ಕಂಡಕ್ಟರ್ ಹುದ್ದೆ ಪ್ರಶ್ನೆಪತ್ರಿಕೆಸೋರಿಕೆ: ಗುರೂಜಿ ಗ್ಯಾಂಗ್‌ನ ಮತ್ತೊಂದು ಅಕ್ರಮ

7
ವಿಜಯಪುರದ ಟ್ಯೂಟೋರಿಯಲ್ ನೌಕರನ ಸೆರೆ

ಕಂಡಕ್ಟರ್ ಹುದ್ದೆ ಪ್ರಶ್ನೆಪತ್ರಿಕೆಸೋರಿಕೆ: ಗುರೂಜಿ ಗ್ಯಾಂಗ್‌ನ ಮತ್ತೊಂದು ಅಕ್ರಮ

Published:
Updated:

ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮದ ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ‘ಗುರೂಜಿ’ಯು 2018ರ ಜೂನ್ 10ರಂದು ಬಿಎಂಟಿಸಿ ನಡೆಸಿದ್ದ ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಕಿರಿಯ ಸಹಾಯಕ ಕಂ–ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಪರೀಕ್ಷೆಯಲ್ಲೂ ಅಕ್ರಮ ಎಸಗಿರುವುದು ಸಿಸಿಬಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಅಕ್ರಮದಲ್ಲಿ ಶಿವಕುಮಾರಯ್ಯನಿಗೆ ಸಹಕರಿಸಿದ ಆರೋಪದಡಿ ಬಸಪ್ಪ ಭಜಂತ್ರಿ ನಿಂಗೋಡ್ ಎಂಬಾತನನ್ನು ಸಿಸಿಬಿ ಬಂಧಿಸಿದೆ. ವಿಜಯಪುರದ ಮೀನಾಕ್ಷಿ ವೃತ್ತದಲ್ಲಿರುವ ‘ಚಾಣಕ್ಯ ಕರಿಯರ್ ಅಕಾಡೆಮಿ’ ಟ್ಯುಟೋರಿಯಲ್‌ನಲ್ಲಿ ಈತ ಕೆಲಸ ಮಾಡುತ್ತಿದ್ದ.

ಬಾಯ್ಬಿಟ್ಟ ಕಂಡಕ್ಟರ್: ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಆರೋಪದಡಿ 2018ರ ಡಿ.18ರಂದು ಸಿಸಿಬಿ ಮಡಿಕೇರಿಯಲ್ಲಿ ಶಿವಕುಮಾರಯ್ಯನನ್ನು ಬಂಧಿಸಿತ್ತು. ಆತನನ್ನು ವಿಚಾರಣೆ ನಡೆಸಿದಾಗ ತುಮಕೂರಿನ ಬಸವರಾಜು ಹಾಗೂ ವಿಜಯಪುರದ ಸೋಮಪ್ಪ ಯಮನಪ್ಪ ಮೇಲಿನಮನಿ ಎಂಬುವರ ಹೆಸರು ಬಾಯ್ಬಿಟ್ಟಿದ್ದ.

ಅವರಿಬ್ಬರ ಪೂರ್ವಾಪರ ಪರಿಶೀಲಿಸಿದಾಗ ಸೋಮಪ್ಪ 2018ರ ಜೂನ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಬಿಎಂಟಿಸಿ ನಿರ್ವಾಹಕನಾಗಿ ಆಯ್ಕೆಯಾಗಿದ್ದ. ಈ ಫಲಿತಾಂಶದಿಂದ ಅನುಮಾನಗೊಂಡ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಬಿಎಂಟಿಸಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿತ್ತು ಎಂಬ ಸಂಗತಿ ಹೊರಬಿದ್ದಿದೆ. ಅಕ್ರಮ ಸಂಬಂಧ ಬಿಎಂಟಿಸಿ ಅಧಿಕಾರಿ ನಾಗೇಂದ್ರ ಅವರು ವಿಲ್ಸನ್ ಗಾರ್ಡನ್ ಠಾಣೆಗೆ ಸೋಮವಾರ ದೂರು ಕೊಟ್ಟಿದ್ದಾರೆ.

₹ 2 ಲಕ್ಷಕ್ಕೆ ಡೀಲ್: ಸೋಮಪ್ಪ ಕೂಡ ವಿಜಯಪುರದವನಾಗಿದ್ದು, ಬಿಎಂಟಿಸಿ ನಿರ್ವಾಹಕ ಹುದ್ದೆಗೆ ಅರ್ಜಿ ಹಾಕಿದ್ದ. ಈ ವಿಚಾರ ತಿಳಿದ  ಟ್ಯುಟೋರಿಯಲ್ ನೌಕರ ಬಸವರಾಜು, ₹ 2 ಲಕ್ಷ ಕೊಟ್ಟರೆ ಪ್ರಶ್ನೆಪತ್ರಿಕೆ ಕೊಡಿಸುವುದಾಗಿ ಹೇಳಿದ್ದ. ಅದಕ್ಕೆ ಆತ ಒಪ್ಪಿಕೊಂಡ
ನಂತರ ಶಿವಕುಮಾರಯ್ಯನನ್ನು ಪರಿಚಯ ಮಾಡಿಸಿದ್ದ.

ಪರೀಕ್ಷೆಗೂ ನಾಲ್ಕು ದಿನಗಳ ಮೊದಲೇ (ಜೂನ್ 6ರಂದು) ಸೋಮಪ್ಪ ತುಮಕೂರಿನಲ್ಲಿರುವ ಬಸವರಾಜುವಿನ ತೋಟದ ಮನೆಗೆ ಬಂದಿದ್ದ. ಅಲ್ಲೇ ಪ್ರಶ್ನೆಪತ್ರಿಕೆ ಪಡೆದು ತಯಾರಿ ನಡೆಸಿದ್ದ. ಬಳಿಕ ಜೂನ್ 10ರಂದು ಜಯನಗರದ ಕೇಂದ್ರದಲ್ಲಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.

ಫಲಿತಾಂಶ ಬಂದ ನಂತರ ಶಿವಕುಮಾರಯ್ಯಗೆ ಬೆಂಗಳೂರಿನಲ್ಲೇ ₹1 ಲಕ್ಷ ತಲುಪಿಸಿದ್ದ ಸೋಮಪ್ಪ, ತುಮಕೂರು ರೈಲು ನಿಲ್ದಾಣದ ಬಳಿ ಬಸವರಾಜುಗೆ ₹ 1 ಲಕ್ಷ ಕೊಟ್ಟಿದ್ದ. ಬಿಎಂಟಿಸಿ ಜಿಗಣಿ ಡಿಪೊದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಆತ, ಸದ್ಯ ಅಮಾನತಿನಲ್ಲಿದ್ದಾನೆ.

**

ಕಮಿಷನ್ ಆಸೆಗೆ ಜಾಲ ಸೇರಿಬಿಟ್ಟ

‘ಕಂಡಕ್ಟರ್ ಆಗಿ ಆಯ್ಕೆಯಾದ ಬಳಿಕ ಸೋಮಪ್ಪ ಕಮಿಷನ್ ಆಸೆಗೆ ಬಸವರಾಜು ಜತೆ ಸೇರಿ ಪರೀಕ್ಷಾ ಅಕ್ರಮ ಮುಂದುವರಿಸಿದ್ದ. ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಭೇಟಿ ಮಾಡಿ, ಜಾಲದ ಸದಸ್ಯರಿಗೆ ಪರಿಚಯ ಮಾಡಿಸುವ ಕೆಲಸ ಮಾಡುತ್ತಿದ್ದ. ಇದಕ್ಕೆ ಸೋಮಪ್ಪನಿಗೆ ಕಮಿಷನ್ ಸಿಗುತ್ತಿತ್ತು. ಬಿಎಂಟಿಸಿ ಪ್ರಶ್ನೆಪತ್ರಿಕೆ ಹೇಗೆ ಸೋರಿಕೆಯಾಯಿತು ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದೇವೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !