ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಹುದ್ದೆಗೆ ಅರ್ಜಿಯೂ ಇಲ್ಲ!

ಅಂಕಪಟ್ಟಿ ಸಿಗದೆ ಅತಂತ್ರ ಸ್ಥಿತಿಯಲ್ಲಿ ಮುಕ್ತ ವಿವಿ ಪದವೀಧರರು
Last Updated 30 ಮಾರ್ಚ್ 2019, 18:07 IST
ಅಕ್ಷರ ಗಾತ್ರ

ಬಳ್ಳಾರಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಾವಿರಾರು ಪದವೀಧರರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವರ ಬಳಿ ಅಂತಿಮ ವರ್ಷದ ಪರೀಕ್ಷೆಯ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ಇಲ್ಲ.

ಐದು ವರ್ಷಗಳ ಹಿಂದೆ ಪದವಿ ತರಗತಿಗಳಿಗೆ ಪ್ರವೇಶ ಪಡೆದು ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದರೂ, ಅವರಿಗೆ ವಿಶ್ವವಿದ್ಯಾಲಯವು ಇದುವರೆಗೆ ಅಂಕಪಟ್ಟಿಯನ್ನಾಗಲೀ, ಪದವಿ ಪ್ರಮಾಣಪತ್ರವನ್ನಾಗಲೀ ನೀಡದೇ ಇರುವುದು ಸದ್ಯದ ಸನ್ನಿವೇಶಕ್ಕೆ ಕಾರಣ.

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಸಂದರ್ಭದಲ್ಲಿ ಈ ಸಮಸ್ಯೆ ಇರಲಿಲ್ಲ. ಆಗ, ಆನ್‌ಲೈನ್‌ನಲ್ಲಿ ಪಡೆದು ಸಲ್ಲಿಸಿದ್ದ ಅಂಕಪಟ್ಟಿಯನ್ನು ಪರಿಗಣಿಸಲಾಗಿತ್ತು. ಆ ಪರೀಕ್ಷೆಯಲ್ಲಿ ಪಾಸಾದವರು, ಶಿಕ್ಷಕರ ಹುದ್ದೆಗೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ವಿಶ್ವವಿದ್ಯಾಲಯದ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕು. ಅವುಗಳನ್ನು ಅಪ್‌ಲೋಡ್‌ ಮಾಡದೆ ಆನ್‌ಲೈನ್‌ ಅರ್ಜಿ ಭರ್ತಿ ಮಾಡಲು ಆಗದಿರುವುದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

‘ಏ.10ರ ಒಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಆದರೆ ಅಂಕಪಟ್ಟಿ, ಪ್ರಮಾಣಪತ್ರವಿಲ್ಲದೆ ಸಾಧ್ಯವಾಗಿಲ್ಲ. ಈ ಬಗ್ಗೆ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದ ನಿರ್ದೇಶಕರನ್ನು ಕೇಳಿದರೆ, ಸದ್ಯಕ್ಕೆ ಅಂಕಪಟ್ಟಿ ವಿತರಣೆ ಅಸಾಧ್ಯ ಎಂದರು. ವಯೋಮಿತಿ ಮೀರುತ್ತಿರುವ ಸನ್ನಿವೇಶದಲ್ಲಿ ಕೆಲಸ ಗಿಟ್ಟಿಸುವ ಒಂದು ಅವಕಾಶವೂ ಕೈ ತಪ್ಪಿಹೋಗುತ್ತಿದೆ’ ಎಂದು ಎ.ಎನ್‌.ಮಾರುತೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವವಿದ್ಯಾಲಯದ ಮಾನ್ಯತೆ ರದ್ದತಿಗೆ ಮುನ್ನ ಪ್ರವೇಶ ಪಡೆದು ತೇರ್ಗಡೆಯಾದವನ್ನು ಉನ್ನತವ್ಯಾಸಂಗ ಮತ್ತು ಉದ್ಯೋಗ ಸಂಬಂಧಿಸಿ ನೇಮಕಾತಿ, ಮುಂಬಡ್ತಿಗೆ ಪರಿಗಣಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ 2018ರ ಮಾರ್ಚ್‌ 5ರಂದು ಆದೇಶ ಹೊರಡಿಸಿತ್ತು. ಈ ಆದೇಶದ ಅನುಸಾರವಾಗಿಯಾದರೂ, ಈಗ ಅಂಕಪಟ್ಟಿ, ಪದವಿಪ್ರಮಾಣ ಪತ್ರ ಸಲ್ಲಿಸದೆಯೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು’ ಎಂಬುದು ಅವರ ಆಗ್ರಹ.

ಯುಜಿಸಿಯಿಂದ ವಿಳಂಬ:‘ಮಾನ್ಯತೆ ರದ್ದುಪಡಿಸಿದ ವರ್ಷಗಳಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳಿಗೆ ಮಾನ್ಯತೆ ನೀಡುವಂತೆ ಕೋರಿ ವಿಶ್ವವಿದ್ಯಾಲಯ ಯುಜಿಸಿಯೊಂದಿಗೆ ಹದಿನೈದು ಬಾರಿ ಪತ್ರ ವ್ಯವಹಾರ ನಡೆಸಿದೆ. ದೆಹಲಿ ಕೇಂದ್ರ ಕಚೇರಿಗೂ ನಮ್ಮ
ಕುಲಪತಿ ಭೇಟಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಯುಜಿಸಿ ಶೀಘ್ರ ಮಾನ್ಯತೆ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದ ನಿರ್ದೇಶಕ ಎಚ್‌.ಮಲ್ಲಿಕಾರ್ಜುನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT