ರಿಲ್ಯಾಕ್ಸ್‌ ಮೂಡ್‌ನಲ್ಲಿ ಸಂಸದ ಜೋಶಿ

ಸೋಮವಾರ, ಮೇ 27, 2019
24 °C
ಬೆಳಿಗ್ಗೆ ಯೋಗ, ಕಾರ್ಯಕರ್ತರೊಂದಿಗೆ ಮಾತುಕತೆ: ಗೆಲುವಿನ ವಿಶ್ವಾಸ

ರಿಲ್ಯಾಕ್ಸ್‌ ಮೂಡ್‌ನಲ್ಲಿ ಸಂಸದ ಜೋಶಿ

Published:
Updated:
Prajavani

ಹುಬ್ಬಳ್ಳಿ: ಪ್ರತಿ ದಿನ 6.45ಕ್ಕೆ ಎದ್ದು ಯೋಗಾಭ್ಯಾಸ ಮಾಡುತ್ತಿದ್ದ ಸಂಸದ ಪ್ರಹ್ಲಾದ ಜೋಶಿ ಅವರು ಬುಧವಾರ ಏಳುವಾಗ ಅದಾಗಲೇ ಒಂದು ಗಂಟೆ ತಡವಾಗಿತ್ತು.

ಏನ್ ಸರ್ ಚುನಾವಣೆಯಿಂದ ದಣಿದಂತಿದೆ ಎಂದರೆ, ‘ದಣಿವೇನೂ ಇಲ್ಲ. ಒಂದು ಗಂಟೆ ತಡವಾಗಿ ಎದ್ದೇ ಅಷ್ಟೇ’ ಅಂದರು. ಆದರೆ ಅವರ ಮುಖದಲ್ಲಿ ದಣಿವು ಎದ್ದು ಕಾಣುತ್ತಿತ್ತು. ಕೆಲವು ತಿಂಗಳುಗಳ ಸತತ ದುಡಿಮೆಗೆ ಸ್ವಲ್ಪ ಸೊರಗಿದಂತಿದ್ದರು. ಆದರೆ, ಚುನಾವಣೆಯ ಫಲಿತಾಂಶ ಏನಾಗುವುದೋ ಎಂಬ ಭಯ– ಆತಂಕ ಮಾತ್ರ ಕಣಲಿಲ್ಲ. ಅಬ್ಬಾ ಎಲೆಕ್ಷನ್ ಮುಗಿಯಿತಲ್ಲ ಎಂಬ ನಿರಾಳತೆಯಿತ್ತು. ಸ್ವಲ್ಪ ರಿಲ್ಯಾಕ್ಸ್ ಮೂಡ್‌ನಲ್ಲಿ ಅವರಿದ್ದರು.

ಆ ಹೊತ್ತಿಗಾಗಲೇ ಧಾರವಾಡದಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ಬಂಧಿಸಿರುವ ಸುದ್ದಿ ಬಂತು. ಕೆಲವು ಕಾರ್ಯಕರ್ತರು– ಮುಖಂಡರಿಗೆ ಕರೆ ಮಾಡಿದರು. ನಂತರ ಎಸ್ಪಿಗೆ ಕರೆ ಮಾಡಿ ‘ದೂರು ನೀಡಿದ ತಕ್ಷಣ ಬಂಧಿಸಿದ್ದು ಸರಿಯಲ್ಲ, ಯಾವುದೇ ದೂರು ಬಂದರೂ ಅದೇ ರೀತಿ ಕ್ರಮ ಕೈಗೊಳ್ಳುತ್ತೀರ? ಪಕ್ಷದ ಕಾರ್ಯಕರ್ತರಂತೆ ವರ್ತಿಸಬಾರದು’ ಎಂದು ಸ್ವಲ್ಪ ತರಾಟೆಗೆ ತೆಗೆದುಕೊಂಡರು.

ಟೀ– ಕಾಫಿ ಮಾಡುವ ಅಭ್ಯಾಸ ಇರುವ ಅವರು, ಚಹಾ ತಯಾರಿಸಿ ಪತ್ನಿ– ಮಕ್ಕಳಿಗೆ ಕೊಟ್ಟರು. ಪತ್ನಿ ಜ್ಯೋತಿ ಜೋಶಿ ಅವರು ಸಹ ಪತಿಯ ಗೆಲುವಿಗಾಗಿ ಹಲವು ತಿಂಗಳುಗಳಿಂದ ಪ್ರಚಾರ ನಡೆಸಿದ್ದರು. ಸಂಸದರು ಮಾಡಿದ ಚಹಾ ಹೇಗಿದ್ದಿರಬಹುದು ಎಂಬ ಕುತೂಹಲದಿಂದ ಅವರ ಕೊನೆಯ ಮಗಳು 5ನೇ ತರಗತಿ ಓದುತ್ತಿರುವ ಅನನ್ಯಳನ್ನು ಪಕ್ಕಕ್ಕೆ ಕರೆದು ಕೇಳಿದಾಗ ‘ಸಕ್ಕರೆ ಸ್ವಲ್ಪ ಕಡಿಮೆ ಇತ್ತು’ ಎಂದಳು.

‘ನನಗೆ ಅಡುಗೆ ಮಾಡಲು ಬರುವುದಿಲ್ಲ. ಅದು ಯಾವುದೇ ದಿನ ಇರಲಿ ಸಂಪೂರ್ಣ ಉಪವಾಸ ಮಾಡುವುದಿಲ್ಲ. ಏನಾದರೂ ತಿಂದೇ ತಿನ್ನುತ್ತೇನೆ. ಆದರೆ, ಚಹಾ ಮತ್ತು ಕಾಫಿ ಮಾಡುವುದನ್ನು ಕಲಿತಿದ್ದೇನೆ’ ಎಂದು ಜೋಶಿ ಹೇಳಿದರು.

‘ಕುಟುಂಬದವರೊಂದಿಗೆ ಪ್ರವಾಸಕ್ಕೆ ಹೋಗಬೇಕು ಆದರೆ ಸಮಯ ಇಲ್ಲ. ಮೊದಲ ಮಗಳು ಅರ್ಪಿತಾ ಒಂದು ತಿಂಗಳ ಹಿಂದೆಯಷ್ಟೇ ಟಿಸಿಎಎಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಚುನಾವಣೆಗಾಗಿ ನಾಲ್ಕು ದಿನ ರಜೆ ತೆಗೆದುಕೊಂಡು ಬಂದಿದ್ದ ಆಕೆ ಬುಧವಾರವಷ್ಟೇ ಹೋಗಿದ್ದಾಳೆ. ಆಕೆಗೆ ಮತ್ತೆ ರಜೆ ಸಿಗುವುದಿಲ್ಲ. ಆದ್ದರಿಂದ ಪ್ರವಾಸ ಹೋಗುವುದು ಸ್ವಲ್ಪ ಡೌಟು’ ಎಂದರು.

‘ನಾನು ಪ್ರತಿ ದಿನವೂ ಜನರ ಸಂಪರ್ಕದಲ್ಲಿಯೇ ಇರುವವರು. ಸಾಮಾನ್ಯ ದಿನಗಳಲ್ಲಿ ಸಹ ಎರಡು ಮೂರು ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿಯೇ ಭೇಟಿ ನೀಡಬೇಕೆಂದೇನಿಲ್ಲ. ಈ ಬಾರಿ ಶಿಗ್ಗಾವಿ ತಾಲ್ಲೂಕಿನಲ್ಲಿ 20 ಹಾಗೂ ಉಳಿದೆಡೆ ಕೆಲವೇ ಕೆಲವು ಹಳ್ಳಿ ಬಿಟ್ಟು ಬೇರೆಲ್ಲ ಕಡೆ ಹೋಗಿ ಬಂದಿದ್ದೇನೆ’ ಎಂದರು.

ಚುನಾವಣೆ ಮುಗಿದರೇನು ಕಾರ್ಯಕರ್ತರ ಬರುವಿಕೆಗೆ ಕಡಿಮೆ ಇರಲಿಲ್ಲ. ಮನೆಗೆ ಬಂದಿದ್ದ ಕಾರ್ಯಕರ್ತರು, ಮುಖಂಡರನ್ನು ಕರೆದು ಒಳಗೆ ಕೂರಿಸಿದ ಅವರು ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಒಂದು ಗುಂಪಿನ ನಂತರ ಮತ್ತೊಂದು ಗುಂಪು, ಆ ನಂತರ ಇನ್ನೊಂದು ಗುಂಪು ಬರುತ್ತಲೇ ಇತ್ತು.

ಎಲೆಕ್ಷನ್‌ ಹೇಗಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿರುವುದರಿಂದ ನಮಗೆ ಪ್ಲಸ್ ಆಗಲಿದೆ. ಯುವ ಮತದಾರರು ಹಾಗೂ ಮೊದಲ ಬಾರಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಯುವಕರು ಮೋದಿ ಹಾಗೂ ರಾಷ್ಟ್ರೀಯತೆಯ ಆಧಾರದ ಮೇಲೆ ಮತದಾನ ಮಾಡಿರುತ್ತಾರೆ. ಯಾರು ನಂಬಲಿ ಬಿಡಲಿ ಮೋದಿಯೇ ಯೂತ್ ಐಕಾನ್’ ಎಂದರು.

ಎರಡು ಮದುವೆ ಸಮಾರಂಭಕ್ಕೆ ಹೋಗಿಬರಬೇಕಾಗಿದ್ದರಿಂದ ರೆಡಿಯಾಗಿ ಹೊರಗೆ ಹೊರಟರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !