ಹೆಬ್ಬಾಳ ಬಳಿ ಪ್ರಯಾಣಿಕರ ಹಬ್‌: ತಜ್ಞ ಸಂಸ್ಥೆಯಿಂದ ವಿನ್ಯಾಸ

ಮಂಗಳವಾರ, ಜೂನ್ 18, 2019
29 °C
ಒಂದೇ ಸೂರಿನಡಿ ಮೆಟ್ರೊ, ಉಪನಗರ ರೈಲು, ಬಸ್ ನಿಲ್ದಾಣಗಳ ಸೌಲಭ್ಯ ಕಲ್ಪಿಸುವ ಯೋಜನೆ

ಹೆಬ್ಬಾಳ ಬಳಿ ಪ್ರಯಾಣಿಕರ ಹಬ್‌: ತಜ್ಞ ಸಂಸ್ಥೆಯಿಂದ ವಿನ್ಯಾಸ

Published:
Updated:

ಬೆಂಗಳೂರು: ವಿಮಾನ ನಿಲ್ದಾಣ ರಸ್ತೆಯಲ್ಲಿನ ಹೆಬ್ಬಾಳದಲ್ಲಿ ಮೆಟ್ರೊ, ಉಪನಗರ ರೈಲು, ಬಸ್ ನಿಲ್ದಾಣ, ಎಲಿವೇಟೆಡ್ ಕಾರಿಡಾರ್‌ ಸಂಪರ್ಕ ಎಲ್ಲವೂ ಒಂದೇ ಸೂರಿನಡಿ ಪ್ರಯಾಣಿಕರಿಗೆ ಸಿಗುವಂತೆ ಮಾಡುವ ಯೋಜನೆಯೊಂದನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ರೂಪಿಸುತ್ತಿದೆ. ಯೋಜನೆಯ ವಿನ್ಯಾಸ ಸಿದ್ಧಪಡಿಸುವ ಕೆಲಸವನ್ನು ತಜ್ಞ ಸಂಸ್ಥೆಯೊಂದಕ್ಕೆ ಒಪ್ಪಿಸಿದೆ. 

ಹೆಬ್ಬಾಳದ ಮೂಲಕ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ. ‘ಮೆಟ್ರೋ ಯೋಜನೆ ಒಂದನ್ನೇ ರೂಪಿಸುವ ಬದಲು‌‌ ಹೆಬ್ಬಾಳ ಜಂಕ್ಷನ್‌ನಲ್ಲಿ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಗಳನ್ನು ಒಗ್ಗೂಡಿಸಿ ಅದಕ್ಕೆ ಪೂರಕ ಮೂಲಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದರು.

ಎಸ್ಟೀಮ್ ಮಾಲ್‌ನಿಂದ ನಗರದ ಕಡೆಗೆ ವಾಹನಗಳ ಚಲನೆಯನ್ನು ಸುಲಭಗೊಳಿಸಲು ಹೆಬ್ಬಾಳ ಫ್ಲೈಓವರ್‌ಗೆ ಸಂಪರ್ಕ ಕಲ್ಪಿಸಲು ಆರು ಲೂಪ್‌ಗಳ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಉದ್ದೇಶಿಸಿದೆ. ಬಿಎಂಟಿಸಿ ಬಸ್‌ ಸೇರಿ ಬಹು ಮಾದರಿಯ ಪ್ರಯಾಣಿಕರ ಹಬ್‌ ಅನ್ನು ಹೆಬ್ಬಾಳ ಬಳಿ ನಿರ್ಮಿಸುವ ಬಗ್ಗೆ 2019–20ರ ಬಜೆಟ್‌ನಲ್ಲಿ ಸರ್ಕಾರ ಪ್ರಸ್ತಾಪಿಸಿದೆ. ಉದ್ದೇಶಿತ ಉಪನಗರ ರೈಲು ನಿಲ್ದಾಣ ಕೂಡ ಇದೇ ಜಂಕ್ಷನ್ ಮೂಲಕ ಹಾದು ಹೋಗಲಿದೆ.

ಈ ಎಲ್ಲಾ ಯೋಜನೆಗಳನ್ನು ಪ್ರತ್ಯೇಕವಾಗಿ ಅನುಷ್ಠಾನಗಳಿಸುತ್ತಿರುವ ಸಂಸ್ಥೆಗಳು ಸಭೆ ನಡೆಸಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಲು ನಿರ್ಧರಿಸಿದ್ದವು. ‘ಬಹು ಮಾದರಿಯ ಪ್ರಯಾಣಿಕರ ಹಬ್ ಕೆಲವೇ ವರ್ಷಗಳಿಗೆ ಸೀಮಿತವಾದ ಯೋಜನೆಯಲ್ಲ. 2051ರವರೆಗೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗದಂತೆ ಮುಂದಾಲೋಚನೆ ಇಟ್ಟುಕೊಂಡು ಯೋಜನೆಯ ವಿನ್ಯಾಸ ರೂಪಿಸಲಾಗುತ್ತಿದೆ. ತಡೆರಹಿತವಾಗಿ ವಾಹನಗಳು ಸಾಗುವಂತೆ ನೋಡಿಕೊಳ್ಳುವುದು, ಪ್ರಯಾಣಿಕರಿಗೆ ಹೊರೆಯಾಗದಂತೆ ಸಮೂಹ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದು ಇದರ ಪ್ರಮುಖ ಉದ್ದೇಶ’ ಎಂದು ಸೇಠ್‌ ಹೇಳಿದರು.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯ ವಿನ್ಯಾಸವನ್ನು ತಜ್ಞ ಸಂಸ್ಥೆ ರೂಪಿಸಲಿದೆ. ಮುಂದಿನ ದಿನಗಳಲ್ಲಿ ಜನರು ಸಮೂಹ ಪ್ರಯಾಣವನ್ನೇ ಹೆಚ್ಚು ಅವಲಂಬಿಸಲಿದ್ದಾರೆ ಎಂಬುದು ಅಧಿಕಾರಿಗಳ ವಿಶ್ವಾಸ.

ಯೋಜನಾ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುತ್ತಿದೆ. ವಿಮಾನ ನಿಲ್ದಾಣ ಮಾರ್ಗದ ಮೆಟ್ರೊ ರೈಲು ಕಾಮಗಾರಿ ಮೇಲೆ ಇದರ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !