ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಮತರಾಜಕಾರಣ: ಕಾಂಗ್ರೆಸ್ ಕೊಟ್ಟಿದ್ದೆಷ್ಟು? ಪಡೆದಿದ್ದೆಷ್ಟು?

Last Updated 18 ಫೆಬ್ರುವರಿ 2019, 5:31 IST
ಅಕ್ಷರ ಗಾತ್ರ

‘ಜೆಡಿಎಸ್ ಎಂಬುದು ಪ್ರತ್ಯೇಕ ಪ್ರಾದೇಶಿಕ ಪಕ್ಷವಲ್ಲ, ಅದು ಬಿಜೆಪಿಯ ಬಿ ಟೀಮು’. ಹೀಗೆಂದು ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಹೇಳಿದ್ದರು. ಈ ವಾದವನ್ನು ವಿಸ್ತರಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್‌ನಲ್ಲಿರುವ ‘ಎಸ್’ ಅಂದರೆ ಸೆಕ್ಯುಲರಿಸಂ ಅಲ್ಲ, ಅದು ‘ಸಂಘ ಪರಿವಾರ’ ಎಂದು ಕಿಚಾಯಿಸಿದ್ದರು. ಮತ್ತೂ ಮುಂದೆ ಹೋದ ಸಿದ್ದರಾಮಯ್ಯ ‘ಕುಮಾರಸ್ವಾಮಿ–ಅಮಿತ್ ಶಾ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದಾರೆ. ಚುನಾವಣೋತ್ತರ ಮಾತುಕತೆ ನಡೆಸಿದ್ದಾರೆ. ಅದಕ್ಕೆ ನನ್ನಲ್ಲಿ ದಾಖಲೆಗಳಿವೆ’ ಎಂದು ಹೇಳಿದ್ದರು.

ಜೆಡಿಎಸ್ ಕುರಿತು ಕಾಂಗ್ರೆಸ್ ಹೀಗೆ ಹೇಳಿದ್ದರ ಹಿಂದಿನ ರಣತಂತ್ರವೂ ಸ್ಪಷ್ಟ. ಕಾಂಗ್ರೆಸ್ಸಿಗರ ಮನಸ್ಸಿನಲ್ಲಿದ್ದುದು ಶೇ 13 ರಷ್ಟಿರುವ ಮುಸ್ಲಿಂ ಮತಗಳು ಸ್ವಲ್ಪವೂ ಆಚೆ–ಈಚೆ ಆಗದೆ ಸಾರಾಸಗಟಾಗಿ ತನಗೇ ಬರಬೇಕೆಂಬುದು. ಮುಸ್ಲಿಮರು ರಾಜಕೀಯವಾಗಿ ಎಚ್ಚೆತ್ತ ಸಮುದಾಯ, ಲೆಕ್ಕಾಚಾರದ ಮತದಾನದಲ್ಲಿ ಅವರದು ಎತ್ತಿದ ಕೈ. ಕರ್ನಾಟಕದ ಮಟ್ಟಿಗೆ ಮುಸ್ಲಿಂ ಮತಗಳ ಮೇಲೆ ಕಾಂಗ್ರೆಸ್ಸ್‌ನ ಏಕಸ್ವಾಮ್ಯ ಹಿಡಿತ. ಮುಸ್ಲಿಂ ಮತಗಳ ಬುಟ್ಟಿಗೆ ಬೇರೆ ಯಾರೂ ಕೈ ಹಾಕುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಜೆಡಿಎಸ್‌ ಬಿಜೆಪಿಯ ಜೊತೆಗೆ ಹೋಗುವ ಪಕ್ಷ ಎಂದು ಪ್ರಚಾರ ಮಾಡುವುದಷ್ಟೇ ಅಲ್ಲ, ಎಸ್‌ಡಿಪಿಐನಂತಹ ಸಣ್ಣ ಗುಂಪನ್ನು ಕಾಂಗ್ರೆಸ್ ಗಂಭೀರವಾಗಿಯೇ ಪರಿಗಣಿಸುತ್ತದೆ. ಎಸ್‌ಡಿಪಿಐ ಮೇಲಿನ ಕೋಮು ಗಲಭೆಯ ಪ್ರಕರಣಗಳನ್ನು ವಾಪಸ್ ಪಡೆಯುವುದರಿಂದ ಹಿಡಿದು ‘ಬಿಜೆಪಿ ಗುಮ್ಮ’ವನ್ನು ತೋರಿಸಿ ನಾಮಪತ್ರ ವಾಪಸು ತೆಗೆಸುವವರೆಗೂ ಕಾಂಗ್ರೆಸ್ ತನ್ನೆಲ್ಲ ಶಕ್ತಿ ಬಳಸುತ್ತದೆ.

ಫಲಿತಾಂಶದ ನಂತರ ನೋಡಿದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್ಸಿಗೆ ಸಗಟಾಗಿ ಬೆಂಬಲಿಸಿರುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಮತಗಳ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ವಿಶ್ಲೇಷಿಸಿರುವುದು ಕುತೂಹಲಕಾರಿಯಾಗಿದೆ. ‘ನನಗೆ ಸ್ಪಷ್ಟ ಮಾಹಿತಿ ಇದೆ. ಮುಸ್ಲಿಂ ಮೌಲ್ವಿಗಳ ಹಾಗೂ ನಿವೃತ್ತ ಅಧಿಕಾರಿಗಳ ಕಾಂಗ್ರೆಸ್ ಪ್ರಾಯೋಜಿತ ತಂಡವೊಂದು ಕಳೆದ 8–10 ತಿಂಗಳಿಂದ ರಾಜ್ಯದಲ್ಲಿ ಓಡಾಡಿ ಜೆಡಿಎಸ್ ವಿರುದ್ಧ ಅಭಿಪ್ರಾಯ ರೂಪಿಸಿದೆ. ರಾಮನಗರದ ಮತ ಎಣಿಕೆಯಲ್ಲಿ 26 ಸಾವಿರ ಮತಗಳಿಂದ ಮುಂದಿದ್ದ ನನಗೆ ಮುಸ್ಲಿಂ ಮತಗಟ್ಟೆಗಳ ಪ್ರವೇಶ ಆಗುತ್ತಿದ್ದಂತೆಯೇ ನನ್ನ ಮುನ್ನಡೆ 150ಕ್ಕೆ ಕುಸಿಯಿತು. ಮತ್ತೆ ಚೇತರಿಕೆ ಆಯಿತು. ಮುಸ್ಲಿಂ ಸಮಾಜ ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಶೇ 50 ರಷ್ಟು ಮತಗಳು ನಮಗೆ ಬಂದಿದ್ದರೆ ನಮ್ಮ ಸಂಖ್ಯೆ 70 ದಾಟುತ್ತಿತ್ತು. ರಾಜ್ಯದ ಚಿತ್ರವೇ ಬೇರೆ ಇರುತ್ತಿತ್ತು’ (www.theweek.in).

ಪಾಪ ಜೆಡಿಎಸ್‌ನಲ್ಲಿ ಹೇಳಿಕೊಳ್ಳುವಂತಹ ಮುಸ್ಲಿಂ ನಾಯಕರಿಲ್ಲ, ಆದರೂ ಜೆಡಿಎಸ್‌ ಕಾಂಗ್ರೆಸ್‌ಗಿಂತ ಹೆಚ್ಚು ಅಂದರೆ 19 ಕಡೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತು. ಬಹುಮತ ಕೊಡಿ, ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಭರವಸೆ ನೀಡಿತು.

ಇಡೀ ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಂದರೆ ಶೇ 33 ರಷ್ಟು ಮುಸ್ಲಿಂ ಬಾಹುಳ್ಯವಿರುವ ತಾಲ್ಲೂಕು ಭಟ್ಕಳ. ಕಾಂಗ್ರೆಸ್ ಇಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡುವುದನ್ನು ನಿಲ್ಲಿಸಿ ದಶಕಗಳೇ ಆಯ್ತು. ಆದರೆ ಜೆಡಿಎಸ್ 2013ರಲ್ಲಿಯೂ ಇಲ್ಲಿ ಟಿಕೆಟ್‌ ನೀಡಿತ್ತು. ಈ ಸಲವೂ ನೀಡಿತು. ಅಲ್ಲಿನ ಮತೀಯ ಶಕ್ತಿಗಳ ಪ್ರಾಬಲ್ಯ ಜೆಡಿಎಸ್ ಅಭ್ಯರ್ಥಿಗೆ ಸ್ಪರ್ಧೆ ಮಾಡದಂತೆ ತಾಕೀತು ಮಾಡಿತು. ಆ ಅಭ್ಯರ್ಥಿ ಹಿಂದೆ ಸರಿದರು. ಮತ್ತೊಬ್ಬರನ್ನು ಹುಡುಕಿ ಬಿ ಫಾರಂ ಕೊಟ್ಟರೂ ಅವರು ನಾಮಪತ್ರ ಸಲ್ಲಿಸಲಿಲ್ಲ. ಯಾದಗಿರಿ, ಹುಮನಾಬಾದ್, ಖಾನಾಪುರ ಬಿಟ್ಟರೆ ಬೇರೆಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗಂಭೀರ ಸ್ಪರ್ಧೆ ನೀಡಲಿಲ್ಲ. ಎಸ್‌ಡಿಪಿಐ ಕಳೆದ ಸಲ 25 ಕಡೆ ಸ್ಪರ್ಧಿಸಿತ್ತು. ಈ ಸಲ ಗೆಲ್ಲುವ 17 ಕಡೆ ಸ್ಪರ್ಧಿಸುವುದಾಗಿ ಹೇಳಿತು. ಕೊನೆಗೆ 6 ಕಡೆಗಳಲ್ಲಿ ಸ್ಪರ್ಧೆ ನಿಶ್ಚಿತ ಎಂದು ಘೋಷಿಸಲಾಯಿತು.

ಆದರೆ ಕಾಂಗ್ರೆಸ್‌ನ ಒಳ ಒತ್ತಡದಿಂದ ಬಂಟ್ವಾಳ, ಮಂಗಳೂರನ್ನೂ ಬಿಟ್ಟುಕೊಟ್ಟು ಮೈಸೂರಿನ ನರಸಿಂಹರಾಜ ಹಾಗೂ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮಾತ್ರ ಸ್ಪರ್ಧಿಸಿತು. ರಾಜ್ಯದಲ್ಲಿ ಏಳೆಂಟು ಸಾವಿರದಿಂದ ಹಿಡಿದು 70 ಸಾವಿರದವರೆಗೆ ಮುಸ್ಲಿಂ ಮತ ಸಾಂದ್ರತೆ ಇರುವ 150 ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲೆಲ್ಲ ಕಾಂಗ್ರೆಸ್‌ಗೆ ನಿಚ್ಚಳವಾಗಿ ಲಾಭವಾಗಿದೆ. ಮುಸ್ಲಿಂ ಸಮಾಜದ ಈ ಸಮರ್ಪಿತ ಮತದಾನಕ್ಕೆ ಪ್ರತಿಯಾಗಿ ಕಾಂಗ್ರೆಸ್ ಏನು ಕೊಟ್ಟಿದೆ?

1992ರ ಅಯೋಧ್ಯೆ ಘಟನೆಯಲ್ಲಿ ಬಾಬರಿ ಕಟ್ಟಡ ಉಳಿಸುವಲ್ಲಿ ವಿಫಲರಾದ ಪಿ.ವಿ. ನರಸಿಂಹರಾವ್ ವಿರುದ್ಧದ ಆಕ್ರೋಶದಿಂದಾಗಿ ಮುಸ್ಲಿಂ ಸಮುದಾಯ ಕಾಂಗ್ರೆಸ್ಸಿನಿಂದ ದೂರ ಸರಿಯಿತು. ತೃತೀಯ ಶಕ್ತಿಗಳೆನಿಸಿದ ಎಸ್‌ಪಿ, ಬಿಎಸ್‌ಪಿ, ಆರ್‌ಜೆಡಿ, ಡಿಎಂಕೆ, ಟಿಡಿಪಿ ಪಕ್ಷಗಳತ್ತ ಮುಸ್ಲಿಂ ಮತಗಳು ಹೊರಳಿದವು. ಆ ಕಾಲಘಟ್ಟದಲ್ಲೇ ದೇವೇಗೌಡರು ಮುಖ್ಯಮಂತ್ರಿ ಆದದ್ದು. ಆಗಲೂ ಜನತಾ ಪರಿವಾರಕ್ಕೆ ಮುಸ್ಲಿಂ ಮತಗಳು ಹಿಡಿತಕ್ಕೆ ಸಿಕ್ಕಿರಲಿಲ್ಲ. ಹೀಗಿರುವಾಗ ಬಿಜೆಪಿ ಸಖ್ಯದ ಕಳಂಕ ಎಷ್ಟು ವಾಸ್ತವ ಅನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಕಾಂಗ್ರೆಸ್ ಸರ್ಕಾರ ಬಂದಾಗಲಷ್ಟೆ ಎರಡಂಕಿ ದಾಟುವ ಮುಸ್ಲಿಂ ಶಾಸಕರ ಪ್ರಾತಿನಿಧ್ಯ ಈವರೆಗಿನ ಅತ್ಯಧಿಕ 15 ತಲುಪಿದ್ದು 1978ರಲ್ಲಿ ಮಾತ್ರ!

ಅಹಿಂದ ನಾಯಕರೆಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟು ಹಿಂದುಳಿದ, ದಲಿತ ಮತಗಳನ್ನು ವರ್ಗಾವಣೆ ಮಾಡಿ ಗೆಲ್ಲಿಸುವ ಶಕ್ತಿ ಇದೆಯೇ ಎಂಬುದು ವಸ್ತುನಿಷ್ಠ ಚರ್ಚೆಗೆ ಒಳಪಡಬೇಕಾದ ವಿಷಯ. ಕುಮಾರಸ್ವಾಮಿಯವರೂ ಸೇರಿದಂತೆ ಉಳಿದ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್ ಅವರಲ್ಲಿಯೂ ಈ ದೌರ್ಬಲ್ಯ ಇದೆ.

ಬಿಜೆಪಿಯ ಹಿಂದು ಸಂಘಟನೆ ಹಾಗೂ ಕಾಂಗ್ರೆಸ್–ಜೆಡಿಎಸ್ ನಾಯಕರ ಓಟು ಹಾಕಿಸಲಾಗದ ನಿಶ್ಶಕ್ತಿಯ ನಡುವೆ ಮುಸ್ಲಿಮರಿಗೆ ಶೇ 50 ರಷ್ಟು ಮುಸ್ಲಿಮರಿರುವ ಕ್ಷೇತ್ರಗಳಷ್ಟೇ ಸುರಕ್ಷಿತ ಎಂಬಂತಾಗಿದೆ.

ನಮ್ಮದು ನುಡಿದಂತೆ ನಡೆದ ಸರ್ಕಾರ. ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಆಶ್ವಾಸನೆ ಈಡೇರಿಸಿದ್ದೇವೆಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರೂ ಸಾಚಾರ್ ಆಯೋಗದ ಶಿಫಾರಸುಗಳ ವಿಷಯ ಏನಾಯಿತು? ಪ್ರತಿ ಜಿಲ್ಲೆಯಲ್ಲೂ ಮುಸ್ಲಿಂ ಮಕ್ಕಳಿಗಾಗಿ ಉಚಿತ ವಸತಿ ಶಾಲೆ ಎಷ್ಟಾಯಿತು? ಎಲ್ಲೆಲ್ಲಿ ಆಯಿತು? ವಕ್ಫ್ ಆಸ್ತಿಯ ಒತ್ತುವರಿಯ ಬಗ್ಗೆ ಹೊಸ ಸರ್ವೇಕ್ಷಣ ಭರವಸೆ ಏನಾಯ್ತು? ಭಾರಿ ಹೆಗ್ಗಳಿಕೆಗೆ ಪಾತ್ರವಾಗಿದ್ದ ಶಾದಿಭಾಗ್ಯ ಯೋಜನೆಯಲ್ಲಿ 31 ಸಾವಿರ ಅರ್ಜಿಗಳು ವಿಲೇವಾರಿಯಾಗದೆ ಉಳಿದಿದೆಯಲ್ಲ ಏಕೆ? ಈ ಪ್ರಶ್ನೆಗಳನ್ನು ಚುನಾವಣೆಯಲ್ಲಿ ಎಸ್‌ಡಿಪಿಐ ಎತ್ತಿದೆ. ಆದರೆ ಕಾಂಗ್ರೆಸ್‌ನ ಜಾಣಕಿವುಡರಿಗೆ ಈ ಪ್ರಶ್ನೆಗಳು ಕೇಳಿಸುವುದಿಲ್ಲ.

800 ವರ್ಷ ದೇಶವನ್ನಾಳಿದ ಮುಸ್ಲಿಂ ಸಮಾಜ ಏಕೆ ಈ ದುಃಸ್ಥಿತಿಗೆ ಬಂದು ನಿಂತಿದೆ? ಇದಕ್ಕೆ ಕಾಂಗ್ರೆಸ್ಸನ್ನಲ್ಲದೆ ಇನ್ಯಾರನ್ನು ಹೊಣೆಗಾರರನ್ನಾಗಿ ಮಾಡುವುದು? ಬರಲಿರುವ ರಾಮನಗರ ಉಪಚುನಾವಣೆಯಲ್ಲೂ ಉತ್ತರ ಸಿಗುವ ಸಾಧ್ಯತೆ ಇದ್ದಂತಿಲ್ಲ.

ಇಳಿಕೆಯಾದ ಟಿಕೆಟ್‌ ನೀಡಿಕೆ

ಮುಸ್ಲಿಂ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್‌ ಕೊಡುವ ಪ್ರಮಾಣವೂ ಇಳಿಯುತ್ತಿದೆ. ಶೇ 15 ರಷ್ಟಿರುವ ಲಿಂಗಾಯತರಿಗೆ 48, ಶೇ 10 ರಷ್ಟಿರುವ ಒಕ್ಕಲಿಗರಿಗೆ 40 ಟಿಕೆಟ್ ಕೊಡುವ ಕಾಂಗ್ರೆಸ್ ಶೇ 13.6 ರಷ್ಟಿರುವ ಮುಸ್ಲಿಂ ಸಮಾಜಕ್ಕೆ 17 ಟಿಕೆಟ್ ನೀಡುತ್ತದೆ. ಒಕ್ಕಲಿಗರು ಜೆಡಿಎಸ್‌ಗೂ, ಲಿಂಗಾಯತರು ಬಿಜೆಪಿಗೂ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸುತ್ತಾರೆಂದು ಕಾಂಗ್ರೆಸ್‌ನ ಚಿಂತಕರು ಬಹಿರಂಗವಾಗಿಯೇ ಒಪ್ಪಿಕೊಳ್ಳುತ್ತಾರೆ. ಆದರೆ ನಂಬಿಕಸ್ಥ ಮತದಾರರಾಗಿರುವ ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಟಿಕೆಟ್ ಕೊಡಲು ಮೀನಮೇಷ ಎಣಿಸುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದು ಬಿಡುತ್ತದೆ ಎಂಬ ಭಯಬಿತ್ತಿ ಈ ‘ಅನ್ಯಾಯ’ ಚರ್ಚೆಗೂ ಬಾರದಂತೆ ನೋಡಿಕೊಳ್ಳಲಾಗುತ್ತದೆ. ಬಿಜೆಪಿಯ ಪ್ರಾಬಲ್ಯದಿಂದ ಮುಸ್ಲಿಂ ಪ್ರಾತಿನಿಧ್ಯಕ್ಕೆ ತಡೆ ಉಂಟಾದ ಕ್ಷೇತ್ರಗಳೆಂದರೆ ಮಂಗಳೂರು ಉತ್ತರ, ಹುಬ್ಬಳ್ಳಿ ಪಶ್ಚಿಮ, ಬೆಳಗಾವಿ ಉತ್ತರ, ವಿಜಯಪುರ, ಭಟ್ಕಳ, ಶಿಗ್ಗಾವಿ, ಗಂಗಾವತಿ, ಚಿಕ್ಕಮಗಳೂರು, ತುಮಕೂರು. ಇದರಲ್ಲಿ ಹುಬ್ಬಳ್ಳಿ, ಶಿಗ್ಗಾವಿ, ಚಿಕ್ಕಮಗಳೂರಿನಲ್ಲಿ ಬಿಜೆಪಿ ಸತತವಾಗಿ ಗೆದ್ದಿದೆ. ರಾಮನಗರ, ಹೆಬ್ಬಾಳ, ಜಯನಗರ, ಚಿಕ್ಕಪೇಟೆ, ದಾವಣಗೆರೆ, ಹೊಸಪೇಟೆ, ಖಾನಾಪುರ, ಹುಮನಾಬಾದ್ ಈ ಕ್ಷೇತ್ರಗಳಲ್ಲಿ ಮುಸ್ಲಿಮರ ಜಾಗಕ್ಕೆ ಜೆಡಿಎಸ್–ಕಾಂಗ್ರೆಸ್‌ನ ಬಲಾಢ್ಯರು ನುಗ್ಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ದಾವಣಗೆರೆ, ಹೆಬ್ಬಾಳ, ಜಯನಗರ, ರಾಮನಗರದಲ್ಲಿ ಒಂದೇ ಕುಟುಂಬದವರಿಗೆ ಸ್ಥಳಾವಕಾಶ ಒದಗಿಸಲು ಮುಸ್ಲಿಂ ಸಮಾಜಕ್ಕೆ ಕತ್ತರಿ ಹಾಕಿರುವುದನ್ನು ಕಾಣಬಹುದು. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ‘ಮೀಸಲಾತಿ’ಗೆ ಒಳಗಾದ ಪುಲಿಕೇಶಿನಗರ, ಶಿರಹಟ್ಟಿ, ಕೂಡ್ಲಿಗಿ, ಕುಡಚಿ ಕ್ಷೇತ್ರಗಳು ಮುಸ್ಲಿಂ ಸಮುದಾಯದಿಂದ ಹೊರಹೋಗಿದೆ.

ದಳಕ್ಕೆ ಒಲಿಯದ ಮುಸ್ಲಿಂ ಜನಾಂಗ

ಮುಸ್ಲಿಂ ಸಮಾಜವನ್ನು ಶಹರೀ ಸಮಾಜ, ವ್ಯಾಪಾರಿ ಸಮುದಾಯವೆಂದು ಗುರುತಿಸಲಾಗುತ್ತಿದೆ. ಕೇರಳದಂಚಿನ ಕೊಡಗು, ಕರಾವಳಿ ಪ್ರದೇಶವನ್ನು ಬಿಟ್ಟರೆ ಮುಸ್ಲಿಂ ಬಾಹುಳ್ಯ ಇರುವುದು ನಗರ, ಅರೆನಗರ ಪ್ರದೇಶಗಳಲ್ಲಿ. ಬಹುತೇಕ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಮುಸ್ಲಿಂ ಸಾಂದ್ರತೆ ಗುರುತಿಸಬಹುದು. ಚಾರಿತ್ರಿಕ ಕಾರಣಗಳಿಂದಾಗಿ ಕರಾವಳಿ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಮುಸ್ಲಿಂ ಸಾಂದ್ರತೆ ತುಸು ಹೆಚ್ಚೇ ಇದೆ. ಈ ಸಲ ಟಿಪ್ಪು ಜಯಂತಿ, ಹಿಂದು ಕಾರ್ಯಕರ್ತರ ಹತ್ಯೆ, ಪಿಎಫ್‌ಐ ಇತ್ಯಾದಿ ವಿಷಯಗಳನ್ನು ಇಟ್ಟುಕೊಂಡು ಬಿಜೆಪಿ ರಸ್ತೆಗೆ ಇಳಿದಿದ್ದರಿಂದ ಮುಸ್ಲಿಂ ಸಮುದಾಯ ಸಹಜವಾಗಿ ಕಾಂಗ್ರೆಸ್‌ನತ್ತ ಮುಖ ಮಾಡಿತ್ತು.

ಇಷ್ಟಾದರೂ ಕಾಂಗ್ರೆಸ್ ಟಿಕೆಟ್‌ ಕೊಟ್ಟಿದ್ದು 17 ಕ್ಷೇತ್ರಗಳಲ್ಲಿ ಮಾತ್ರ. ಕಳೆದ ಸಲಕ್ಕೆ ಹೋಲಿಸಿದರೆ 2 ಸ್ಥಾನಕ್ಕೆ ಕತ್ತರಿ, ಅದೂ ಜೆಡಿಎಸ್‌ನಿಂದ ಇಬ್ಬರು ಹಾಲಿ ಶಾಸಕರೂ ಸೇರಿದ ನಂತರ! 2013ರಲ್ಲಿ ಕಾಂಗ್ರೆಸ್ 10, ಜೆಡಿಎಸ್ 2 ಒಟ್ಟು 12 ಮುಸ್ಲಿಂ ಶಾಸಕರಿದ್ದರು. ಈ ಸಲ ಗೆದ್ದದ್ದು 7 ಕಾಂಗ್ರೆಸ್ಸಿಗರು ಮಾತ್ರ.

ಬಿಜೆಪಿ ಶಾಸಕರ ಸಂಖ್ಯೆ ಏರಿದಂತೆ ಮುಸ್ಲಿಂ ಶಾಸಕರ ಸಂಖ್ಯೆ ಇಳಿಯುತ್ತದೆ ಎಂಬ ವಾದವಿದೆ. ಈ ಸಲ ಹಾಲಿ ಮುಸ್ಲಿಂ ಶಾಸಕರು ಸೋತ ಐದು ಕ್ಷೇತ್ರಗಳು ಬಿಜೆಪಿಯ ಪಾಲಾಗಿವೆ. 2004ರಲ್ಲಿ ಬಿಜೆಪಿ 78 ಸ್ಥಾನ ಗಳಿಸಿದಾಗ ಸದನದಲ್ಲಿ 7 ಮುಸ್ಲಿಂ ಶಾಸಕರಿದ್ದರು. 2008 ರಲ್ಲಿ ಬಿಜೆಪಿ ಶಾಸಕರ ಸಂಖ್ಯೆ 110ಕ್ಕೆ ಏರಿದಾಗ ಮುಸ್ಲಿಂ ಶಾಸಕರ ಸಂಖ್ಯೆ 8. ಇದು ಬಿಜೆಪಿ ಗಾಳಿಯಿಂದ ಆಗುವ ವ್ಯತ್ಯಾಸ ಎನ್ನುವುದು ಸತ್ಯವಲ್ಲ. ಕಾಂಗ್ರೆಸ್ಸೇತರ ಸರ್ಕಾರ ಬಂದಾಗಲೆಲ್ಲ ಹೀಗೆ ಆಗಿದೆ. 1983ರಲ್ಲಿ ಮೊದಲ ಬಾರಿಗೆ ಜನತಾ ರಂಗ ಸರ್ಕಾರ ಬಂದಾಗ ಸದನಕ್ಕೆ ಬಂದದ್ದು ಕೇವಲ ಇಬ್ಬರು ಮುಸ್ಲಿಂ ಶಾಸಕರು.

1985ರಲ್ಲಿ ಮತ್ತೆ ಜನತಾರಂಗ ಮರು ಆಯ್ಕೆಯಾದಾಗ ಮುಸ್ಲಿಂ ಪ್ರಾತಿನಿಧ್ಯ 9ಕ್ಕೆ ಬಂದಿತು. 1994ರಲ್ಲಿ ಮತ್ತೆ ಜನತಾ ಪರಿವಾರ ಅಧಿಕಾರಕ್ಕೆ ಬಂದು ದೇವೇಗೌಡರು ಮುಖ್ಯಮಂತ್ರಿ ಆದಾಗಲೂ ಸದನದಲ್ಲಿ ಮುಸ್ಲಿಂ ಶಾಸಕರಿದ್ದದ್ದು ಐವರು ಮಾತ್ರ. ಮುಸ್ಲಿಂ ಸಮಾಜಕ್ಕೆ ಓಬಿಸಿ ಮೀಸಲಾತಿ ಕೊಟ್ಟಿದ್ದು, ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದಕ್ಕೆ ಪರಿಹಾರ ಹುಡುಕಿದ್ದು ಈ ಎಲ್ಲ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆಯಾದರೂ ಓಟು–ಸೀಟು ಜನತಾದಳಕ್ಕೆ ಬಂದದ್ದು ಕಡಿಮೆಯೆ!

(ಲೇಖಕ: ಆರ್‌ಎಸ್ಎಸ್ ವಿಚಾರಧಾರೆ ಲೇಖಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT