ಮಡಿಕೇರಿಯಲ್ಲಿ ಬಿಜೆಪಿ ಬೃಹತ್ ಮೆರವಣಿಗೆ; ಶಾಸಕರು, ಮುಖಂಡರ ಸಾಥ್‌

ಬುಧವಾರ, ಏಪ್ರಿಲ್ 24, 2019
23 °C

ಮಡಿಕೇರಿಯಲ್ಲಿ ಬಿಜೆಪಿ ಬೃಹತ್ ಮೆರವಣಿಗೆ; ಶಾಸಕರು, ಮುಖಂಡರ ಸಾಥ್‌

Published:
Updated:
Prajavani

ಮಡಿಕೇರಿ: ಚುನಾವಣಾ ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಅಂತ್ಯಗೊಂಡಿದ್ದು ಅದಕ್ಕೂ ಮೊದಲು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದರು.

‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಘೋಷ ವಾಕ್ಯದೊಂದಿಗೆ ನಗರದ ಚೌಡೇಶ್ವರಿ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಇಂದಿರಾ ಗಾಂಧಿ ವೃತ್ತದಿಂದ ಹಳೇ ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಅಂತ್ಯಗೊಂಡಿತು. ಶಾಸಕರು ಹಾಗೂ ಪಕ್ಷದ ಪ್ರಮುಖರು ತೆರೆದ ಜೀಪಿನಲ್ಲಿ ಸಾಗಿದರು. 

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ‘ರಾಜ್ಯದಲ್ಲಿ ಮೈತ್ರಿ ಪಕ್ಷಗಳು ಮೋದಿಯವರು ಮತ್ತೆ ಪ್ರಧಾನಿ ಆಗಬಾರದೆಂಬ ಚಿಂತನೆಯೊಂದಿಗೆ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

‘ಆದರೆ, ಜಿಲ್ಲೆಯ ಜನರು ಮೋದಿ ಹಾಗೂ ಪ್ರತಾಪ್‌ ಸಿಂಹ ಅವರ ಪರವಿದ್ದು, ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಜಯ ಸಾಧಿಸಲಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್ ಸುಬ್ರಮಣಿ ಅವರು, ‘ಟಿಪ್ಪು ಜಯಂತಿ ಆಚರಣೆ ಕಾಂಗ್ರೆಸ್ ಸರ್ಕಾರದ ಕೊಡುಗೆ. ಆ ಮೂಲಕ ಕೊಡಗಿನಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಮೀನು, ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತಾರೆ. ಇಂತವ ಮನಸ್ಥಿತಿ ಉಳ್ಳವರು ಆಡಳಿತ ನಡೆಸಬೇಕಾ’ ಎಂದು ಪ್ರಶ್ನಿಸಿದರು.

ವಿಜಯ್ ಶಂಕರ್ ನಮ್ಮ ಪಕ್ಷದ ವಿರೋಧಿ ಮಾತ್ರ ಅಲ್ಲ ಕೊಡಗಿಗೂ ವಿರೋಧಿ ಅಭ್ಯರ್ಥಿಯಾಗಿದ್ದು, ಪ್ರತಾಪ್ ಸಿಂಹ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವ ಮೂಲಕ ಮೋದಿಯನ್ನು ಪ್ರಧಾನಿಯಾಗಿ ಮುಂದುವರೆಯುವಂತೆ ಮಾಡಬೇಕು ಎಂದು ಕೋರಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ,  ‘ಪುಲ್ವಾಮ ದಾಳಿ ನಡೆದ ಸಂದರ್ಭ ನಿದ್ದೆ ತೊರೆದ ಪ್ರಧಾನಿ ಮೋದಿಯವರು ಪ್ರತ್ಯುತ್ತರ ನೀಡದೆ ಬಿಡುವುದಿಲ್ಲ ಎಂದು ಸವಾಲು ಹಾಕಿದ್ದರು. ಅದರಂತೇ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ ಭಾರತೀಶ್ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !