ಸೋಮವಾರ, ನವೆಂಬರ್ 18, 2019
23 °C
ಬೇರೆ ರಾಜ್ಯಗಳಿಂದ ಹೆಚ್ಚಿದ ಬೇಡಿಕೆ

ಈರುಳ್ಳಿ ದಾಸ್ತಾನು ಕೊರತೆ: ₹50ರ ಗಡಿ ಮುಟ್ಟಿದ ಈರುಳ್ಳಿ

Published:
Updated:
Prajavani

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದ್ದು,ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸಿದೆ.

ದೆಹಲಿಯ ಆಜಾದ್‌ಪುರ ಮಂಡಿಯಲ್ಲಿ ಗುರುವಾರ ಈರುಳ್ಳಿಯ ಸಗಟುದರ ದರ ಪ್ರತಿ ಕೆ.ಜಿಗೆ ₹30ರಿಂದ ₹46ರಷ್ಟಿತ್ತು. ಮಹಾರಾಷ್ಟ್ರದ ನಾಸಿಕ್‌ನಲ್ಲೂ ಈರುಳ್ಳಿ ದರ ಏರಿಕೆಯಾಗಿದ್ದು, ಪ್ರತಿ ಕೆ.ಜಿಗೆ ₹50 ರಿಂದ ₹55ರಂತೆ ಮಾರಾಟವಾಗಿದೆ. ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿ.ಗೆ ₹50ರಿಂದ ₹60ರಂತೆ ಮಾರಾಟವಾಯಿತು.

‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಈರುಳ್ಳಿ ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿಂದ ದೇಶದ ವಿವಿಧೆಡೆಗೆ ಈರುಳ್ಳಿ ರವಾನೆಯಾಗುತ್ತದೆ. ರಾಜ್ಯದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಇತ್ತೀಚೆಗೆ ಈ ಭಾಗದಲ್ಲಿ ಸಂಭವಿಸಿದ ನೆರೆಯಿಂದ ಬೆಳೆಗಳೆಲ್ಲಾ ಹಾಳಾಗಿವೆ. ಇದರಿಂದ ಈರುಳ್ಳಿ ಬೆಳೆಗೂ ಹಾನಿಯಾಗಿದ್ದು, ಮಾರುಕಟ್ಟೆಗೆ ಅಗತ್ಯ ಪ್ರಮಾಣದ ಈರುಳ್ಳಿ ಪೂರೈಕೆಯಾಗಿಲ್ಲ.

ಈರುಳ್ಳಿ ದಾಸ್ತಾನು ಕಡಿಮೆ ಇದ್ದ ಕಾರಣ, ಬೇರೆ ರಾಜ್ಯಗಳಿಂದಲೂ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ದರವೂ ಏರಿಕೆ ಕಂಡಿದೆ’ ಎಂದು ಕೆ.ಆರ್.ಮಾರುಕಟ್ಟೆ ತರಕಾರಿ ವ್ಯಾಪಾರಿ ಯೂನಿಫ್‌ ತಿಳಿಸಿದರು. ‘ಕಳೆದ ವಾರದಲ್ಲಿ ಈರುಳ್ಳಿ ₹30ರಿಂದ ₹35ರಂತೆ ಮಾರಾಟ ಆಗುತ್ತಿತ್ತು. ₹100ಕ್ಕೆ ಮೂರು ಕೆ.ಜಿ ಈರುಳ್ಳಿ ಖರೀದಿಸಿದ್ದೆ. ಆದರೆ, ಈಗ ಬೆಲೆ ದುಪ್ಪಟ್ಟಾಗಿದೆ. ವ್ಯಾಪಾರಿಗಳೂ ದರ ಕಡಿಮೆ ಮಾಡುತ್ತಿಲ್ಲ’ ಎಂದು ನಗರದ ನಿವಾಸಿ ಅನಸೂಯ ಹೇಳಿದರು.

ಪ್ರತಿಕ್ರಿಯಿಸಿ (+)