ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಸ್ನೇಹಿತನ ಕೊಂದಿದ್ದ ನೇಪಾಳದ ಬಾರ್ ನೌಕರನ ಸೆರೆ

ಮರಣೋತ್ತರ ಪರೀಕ್ಷೆ ಬಿಚ್ಚಿಟ್ಟ ರಹಸ್ಯ!

Published:
Updated:

ಬೆಂಗಳೂರು: ಸ್ನೇಹಿತನನ್ನು ತಾನೇ ಉಸಿರುಗಟ್ಟಿಸಿ ಕೊಂದು, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದ ನೇಪಾಳದ ರಾಜ್ ಬಿಸ್ಟಾ (30) ಎಂಬಾತನ ಅಸಲಿ ಮುಖವನ್ನು ಮರಣೋತ್ತರ ಪರೀಕ್ಷೆ ವರದಿ ತೆರೆದಿಟ್ಟಿದೆ!

ಆಡುಗೋಡಿಯ ಬಿ.ಜಿ. ರಸ್ತೆಯಲ್ಲಿರುವ ‘ಶೈನ್ ಮಾರ್ಬಲ್ ಸೆಂಟರ್‌’ನಲ್ಲಿ ರವೀಂದ್ರ ಬಹದ್ದೂರ್ ಜೆಟೆರಾ (35) ಎಂಬುವರು ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಮೇ 8ರಂದು ಅಲ್ಲಿನ ಶೆಡ್‌ನಲ್ಲೇ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದರು.

ಮಂಗಳವಾರ ವರದಿ ಕೊಟ್ಟ ವೈದ್ಯರು, ‘ರವೀಂದ್ರ ಅವರ ದೇಹದ ಮೇಲೆ ಗಾಯದ ಗುರುತುಗಳಿವೆ. ಯಾರೋ ಉಸಿರುಗಟ್ಟಿಸಿ ಅವರನ್ನು ಕೊಂದು, ನಂತರ ನೇಣಿನ ಕುಣಿಕೆ ಬಿಗಿದಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದರು. ಆ ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು ಮೃತರ ಸಂಬಂಧಿಕರು ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಿದ್ದರು. ಆಗ ಅವರೆಲ್ಲ ರಾಜ್‌ ಬಿಸ್ಟಾನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.

ಪೊಲೀಸರು ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ‘ನಾನು ರವೀಂದ್ರ ಬಳಿ ಸಾಲ ಮಾಡಿದ್ದೆ. ಹಣ ವಾಪಸ್ ಕೊಡುವಂತೆ ಆತ ಕೇಳುತ್ತಿದ್ದ. ಕಾಲಾವಕಾಶ ಕೇಳಿದರೂ ಒಪ್ಪಲಿಲ್ಲ. ಮೇ 8ರ ರಾತ್ರಿ 7 ಗಂಟೆ ಸುಮಾರಿಗೆ ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ಜೋರು ಗಲಾಟೆ ಆಯಿತು. ಆಗ ಮೊಣಕೈನಿಂದ ಕುತ್ತಿಗೆಯನ್ನು ಅದುಮಿ ಸಾಯಿಸಿದೆ. ಆ ನಂತರ ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದು ಹೋಗಿದ್ದೆ’ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಒಂದೇ ದೇಶ; ಆಪ್ತ ಸ್ನೇಹ

ರವೀಂದ್ರ ಅವರು ಕೂಲಿ ಅರಸಿ ಆರು ತಿಂಗಳ ಹಿಂದಷ್ಟೇ ಪತ್ನಿ ಜತೆ ನಗರಕ್ಕೆ ಬಂದಿದ್ದರು. ಊರಿನಲ್ಲಿ ಹಬ್ಬ ಇದ್ದುದರಿಂದ ಎರಡು ವಾರಗಳ ಹಿಂದೆ ಪತ್ನಿ ನೇಪಾಳಕ್ಕೆ ತೆರಳಿದ್ದರು. ಆರೋಪಿ ರಾಜ್‌ ಬಿಸ್ಟಾ ಕೂಡ, ಆಡುಗೋಡಿಯ ಬಾರ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ತಮ್ಮ ದೇಶದವನೇ ಎಂಬ ಕಾರಣಕ್ಕೆ ರವೀಂದ್ರ ಆತನೊಟ್ಟಿಗೆ ಸ್ನೇಹ ಮಾಡಿಕೊಂಡಿದ್ದರು.

Post Comments (+)