ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಪರೀಕ್ಷೆ ಬಂದರೂ, ಆ ಮೌಲ್ಯಮಾಪನ ಭತ್ಯೆ ಸಿಕ್ಕಿಲ್ಲ!

ಪದವಿ ಪೂರ್ವ ಶಿಕ್ಷಣ ಇಲಾಖೆ ವಿರುದ್ಧ ಉಪನ್ಯಾಸಕರ ಅಸಮಾಧಾನ
Last Updated 14 ನವೆಂಬರ್ 2018, 20:17 IST
ಅಕ್ಷರ ಗಾತ್ರ

ಬೆಂಗಳೂರು: ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ ಹತ್ತಿರವಾಗುತ್ತಿದೆ. ಆದರೆ, ಜೂನ್‌ನಲ್ಲಿ ನಡೆದ 2017–18ನೇ ಸಾಲಿನ ಪಿ.ಯು. ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಭತ್ಯೆ ಇನ್ನೂ ಉಪನ್ಯಾಸಕರ ಕೈ ಸೇರಿಲ್ಲ.

ಜುಲೈ ಆರಂಭದಲ್ಲಿಯೇ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿತ್ತು. ಆ ಕಾರ್ಯದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳ 4,580 ಉಪನ್ಯಾಸಕರು ಪಾಲ್ಗೊಂಡಿದ್ದರು. ಫಲಿತಾಂಶ ಪ್ರಕಟವಾಗಿ ಐದು ತಿಂಗಳಾಗುತ್ತಿದ್ದರೂ ಉಪನ್ಯಾಸಕರಿಗೆ ಕೊಡಬೇಕಾದ ಸರಾಸರಿ ತಲಾ ₹ 10,000 ಮೌಲ್ಯಮಾಪನ ಭತ್ಯೆ, ಪ್ರಯಾಣ ಹಾಗೂ ದಿನಭತ್ಯೆ ನೀಡಿಲ್ಲ.

ಈ ಮೊದಲು, ಮೌಲ್ಯಮಾಪನ ಮಾಡಿದ ಪತ್ರಿಕೆಗಳ ಸಂಖ್ಯೆಗೆ ಅನುಗುಣವಾಗಿಮೌಲ್ಯಮಾಪನದ ಕೊನೆಯ ದಿನವೇ ಆಯಾ ಉಪನ್ಯಾಸಕರಿಗೆ ಚೆಕ್‌ ಮೂಲಕ ಭತ್ಯೆ ನೀಡಲಾಗುತ್ತಿತ್ತು. ಪಿ.ಯು. ಮಂಡಳಿ ಈಗ ಬ್ಯಾಂಕಿಂಗ್‌ನ ಆರ್‌.ಟಿ.ಜಿ.ಎಸ್‌. ಮೂಲಕ ಭತ್ಯೆ ಪಾವತಿಸಲು ಮುಂದಾಗಿದೆ. ಆದರೆ, ಯಾರಿಗೂ ಈವರೆಗೆ ಭತ್ಯೆ ವಿತರಣೆ ಆಗಿಲ್ಲ.

ಬೆಂಗಳೂರು ಒಂದೇ ಮೌಲ್ಯಮಾಪನ ಕೇಂದ್ರವಾಗಿತ್ತು. ಖಾಸಗಿ ಮತ್ತು ಅನುದಾನಿತ ಕಾಲೇಜುಗಳ ಅತಿಥಿ ಉಪನ್ಯಾಸಕರೇ ಈ ಮೌಲ್ಯಮಾಪನ ಕಾರ್ಯದಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದರು. ಬಹುತೇಕರು ಹೋಟೆಲ್‌ಗಳಲ್ಲಿ ಉಳಿದುಕೊಂಡು, ನಿಗದಿತ ಕೇಂದ್ರಗಳಲ್ಲಿ ಮೌಲ್ಯಮಾಪನ ಕೆಲಸ ಮಾಡಿದ್ದರು. ಅದಕ್ಕಾಗಿ ಮೂರ್ನಾಲ್ಕು ಸಾವಿರ ಮೊತ್ತವನ್ನು ಕೈಯಿಂದ ಖರ್ಚು ಮಾಡಿಕೊಂಡಿದ್ದರು. ಸಕಾಲಕ್ಕೆ ಭತ್ಯೆ ಮಂಜೂರು ಆಗದ ಕಾರಣ, ಈಗ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಭತ್ಯೆಯನ್ನು ತ್ವರಿತವಾಗಿ ಕೊಡಲೆಂದೇ ಆರ್‌.ಟಿ.ಜಿ.ಎಸ್‌. ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಆದರೂ ವಿಳಂಬ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಇಲಾಖೆ ಅಧಿಕಾರಿಗಳು ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ’ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.

‘ಉಪನ್ಯಾಸಕರು ದಕ್ಷತೆಯಿಂದ ಮೌಲ್ಯಮಾಪನ ಕಾರ್ಯನಿರ್ವಹಿಸಿ, ಕಡಿಮೆ ದಿನಗಳಲ್ಲಿ ಫಲಿತಾಂಶ ಪ್ರಕಟಿಸಲು ಶ್ರಮಿಸಿದ್ದಾರೆ. ಅವರಿಗೆ ಸಲ್ಲಬೇಕಾದ ಭತ್ಯೆಗಳ ಕುರಿತು ಮಂಡಳಿಗೆ ವಿಚಾರಿಸಿದಾಗ, ಇನ್ನು ಕೆಲವೇ ದಿನಗಳಲ್ಲಿ ಮೊತ್ತ ಜಮೆ ಆಗಲಿದೆ ಎಂದು ಮೂರು ತಿಂಗಳಿನಿಂದ ಹೇಳುತ್ತಿದ್ದಾರೆ’ ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ವಿಚಾರಿಸಲು ಪಿ.ಯು. ಮಂಡಳಿ ನಿರ್ದೇಶಕಿ ಸಿ.ಶಿಖಾ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.

ಅಂಕಿ–ಅಂಶ

* 2.25 ಲಕ್ಷ –ಪೂರಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು

* 4,580 – ಮೌಲ್ಯಮಾಪನ ಕಾರ್ಯನಿರ್ವಹಿಸಿದ ಉಪನ್ಯಾಸಕರು

* ₹32 –ಪ್ರತಿ ಉತ್ತರಪತ್ರಿಕೆ ಮೌಲ್ಯಮಾಪನಕ್ಕೆ ನೀಗದಿಪಡಿಸಿದ್ದ ಮೊತ್ತ

‘ವಾರದಲ್ಲಿ ಭತ್ಯೆ ತಲುಪಲಿದೆ’

‘ಅನುದಾನದ ಕೊರತೆ ಹಾಗೂ ಆಗಾಗ ರಜೆಗಳು ಬಂದಿದ್ದರಿಂದ ಭತ್ಯೆ ಹಂಚಿಕೆಯಲ್ಲಿ ವಿಳಂಬವಾಗಿದೆ. ಭತ್ಯೆ ಪಾವತಿಸಲು ಲೆಕ್ಕಪತ್ರ ಇಲಾಖೆಗೆ ಉಪನ್ಯಾಸಕರು ಮೌಲ್ಯಮಾಪನ ಮಾಡಿದ ಪತ್ರಿಕೆಗಳ ಸಂಖ್ಯೆ ಮತ್ತು ಖಾತೆ ವಿವರಗಳನ್ನು ನ.9ರಂದು ರವಾನಿಸಿದ್ದೇವೆ. ಇನ್ನು ಒಂದು ವಾರದೊಳಗೆ ಎಲ್ಲರ ಖಾತೆಗೆ ಭತ್ಯೆ ಮೊತ್ತ ಜಮೆ ಆಗಲಿದೆ’ ಎಂದು ಪದವಿ ಪೂರ್ಣ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT