ಗುರುವಾರ , ನವೆಂಬರ್ 21, 2019
21 °C

ದೇಗುಲ ಆಸ್ತಿ ಒತ್ತುವರಿ ತೆರವಿಗೆ ತಂಡ ರಚನೆ

Published:
Updated:

ಬೆಂಗಳೂರು: ‘ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಆಸ್ತಿ ಒತ್ತುವರಿ ತೆರವುಗೊಳಿಸಿ, ಸಂರಕ್ಷಿಸಲು ಸರ್ವೇ ತಂಡಗಳನ್ನು ರಚಿಸಲಾಗುವುದು’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಗುರುವಾರ ಇಲಾಖೆ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ವೇ ತಂಡಗಳನ್ನು ಒಂದು ತಿಂಗಳಲ್ಲಿ ರಚಿಸಲಾಗುವುದು. ಈ ತಂಡಗಳು ದೇಗುಲಗಳ ಆಸ್ತಿ ಸರ್ವೇಮಾಡಿ ಒತ್ತುವರಿ ತೆರವುಗೊಳಿಸಲಿವೆ’ ಎಂದು ಹೇಳಿದರು.

ದೇವಸ್ಥಾನಗಳ ಆಸ್ತಿ ಒತ್ತುವರಿ ಬಗ್ಗೆ ದೂರುಗಳು ಕೇಳಿಬಂದಿವೆ. ದೂರು ಬಂದಾಗ ಭೂಮಾಪನ ಇಲಾಖೆಗೆ ಸೂಚಿಸಲಾಗುತಿತ್ತು. ಆದರೆ ಭೂಮಾಪನ ಇಲಾಖೆ ಸರ್ವೇಮಾಡಿ, ತೆರವುಗೊಳಿಸಲು ವರ್ಷಗಳೇ ಹಿಡಿಯುತಿತ್ತು. ಇದರಿಂದ ಆಸ್ತಿ ಸಂರಕ್ಷಣೆ ಸಾಧ್ಯವಾಗಿರಲಿಲ್ಲ. ತಂಡ ರಚಿಸುವುದರಿಂದ ತೆರವು ಕಾರ್ಯ ಚುರುಕಾಗಲಿದೆ ಎಂದು ವಿವರಿಸಿದರು.

ಧಾರ್ಮಿಕ ಪರಿಷತ್: ಶೀಘ್ರವೇ ರಾಜ್ಯ ಧಾರ್ಮಿಕ ಪರಿಷತ್ ರಚಿಸಲಾಗುವುದು. ನಂತರ ಜಿಲ್ಲಾ ಕೇಂದ್ರಗಳಲ್ಲಿ ಪರಿಷತ್ ರಚನೆಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಧಾರ್ಮಿಕ ಪರಿಷತ್ ಮೂಲಕ ‘ಬಿ’ ಹಾಗೂ ‘ಸಿ’ ವರ್ಗದ ದೇಗುಲಗಳಿಗೆ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸಿ, ಸಮಿತಿ ಸದಸ್ಯರಿಗೆ ಕಾರ್ಯಾಗಾರ ನಡೆಸಿ ದೇವಾಲಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಸಾವಿರ ಸಿಬ್ಬಂದಿ ನೇಮಕ: ದೇಗುಲಗಳ ಕಾರ್ಯನಿರ್ವಹಣಾ ಅಧಿಕಾರಿ, ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ಒಂದು ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)