ಗುರುವಾರ , ನವೆಂಬರ್ 14, 2019
18 °C
ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ–1

ಎರಡು ಕಾಮಗಾರಿಗಳಿಗೆ ಒಂದೇ ಜಾಬ್‌ಕೋಡ್‌!

Published:
Updated:
Prajavani

ಬೆಂಗಳೂರು: ಒಂದೇ ಜಾಬ್‌ ಕೋಡ್‌ನಲ್ಲಿ ಎರಡು ಬೇರೆ ಬೇರೆ ಕಾಮಗಾರಿಗಳಿಗೆ ಬಿಲ್‌ ಪಾವತಿ ಮಾಡಲು ಅವಕಾಶ ಇದೆಯೇ? ನಿಯಮಗಳ ಪ್ರಕಾರ ಇದು ಅಸಾಧ್ಯ. ಆದರೆ, ಬಿಬಿಎಂಪಿಯ ‘ಪ್ರಚಂಡ ಅಧಿಕಾರಿ’ಗಳು ಇದನ್ನೂ ಕೂಡ ಸಾಧ್ಯವಾಗಿಸಬಲ್ಲರು.

ಒಂದೇ ಜಾಬ್‌ ಕೋಡ್‌ನಲ್ಲಿ ಎರಡೆರಡು ಕಾಮಗಾರಿಗಳನ್ನು ನಡೆಸಿದ್ದಲ್ಲದೇ, ಅವೆರಡಕ್ಕೂ ಹಣ ಬಿಡುಗಡೆ ಮಾಡುವ ಮೂಲಕ ಬಿಬಿಎಂಪಿ ಎಂಜಿನಿಯರ್‌ಗಳು ನಡೆಸಿರುವ ಅಕ್ರಮವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ನೇತೃತ್ವದ ಸಮಿತಿ ಪತ್ತೆ ಹಚ್ಚಿದೆ.

ಮಲ್ಲೇಶ್ವರ ವಿಭಾಗದಲ್ಲಿ (ಈ ಹಿಂದಿನ ವಿಭಾಗ) ಕಂಠೀರವ ಸ್ಟುಡಿಯೊ ಮುಖ್ಯರಸ್ತೆಯ ಸೋನಾರ್‌ ಗಾರ್ಮೆಂಟ್ಸ್‌ ಬಳಿ ದ್ವಿತೀಯ ಹಂತದ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲು 2008–09ರಲ್ಲಿ ಹಣಕಾಸು ವಿಭಾಗದ ಉಪ ಆಯುಕ್ತರು ₹ 9.95 ಲಕ್ಷ ಮೊತ್ತದ ಕಾಮಗಾರಿಯ ಜಾಬ್‌ ಕೋಡ್‌ಗೆ (ಸಂಖ್ಯೆ 011–09-N-G-E-DFO-002) ಮಂಜೂರಾತಿ ನೀಡಿದ್ದರು. ಅಚ್ಚರಿಯೆಂದರೆ ಅದೇ ವರ್ಷ ಜಿ.ಜಿ.ಪಾಳ್ಯದಲ್ಲಿ ದ್ವಿತೀಯ ಹಂತದ ರಾಜಕಾಲುವೆ ಹಾಗೂ ಕಲ್ವರ್ಟ್‌ ಸ್ಲ್ಯಾಬ್‌ ನಿರ್ಮಿಸುವ ಕಾಮಗಾರಿಯ ₹ 5 ಲಕ್ಷ ವೆಚ್ಚದ ಅಂದಾಜುಪಟ್ಟಿಗೂ ಅದೇ ಜಾಬ್‌ ಕೋಡ್‌ ನೀಡಲಾಗಿತ್ತು. ಆದರೆ, ಜಾಬ್‌ ಕೋಡ್‌ ಮಂಜೂರಾತಿಯ ನಮೂನೆಗೆ ಹಣಕಾಸು ವಿಭಾಗದ ಉಪ ಆಯುಕ್ತರು ಸಹಿ ಮಾಡಿರಲಿಲ್ಲ. ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಸಂಬಂಧಪಟ್ಟ ಪ್ರಾಧಿಕಾರದ ಮಂಜೂರಾತಿ ಸಿಗದ ಹೊರತಾಗಿಯೂ ಕಾಮಗಾರಿಯ ಬಿಲ್‌ ಪಾವತಿ ಮಾಡಿದ್ದರು.  

ಕ್ಯಾಲೆಂಡರ್‌ನಲ್ಲಿಲ್ಲದ ದಿನವೂ ಒಪ್ಪಂದ: ಏಪ್ರಿಲ್‌ ತಿಂಗಳಿನಲ್ಲಿರುವುದು 30 ದಿವಸಗಳು. ಆದರೆ, ಬಿಬಿಎಂಪಿ ಅಧಿಕಾರಿಗಳು ಅಕ್ರಮ ನಡೆಸಲು ಏಪ್ರಿಲ್‌ ತಿಂಗಳಿಗೆ ಇನ್ನೊಂದು ದಿನಾಂಕವನ್ನೇ ಸೇರಿಸುವಷ್ಟು ಚಾಣಾಕ್ಯರು.

ಬಂಬೂಬಜಾರ್‌ ಮುಖ್ಯರಸ್ತೆ, ಎನ್‌.ಆರ್‌.ರಸ್ತೆಯಿಂದ ಕಲಾಸಿಪಾಳ್ಯ ಮುಖ್ಯ ರಸ್ತೆವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಯ ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದು 2008ರ ಏಪ್ರಿಲ್‌ 31ರಂದು. ಅಚ್ಚರಿ ಎಂದರೆ ಕ್ಯಾಲೆಂಡರ್‌ನಲ್ಲಿ ಆ ದಿನಾಂಕವೇ ಇಲ್ಲ.

ತರಹೇವಾರಿ ಅಕ್ರಮ– ಪಾಲಿಕೆ ಪರಾಕ್ರಮ!

ಬಿಬಿಎಂಪಿಯಲ್ಲಿ ಈ ಹಿಂದಿನ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಲಯಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ನಾಗಮೋಹನದಾಸ್ ನೇತೃತ್ವದ ಸಮಿತಿ ತನಿಖೆ ನಡೆಸಿದೆ. ಸಮಿತಿಯು 2018ರ ಅಕ್ಟೋಬರ್‌ 25ರಂದು ಅಂತಿಮ ವರದಿಯನ್ನು ಆಗಿನ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗೆ ಸಲ್ಲಿಸಿತ್ತು. ಆದರೆ, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರವು ಪತನವಾಗುವವರೆಗೂ ಈ ವರದಿ ಬಹಿರಂಗಗೊಳ್ಳದಂತೆ ನೋಡಿಕೊಳ್ಳಲಾಗಿತ್ತು. ಸಚಿವರೊಬ್ಬರ ಕಚೇರಿಯಲ್ಲೇ ಈ ವರದಿ ‘ಭದ್ರ’ವಾಗಿತ್ತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವನ್ನೂ ಕೈಗೊಂಡಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳ ಅನುಷ್ಠಾನ ಮಾಡುವಾಗ ಹೇಗೆಲ್ಲ ಭ್ರಷ್ಟಾಚಾರ ನಡೆಸಬಹುದು ಎಂಬುದಕ್ಕೆ ಈ ವರದಿ ಕನ್ನಡಿ ಹಿಡಿದಿದೆ. ಕಾಮಗಾರಿ ಅನುಷ್ಠಾನಕ್ಕೆ ಕಠಿಣ ನಿಯಮಗಳು ಜಾರಿಯಲ್ಲಿದ್ದರೂ ಅಧಿಕಾರಿಗಳು ಅವುಗಳಿಂದ ಹೇಗೆಲ್ಲಾ ನುಣುಚಿಕೊಂಡಿದ್ದಾರೆ ಎಂಬ ತರಹೇವಾರಿ ಅಕ್ರಮಗಳನ್ನು ಈ ವರದಿ ಬಿಚ್ಚಿಟ್ಟಿದೆ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಅದರಲ್ಲಿ ಉಲ್ಲೇಖವಾಗಿರುವ ಪ್ರಮುಖ ಅಕ್ರಮಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. 

ಮೂರು ಸಂಸ್ಥೆಗಳಿಂದ ತನಿಖೆ

ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಲಯಗಳಲ್ಲಿ 2008ರಿಂದ 2012ರ ನಡುವೆ ನಡೆದಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಅಕ್ರಮದ ಬಗ್ಗೆ ಸ್ಥಳೀಯರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದಿರುವುದರಿಂದ ತನಿಖೆ ನಡೆಸಲು ಅಗತ್ಯ ಸಂಖ್ಯೆಯ ನುರಿತ ಸಿಬ್ಬಂದಿ ಹಾಗೂ ಸೌಕರ್ಯ ಇಲ್ಲ ಎಂಬ ಕಾರಣಕ್ಕೆ ಸಮಗ್ರ ತನಿಖೆ ನಡೆಸಲು ಲೋಕಾಯುಕ್ತ ಸಂಸ್ಥೆ ಒಪ್ಪಿರಲಿಲ್ಲ.

ಸರ್ಕಾರವು 2011ರ ಅಕ್ಟೋಬರ್‌ 28ರಂದು ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ತನಿಖೆ ಸಲುವಾಗಿ ಸಿಐಡಿ ಈ ಮೂರು ವಲಯಗಳ ಎಂಜಿನಿಯರಿಂಗ್‌ ವಿಭಾಗಗಳಿಂದ ಒಟ್ಟು 7,171 ಕಡತಗಳನ್ನು ವಶಕ್ಕೆ ಪಡೆದಿತ್ತು. ನಾಲ್ಕು ವರ್ಷಗಳಲ್ಲಿ ಕೇವಲ 78 ಕಡತಗಳಿಗೆ ಸಂಬಂಧಿಸಿದ ತನಿಖೆಯನ್ನು ಪೂರ್ಣಗೊಳಿಸಿತ್ತು. 213 ಕಡತಗಳ ತನಿಖೆ ಪ್ರಗತಿಯಲ್ಲಿತ್ತು. ಈ ಹಂತದಲ್ಲಿ, ಇನ್ನುಳಿದ ಕಡತಗಳ ತನಿಖೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಸಿಐಡಿ ಕೈಚೆಲ್ಲಿತು. ಈ ನಡುವೆ, ಬಿಬಿಎಂಪಿ ಜಾಹೀರಾತು ಆದಾಯ ಸೋರಿಕೆ ಹಾಗೂ ಆಸ್ತಿಗಳ ನಿರ್ವಹಣೆ ಕುರಿತ ದೂರಿನ ತನಿಖೆಗೆ ಸರ್ಕಾರ ಐಎಎಸ್‌ ಅಧಿಕಾರಿ ರಾಜೇಂದ್ರ ಕುಮಾರ್‌ ಕಟಾರಿಯಾ ಅವರನ್ನು ನೇಮಿಸಿತು. ಅವರು 2015ರ ಮಾ.5ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

‘ಪಾಲಿಕೆಯು ಅಗತ್ಯದ ಆಧಾರದಲ್ಲಿ ಬಜೆಟ್‌ನಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿಲ್ಲ. ಹಿಂದಿನ ಬಜೆಟ್‌ ಹಂಚಿಕೆಗೆ ಹೋಲಿಸಿದರೆ ಶೇ 78ರಷ್ಟು ಹೆಚ್ಚುವರಿ ಹಂಚಿಕೆ ಮಾಡಲಾಗಿದೆ. ಇದು ಕಳಪೆ ಕಾಮಗಾರಿಗೆ ದಾರಿ ಮಾಡಿಕೊಟ್ಟಿದೆ’ ಎಂಬ ಅಂಶವನ್ನು ಕಟಾರಿಯಾ ಅವರು ವರದಿಯಲ್ಲಿ ಬೊಟ್ಟುಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೂರು ವಲಯಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸಮಗ್ರ ತನಿಖೆಗೆ ನಾಗಮೋಹನ ದಾಸ್‌ ನೇತೃತ್ವದಲ್ಲಿ ಮೂವರು ನಿವೃತ್ತ ಮುಖ್ಯ ಎಂಜಿನಿಯರ್‌ಗಳನ್ನು ಒಳಗೊಂಡ ಸಮಿತಿಯನ್ನು ನಗರಾಭಿವೃದ್ಧಿ ಇಲಾಖೆ 2016ರಲ್ಲಿ ರಚಿಸಿತು.

ಪ್ರತಿಕ್ರಿಯಿಸಿ (+)