ಸೋಮವಾರ, ಜುಲೈ 4, 2022
24 °C
ಮಾಹಿತಿ ಪಡೆಯಲು ದಾಳಿಯಿಡುತ್ತದೆ ಗಂಟೆಗೊಂದು ತಂಡ

ವಿಕ್ಟೋರಿಯಾದಲ್ಲಿ ವಿದ್ಯಾರ್ಥಿಗಳದ್ದೇ ದರ್ಬಾರ್‌! ವೈದ್ಯರು ಬರುವುದೇ ವಿರಳ

ಪ್ರಸನ್ನ ಕುಮಾರ ಪಿ.ಎನ್. Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಹೆಸರಿಗೆ ರಾಜ್ಯಕ್ಕೇ ದೊಡ್ಡ ಸರ್ಕಾರಿ ಆಸ್ಪತ್ರೆ. ಇಲ್ಲಿ ಚಿಕಿತ್ಸೆ ಪಡೆಯಲು ರಾಜ್ಯದ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಆದರೆ, ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಬರುವುದೇ ವಿರಳ.‌ ನರ್ಸ್‌ಗಳು ಮತ್ತು ತರಬೇತಿ ಪಡೆಯಲು ಬಂದ ವೈದ್ಯಕೀಯ ವಿದ್ಯಾರ್ಥಿಗಳದ್ದೇ ದರ್ಬಾರ್‌ ಆಗಿದೆ. ಮೂಲ ಸೌಲಭ್ಯಗಳೂ ಮರೀಚಿಕೆಯಾಗಿವೆ.

ಇದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಒಳರೋಗಿಗಳ ವಿಭಾಗ ‘ಸಿ’ ಬ್ಲಾಕ್‌ನಲ್ಲಿರುವ ರೋಗಿಗಳ ದೂರು. ‘ಪ್ರಜಾವಾಣಿ’ ಪ್ರತಿನಿಧಿ ಆಸ್ಪತ್ರೆಯಲ್ಲಿ ಬುಧವಾರ ಸುತ್ತಾಡಿದಾಗ, ರೋಗಿಗಳ ದೂರನ್ನು ಸಮರ್ಥಿಸುವಂತಹ ನೋಟಗಳೇ ಕಾಣಸಿಕ್ಕವು.

‘ವಿಕ್ಟೋರಿಯಾಗೆ ಬರುವ ನಮ್ಮಂತಹ ರೋಗಿಗಳು ಬಹುತೇಕ ಕಡು ಬಡವರು. ಉತ್ತಮ ಚಿಕಿತ್ಸೆ ದೊರೆಯುವ ನಂಬಿಕೆಯಲ್ಲಿ ಬರುತ್ತೇವೆ. ಆದರೆ, ಇಲ್ಲಿರುವ ವ್ಯವಸ್ಥೆಯೇ ಬೇರೆ. ಉತ್ತಮ ಚಿಕಿತ್ಸೆ ದೊರೆಯುವ ಮಾತು ಒತ್ತಟ್ಟಿಗಿರಲಿ,  ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ತರಬೇತಿಯ ಉದ್ದೇಶಕ್ಕಾಗಿ ಕಾಟ ಕೊಡುವುದು ತಪ್ಪಿದರೆ ಸಾಕು’ ಎಂದು ರೋಗಿಗಳು ಅಲವತ್ತುಕೊಂಡರು.

‘ವೈದ್ಯರಿಗಿಂತ ತರಬೇತಿ ವಿದ್ಯಾರ್ಥಿಗಳನ್ನೇ ಚಿಕಿತ್ಸೆಗಾಗಿ ನಿಯೋಜನೆ ಮಾಡಲಾಗುತ್ತದೆ. ಅಪರೂಪಕ್ಕೆ ಮುಖ್ಯ ವೈದ್ಯರು ಬಂದು ನಮ್ಮನ್ನು ತಪಾಸಣೆ ಮಾಡಿ ಹೋಗುತ್ತಾರೆ. ನರ್ಸ್‌ಗಳು ಕೊಟ್ಟ ಚಿಕಿತ್ಸೆಯ ಬಳಿಕ ಮಲಗಿ ವಿಶ್ರಾಂತಿ ಪಡೆದುಕೊಂಡರೆ ಸಾಕಪ್ಪ ಅನಿಸುತ್ತದೆ. ಆದರೆ, ವಿದ್ಯಾರ್ಥಿಗಳು ವಿಶ್ರಾಂತಿಗೆ ಅವಕಾಶವನ್ನೇ ನೀಡುವುದಿಲ್ಲ’ ಎಂದು ಅನುಭವಿಸುತ್ತಿರುವ ತೊಂದರೆಯನ್ನು ಹೇಳಿಕೊಂಡರು.

‘ನಾವು ರೋಗದಿಂದ ನರಳುತ್ತಿದ್ದರೆ, ಈ‌ ಕಾಯಿಲೆ ಹೇಗೆ ಬಂತು, ಯಾವಾಗ ಬಂತು, ಆಮೇಲೆ ಏನು ಮಾಡಿದಿರಿ, ಯಾವ ಮಾತ್ರೆ ನುಂಗಿದಿರಿ ಎಂಬೆಲ್ಲ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುತ್ತಾರೆ. ಒಬ್ಬರಾದ ಮೇಲೆ ಒಬ್ಬರಂತೆ ದಾಂಗುಡಿ ಇಟ್ಟು ಅದೇ ಪ್ರಶ್ನೆಗಳನ್ನು ಕೇಳುತ್ತಾರೆ. ಇನ್ನೆಲ್ಲಿ ವಿಶ್ರಾಂತಿ ಪಡೆಯುವುದು’ ಎಂದು ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿ ಗೋವಿಂದರಾಜು ಕೇಳಿದರು.

‘ನಾನು ದಾಖಲಾಗಿ ಒಂಬತ್ತು ದಿನಗಳಾಗಿವೆ. ಐದು ದಿನಗಳ ಹಿಂದೆ ರಕ್ತ ಪರೀಕ್ಷೆ ಮಾಡಿಸಿದ ವರದಿ ಇನ್ನೂ ಬಂದಿಲ್ಲ. ಕೆಲವು ನರ್ಸ್‌ಗಳು ರೋಗಿಗಳಿಗೆ ಚಿಕಿತ್ಸೆ ನೀಡಿದರೆ, ಇನ್ನು ಕೆಲವರು ರೋಗಿಗಳೊಂದಿಗೆ ದುರ್ವರ್ತನೆ ತೋರುತ್ತಾರೆ. ನಮ್ಮನ್ನು ಅವರ ಮನೆಯವರಂತೆ ಕಾಣಲು ಏನು ದಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಕ್ತ ಹೀರುತ್ತಾರೆ: ಲ್ಯಾಬ್‌ಗಳಲ್ಲಿ ಪರೀಕ್ಷೆಗಾಗಿ ಒಮ್ಮೆ ಮಾತ್ರ ರಕ್ತ ಪಡೆಯುತ್ತಾರೆ ಅಲ್ಲವೇ? ಆದರೆ, ಈ ಆಸ್ಪತ್ರೆಯಲ್ಲಿ ಒಮ್ಮೆ ಪರೀಕ್ಷಕರಿಗೆ, ಇನ್ನೊಮ್ಮೆ ವಿದ್ಯಾರ್ಥಿಗಳಿಗೆ ರಕ್ತ ಕೊಡುತ್ತಿದ್ದೇವೆ. ಇಂಟರ್ನಲ್ ಅಂಕಗಳಿಗಾಗಿ ಏನನ್ನೋ ಪ್ರಯೋಗ ಮಾಡಿ ತೋರಿಸಲು ವಿದ್ಯಾರ್ಥಿಗಳು ಮೂರು ಕ್ಯಾಪ್‌ (ಅಂದಾಜು 30 ಎಂ.ಎಲ್‌) ರಕ್ತವನ್ನು ಪಡೆಯುತ್ತಾರೆ. ಅಲ್ಲದೆ, ವೈದ್ಯರಿಗೂ ಅಷ್ಟೇ ರಕ್ತ ಕೊಡಬೇಕು. ಹೀಗೆ ರಕ್ತ ಹೀರುತ್ತಾ ಹೋದರೆ ನಮ್ಮ ಗತಿ ಏನು’ ಎಂದು ರೋಗಿಯೊಬ್ಬರ ಸಂಬಂಧಿ ಕೇಳಿದರು.

‘ಆಸ್ಪತ್ರೆಗೆ ಬಂದಿರುವುದು ಚಿಕಿತ್ಸೆಗಾಗಿಯೇ ಹೊರತು ರಕ್ತ ಕೊಡಲಲ್ಲ. ವೈದ್ಯರು ಅವರಿಗೆ ಬೇರೆ ವ್ಯವಸ್ಥೆಯನ್ನು ಕಲ್ಪಿಸಬೇಕು. ರೋಗಿಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ವಿದ್ಯಾರ್ಥಿಗಳಿಗೆ ಉತ್ತರಿಸುವ ಪರಿಸ್ಥಿತಿಯಲ್ಲಿ ನಾವಿರುವುದಿಲ್ಲ. ಆದರೂ ಅವರು ಬಿಡುವುದಿಲ್ಲ. ಅವರ ಕಲಿಕೆಗೆ ಅಡ್ಡಿ ಮಾಡುವುದೇಕೆ ಎಂಬ ಕಾರಣಕ್ಕಾಗಿ ಎಲ್ಲವನ್ನೂ ವಿವರಿಸುತ್ತಿದ್ದೇವೆ. ಒಬ್ಬರಾದ ಮೇಲೆ ಇನ್ನೊಬ್ಬರು ತಂಡೋಪತಂಡವಾಗಿ ಬಂದು ಮಾಹಿತಿ ಪಡೆಯುತ್ತಾರೆ. ಇಲ್ಲಿ ದಾಖಲಾದ ಎಷ್ಟೋ ರೋಗಿಗಗಳಿಗೆ ಅವರು ವೈದ್ಯರಲ್ಲ ಎನ್ನುವ ವಿಚಾರವೇ ತಿಳಿದಿಲ್ಲ’ ಎಂದು ಆಸ್ಪತ್ರೆಯಲ್ಲಿ ಮಾತಿಗೆ ಸಿಕ್ಕ ರವಿ ಎಂಬುವರು ಹೇಳಿದರು.

‘ವಿದ್ಯಾರ್ಥಿಗಳು ನಾವೇ ವೈದ್ಯರು ಎನ್ನುತ್ತಾರೆ. ವೈದ್ಯರು ಎಂದುಕೊಂಡೇ ರೋಗದ ಬಗ್ಗೆ ತಿಳಿಸುತ್ತೇವೆ. ಮೂರು ದಿನಗಳ ಬಳಿಕ ಇವರು ತರಬೇತಿ ಪಡೆಯುವವರು ಎಂಬುದು ಗೊತ್ತಾಯಿತು. ಅವರೂ ರೋಗಿಗಳ ಸ್ಥಾನದಲ್ಲಿ ನಿಂತು ನೋಡಲಿ. ನಮ್ಮ ಯಾತನೆ ಏನೆಂಬುದು ತಿಳಿಯುತ್ತದೆ’ ಎಂದು ಕುಣಿಗಲ್‌ನ ಸವಿತಾ ಎಂಬುವರು ಸಿಟ್ಟಿನಿಂದ ತಿಳಿಸಿದರು.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಂದ ರೋಗಿಗಳಿಗೆ ಆಗುತ್ತಿರುವ ಕಿರುಕುಳದ ಕುರಿತು ವೈದ್ಯಕೀಯ ಅಧೀಕ್ಷಕ ಎಚ್‌.ಎಸ್‌.ಸತೀಶ್ ಅವರನ್ನು ಪ್ರಶ್ನಿಸಿದಾಗ, ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

‘ದುಡ್ಡು ಕೊಡಿ ಎನ್ನುತ್ತಾರೆ’: ‘ನಡೆಯಲು ಸಾಧ್ಯವಾಗದ ರೋಗಿಯನ್ನು ಸ್ಟ್ರೆಚರ್‌ನಲ್ಲಿ ಕರೆತರಲು ಮಹಿಳಾ ಕಾರ್ಮಿಕರು ಬರುತ್ತಾರೆ. ಆ ಸೇವೆಗೆ ಶುಲ್ಕ ಪಾವತಿಸುವಂತಿಲ್ಲ. ಅದು ಅವರ ಕರ್ತವ್ಯ. ಆದರೆ, ಆ ಮಹಿಳೆಯರು ದುಡ್ಡು ಕೊಡಿ ಎಂದು ಕೇಳುತ್ತಾರೆ. ಕಡಿಮೆ ಕೊಟ್ಟರೆ ಇಷ್ಟೇನಾ ಎಂದು ಜೋರು ಮಾಡುತ್ತಾರೆ. ಕೊಡಲಿಲ್ಲವೆಂದರೆ ಬಯ್ಯುತ್ತಾರೆ. ಎಲ್ಲರೂ ದುಡ್ಡಿಗೆ ಕೈಯೊಡ್ಡುವವರೇ’ ಎಂದು ರವಿ ಹೇಳಿದರು.

ಕಳಪೆ ಊಟ; ನೀರು ಹಾಲು: ‘ಸರ್ಕಾರ ಹಣ ಖರ್ಚು ಮಾಡಿದರೂ ಇಲ್ಲಿನ ವ್ಯವಸ್ಥೆ ಕಳಪೆಯಾಗಿದೆ. ಆಸ್ಪತ್ರೆಗೆ ದಾಖಲಾದ‌ ಮೊದಲ ದಿನ ಇಲ್ಲಿನ ಊಟವನ್ನು ತಿಂದೆ. ಮರುದಿನದಿಂದಲೇ ಹೋಟೆಲ್‌ನ ಗ್ರಾಹಕನಾದೆ. ಹಾಲಿನ ವಿಷಯಕ್ಕೆ ಬಂದರೆ ಅದನ್ನು ಹಾಲು ಎನ್ನಬೇಕೋ, ನೀರು ಎನ್ನಬೇಕೋ ತಿಳಿಯುತ್ತಿಲ್ಲ. ನೋಡಲಷ್ಟೇ ಬೆಳ್ಳಗಿರುತ್ತದೆ. ರೋಗಿಗಳಿಗೆ ಸಿಗಬೇಕಾದ ಸೌಲಭ್ಯಗಳು ಪರರ ಪಾಲಾಗುತ್ತಿವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ’ ಎಂದು ಗೋವಿಂದರಾಜು ದೂರಿದರು.

‘ಅಧಿಕಾರಿಗಳು ಬಂದರೆ ಸ್ವಚ್ಛ’: ‘ರೋಗಿಗಳ ಕೊಠಡಿಗಳಲ್ಲಿರುವ ಶೌಚಾಲಯಗಳಲ್ಲಿ ಸ್ವಚ್ಛ ವಾತಾವರಣವೇ ಇಲ್ಲ. ಅಲ್ಲದೆ, ಕೆಲವು ವಾರ್ಡ್‌ಗಳಲ್ಲಿ ಅವುಗಳ ಬಾಗಿಲುಗಳಿಗೆ ಚಿಲಕಗಳಿಲ್ಲ. ಹೆಣ್ಣು ಮಕ್ಕಳು ಶೌಚಾಲಯ ಬಳಸುವುದು ಹೇಗೆ? ಆಸ್ಪತ್ರೆಯಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅಧಿಕಾರಿಗಳು ಪರಿಶೀಲನೆಗೆ ಬರುವುದನ್ನು ತಿಳಿದು ರೋಗಿಗಳ ಬೆಡ್‌, ಕೊಠಡಿ ಮತ್ತು ಶೌಚಾಲಯ ಶುಚಿಗೊಳಿಸುತ್ತಾರೆ. ಹೊಸ ಕಂಬಳಿಗಳನ್ನು ಕೊಡುತ್ತಾರೆ. ತಲೆದಿಂಬು ಬದಲಾಯಿಸುವುದೇ ಇಲ್ಲ’ ಎಂದು ಸವಿತಾ ತಿಳಿಸಿದರು.‌

ಖಾಸಗಿ ಆಸ್ಪತ್ರೆಗಳತ್ತ ದಾಪುಗಾಲು: ‘ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಇಲ್ಲಿನ ಹದಗೆಟ್ಟ ಸ್ಥಿತಿಯಿಂದ ಖಾಸಗಿ ಆಸ್ಪತ್ರೆಗಳ ಬಾಗಿಲು ತಟ್ಟುತ್ತಿದ್ದಾರೆ. ತರಬೇತಿಯಲ್ಲಿ ಇರುವವರು ಒಬ್ಬೊಬ್ಬರಾಗಿ ಹೋಗಿ ರೋಗಿಗೆ ಕಾಟ ನೀಡದೆ, ಒಂದೇ ತಂಡದಲ್ಲಿ ಹೋಗಿ ಒಮ್ಮೆ ಮಾತ್ರ ಮಾಹಿತಿ ಪಡೆದುಕೊಂಡು ಬರುವುದು ಒಳಿತು’ ಎಂದು ಆಸ್ಪತ್ರೆಯ ಆವರಣದಲ್ಲಿ ಸಿಕ್ಕ ವಿದ್ಯಾರ್ಥಿಯೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು