ಕರಾಳ ದಿನಗಳ ನೋವಿನ ಗಂಟು ಬಿಚ್ಚಿಟ್ಟ ಮಹಿಳೆಯರು

7
ನೆಲತಾಯಿ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಹೃದಯಸ್ಪರ್ಶಿ ಕ್ಷಣಗಳು

ಕರಾಳ ದಿನಗಳ ನೋವಿನ ಗಂಟು ಬಿಚ್ಚಿಟ್ಟ ಮಹಿಳೆಯರು

Published:
Updated:
Prajavani

ಬೆಂಗಳೂರು: ‘ಕೌಟುಂಬಿಕ ದೌರ್ಜನ್ಯ, ಧಾರ್ಮಿಕ ಕೇಂದ್ರ, ಕೆಲಸದ ಸ್ಥಳಗಳಲ್ಲಿನ ಲೈಂಗಿಕ‌ ಶೋಷಣೆಯಲ್ಲಿ ಸಿಲುಕಿರುವ ನಮ್ಮ ಕೂಗು ಈ ಸಮಾಜಕ್ಕೆ ಕೇಳಿಸದೇ’ ಎನ್ನುವ ಈ ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಲೇ ತಮ್ಮಂತೆಯೇ ನೊಂದ
ವರಿಗೆ ದನಿಯಾಗಲು ಮುಂದಡಿ ಇಟ್ಟಿದ್ದಾರೆ. 

‘ಧಾರ್ಮಿಕ ಸಂಸ್ಥೆಗಳಲ್ಲಿ ಲೌಕಿಕ ಬದುಕಿನ ವ್ಯಾಮೋಹ ಹೆಚ್ಚಿ, ಲೈಂಗಿಕ ಕೃತ್ಯಗಳು ನಡೆಯುವುದಾದರೆ, ಆ ಸಂಸ್ಥೆಗಳನ್ನು ಹೇಗೆ ಗೌರವಿಸುವುದು’ ಎಂದು ಪ್ರಶ್ನಿಸುತ್ತಲೇ ಬದುಕಿನ ಕರಾಳ ದಿನಗಳ ನೋವಿನ ಗಂಟನ್ನು ಬಿಚ್ಚಿಟ್ಟಿದ್ದು ತಮಿಳುನಾಡಿನ ಸಿಸ್ಟರ್‌ ಲಿಲ್ಲಿ. 

ಸ್ವರಾಜ್‌ ಸಂಘಟನೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘2018– ನೆಲತಾಯಿ ಪ್ರಶಸ್ತಿ ಪುರಸ್ಕಾರ’ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಸಿಸ್ಟರ್‌ ಆಗಿ ಸೇವಾವಲಯದಲ್ಲಿ ಶ್ರಮಿಸಬೇಕೆನ್ನುವುದು ನನ್ನ ಕನಸಾಗಿತ್ತು. ತಮಿಳುನಾಡಿನ ತೂತುಕುಡಿಯ ಚರ್ಚೊಂದರಲ್ಲಿ ಕಾರ್ಯನಿರ್ವಹಸುತ್ತಿರುವ ವೇಳೆ ಅಲ್ಲಿನ ಪಾದ್ರಿ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡರು. ನನ್ನ ಮಾತಿಗೆ ಒಪ್ಪದಿದ್ದರೆ ನಿನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಹಲವು ಬಾರಿ ನನ್ನ ಮೇಲೆ ಆಕ್ರಮಣ ಮಾಡಿದ್ದೂ ಇದೆ’ ಎಂದು ಹೇಳಿದರು. ಲೈಂಗಿಕ ದೌರ್ಜನ್ಯವನ್ನು ಮೆಟ್ಟಿ ನಿಂತಿರುವ ಅವರು ರಂಗಭೂಮಿ ಕಲಾವಿದೆಯಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಸ್ಲಂ ಮಹಿಳಾ ಸಂಘಟನೆಯ ಜಾನ್ಸಿ, ‘ಸೇವಾನಗರ, ಆನಂದಪುರದ ಕೊಳಗೇರಿ ಪ್ರದೇಶಗಳಲ್ಲಿ ಪುಟ್ಟ ಕಂದ
ಮ್ಮಗಳ ಮೇಲೆ ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತವೆ’ ಎಂದು ಹೇಳಿದರು.

‘ಹಲವು ಬಾರಿ ಇಂತಹ ಘಟನೆಗಳು ನಡೆದಾಗ ದೂರು ನೀಡಲು ಹೋದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಅಲ್ಲೇ ಪ್ರತಿಭಟನೆಗೆ ಕೂತ ನಂತರ ಪ್ರಕರಣ ದಾಖಲಿಸಿಕೊಂಡರು’ ಎಂದು ವ್ಯವಸ್ಥೆಯ ಹುಳುಕುಗಳನ್ನು ತೆರೆದಿಟ್ಟರು.

ಪ್ರಾಧ್ಯಾಪಕಿ ಎಂ.ಎಸ್‌.ಆಶಾದೇವಿ ಮಾತನಾಡಿ, ‘ಮಹಿಳೆಯರ ದೇಹದ ಮೇಲೆ ಅತಿಕ್ರಮಣ ಮಾಡುವ ಪುರು ಷರಿಗೆ ಸಮಾಜದಿಂದಲೇ ಬಹಿಷ್ಕಾರ ಹಾಕಬೇಕು. ಕೇವಲ ಕಾನೂನುಗಳ ರಚನೆಯಿಂದ ಹೆಣ್ಣನ್ನು ಕೆಟ್ಟದೃಷ್ಟಿಯಿಂದ ನೋಡುವ ಸಮಾಜದ ದೃಷ್ಟಿಕೋನ ಬದಲಾಗದು. ನಮ್ಮನ್ನು ನಾವು ನೋಡಿಕೊಳ್ಳುವ ರೀತಿ ಬದಲಾಗಬೇಕು. ದೇಹ ಸೂತಕ, ಪಾವಿತ್ರ್ಯತೆ ಹಾಗೂ ಶೀಲ ಎಂಬ ಪರಿಕಲ್ಪನೆಗಳಿಂದ ಹೊರಬರಬೇಕು’ ಎಂದರು. 

‘ಮುಟ್ಟಿನಿಂದಲೇ ಹುಟ್ಟು ಎನ್ನುವುದು ವಾಸ್ತವವಾಗಿರುವಾಗ ಯಾವುದು ಮೈಲಿಗೆ? ಮುಟ್ಟಿನ ವಯೋ ಮಾನದ ಮಹಿಳೆಯರ ಪ್ರವೇಶದಿಂದ ಅಯ್ಯಪ್ಪನಿಗೆ ಮೈಲಿಗೆ ಆಯಿತೆಂದರೆ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯ ಕಸಿದಂತಲ್ಲವೆ? ದೇಶವನ್ನು ಆಕ್ರಮಿಸಿಕೊಂಡಿರುವ ಕೋಮುವಾದವನ್ನು ಹೊಡೆದೊಡೆಸಲು ಸ್ತ್ರೀಶಕ್ತಿ ಸಂಘಟಿತವಾಗಲೇಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !