ ಸುರಕ್ಷತೆಯೇ ಸವಾಲು

ಶಿವಾಜಿನಗರದ ರಸೆಲ್ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಜನರನ್ನು ರಕ್ಷಿಸಲು ಮಾರ್ಗಗಳೇ ಇಲ್ಲ ಎಂಬ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವರದಿ ಆಧರಿಸಿ ಬಿಬಿಎಂಪಿ ತೆರವು ಕಾರ್ಯಾಚರಣೆ ನಡೆಸಿದೆ.

ಇದಾದ ಬಳಿಕ ಮಾರುಕಟ್ಟೆ ಸುತ್ತಮುತ್ತ ವಾಹನ ನಿಲುಗಡೆಯನ್ನು ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ನಿಷೇಧಿಸಿದೆ. ಇದರಿಂದಾಗಿ ಮಾರುಕಟ್ಟೆಗೆ ಜನ ಬಾರದೆ ವ್ಯಾಪಾರ ಕುಸಿದಿದೆ ಎಂದು ವರ್ತಕರು ಗೋಳು ಹೇಳಿಕೊಳ್ಳುತ್ತಾರೆ.

‘ತೆರವು ಕಾರ್ಯಾಚರಣೆ ನಂತರ ಮಾರುಕಟ್ಟೆಗೆ ಜನರೇ ಬರುತ್ತಿಲ್ಲ. ಹೂವು ಕಟ್ಟುವ ದಿನಗೂಲಿ ಕೆಲಸ ಮಾಡುತ್ತಿದ್ದೇನೆ. ನಾಲ್ಕು ದಿನದಿಂದ ಕೂಲಿ ಸಿಕ್ಕಿಲ್ಲ. ಕುಟುಂಬ ನಿರ್ವಹಣೆಗೆ ₹ 3,000 ಸಾಲ ಮಾಡಿದ್ದೇನೆ’ ಎಂದು ಅಲೆಕ್ಸಾಂಡರ್ ನೋವಿನಿಂದ ಹೇಳಿದರು.

‘ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ಜನ ಸಂಚಾರಕ್ಕೆ ತೊಂದರೆಯಾದರೆ ಅಗ್ನಿಶಾಮಕ ಇಲಾಖೆ ನಿರಾಕ್ಷೇಪಣಾ ಪತ್ರ ನೀಡುವುದಿಲ್ಲ. ಆಗ ಹೈಕೋರ್ಟ್‌ ತರಾಟೆಗೆ ತೆಗೆದುಕೊಳ್ಳುತ್ತದೆ. ವ್ಯಾಪಾರ ಇಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಆದೇಶ ಪಾಲಿಸದೆ ಇರಲು ಸಾಧ್ಯವೇ’ ಎಂಬುದು ಪಾಲಿಕೆಯ ಹಿರಿಯ ಅಧಿಕಾರಿಗಳ ಪ್ರಶ್ನೆ.

ಸದ್ಯಕ್ಕೆ ಮಾರುಕಟ್ಟೆ ಎದುರಿನ ಜಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ವಲ್ಪ ಸ್ಥಳಾವಕಾಶ ದೊರೆತಿದೆ. ಕುಸಿದಿರುವ ವ್ಯಾಪಾರ ರಂಜಾನ್ ಸಂದರ್ಭದಲ್ಲಿ ಮತ್ತೆ ಚೇತರಿಸಿಕೊಳ್ಳುತ್ತದೋ ಇಲ್ಲವೋ ಎಂಬ ಆತಂಕ ವ್ಯಾಪಾರಿಗಳನ್ನು ಕಾಡುತ್ತಿದೆ.

120 ಮಾರುಕಟ್ಟೆಗಳಲ್ಲೂ ಪರಿಶೀಲನೆ

‘ಹೈಕೋರ್ಟ್‌ ಆದೇಶದಂತೆ ನಗರದ 120 ಮಾರುಕಟ್ಟೆಗಳಲ್ಲಿ ಪರಿಶೀಲನೆ ನಡೆಸಿ ಅಗ್ನಿ ಸುರಕ್ಷತೆಗೆ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಬಿಬಿಎಂಪಿಗೆ ತಿಳಿಸಿದ್ದೇವೆ’ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುನೀಲ್ ಅಗರವಾಲ್ ತಿಳಿಸಿದರು.

‘ ಬಿಬಿಎಂಪಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ’ ಎಂದರು.

ವಾಹನ ನಿಲುಗಡೆಗೆ ಅವಕಾಶ ಇಲ್ಲದ ಕಾರಣ ರಸೆಲ್‌ ಮಾರುಕಟ್ಟೆಗೆ ಜನರೇ ಬರುತ್ತಿಲ್ಲ. ದಿನಕ್ಕೆ ಐವತ್ತು ರೂಪಾಯಿಯ ವ್ಯಾಪಾರವೂ ಆಗುತ್ತಿಲ್ಲ
–ಮಹಮದ್ ಇರ್ಷಾದ್

**
ಚುನಾವಣೆ ಮುಗಿದ ಬಳಿಕ ಮಡಿವಾಳ ಮಾರುಕಟ್ಟೆಯಲ್ಲಿ ಹೊಸ ಮಳಿಗೆಗಳ ನಿರ್ಮಾಣ ಕೆಲಸ ಆರಂಭಿಸುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ
- ಪ್ಯಾರಿಜಾನ್‌, ಮಡಿವಾಳ ಸಂತೆ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !