ಮುಸ್ಲಿಂ ಜನಾಂಗ ದೇಶದ ಶತ್ರುವಲ್ಲ

ಸೋಮವಾರ, ಮಾರ್ಚ್ 25, 2019
33 °C
ಪೇಜಾವರಶ್ರೀ ಗುರುವಂದನಾ ಕಾರ್ಯಕ್ರಮದಲ್ಲಿ ವೆಂಕಟಾಚಲಯ್ಯ ಹೇಳಿಕೆ

ಮುಸ್ಲಿಂ ಜನಾಂಗ ದೇಶದ ಶತ್ರುವಲ್ಲ

Published:
Updated:
Prajavani

ಬೆಂಗಳೂರು: ‘ಸಮಾಜದಲ್ಲಿ ಸಂಘರ್ಷ ಇದೆ ಎನ್ನುವ ಕಾರಣಕ್ಕೆ ಮುಸ್ಲಿಂ ಜನಾಂಗವನ್ನು ದೇಶದ ಶತ್ರುವಿನಂತೆ ಬಿಂಬಿಸುವುದು ಮುಠ್ಠಾಳತನ’ ಎಂದು ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.

ಪಾವಗಡದ ರಾಮಕೃಷ್ಣ ಸೇವಾಶ್ರಮವು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವೇಶತೀರ್ಥರ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉಡುಪಿ ಕೃಷ್ಣ ಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪಡಿಸಿದ್ದಕ್ಕೆ ಪೇಜಾವರ ಶ್ರೀಗಳನ್ನು ಕೆಲವರು ಟೀಕಿಸಿದರು. ಸೌಹಾರ್ದಕ್ಕಾಗಿ ಹಪಾಹಪಿಸುವ ಅವರ ಮನಸ್ಸನ್ನು ಟೀಕಾಕಾರರು ಅರ್ಥಮಾಡಿಕೊಳ್ಳಲಿಲ್ಲ. ಸಮಾಜವೂ ಅವರನ್ನು ಅರ್ಥಮಾಡಿಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶ್ರೀಗಳು ಸಮಾಜದ ಸಮಸ್ಯೆಗಳಿಗೆ ಬೇಗನೆ ಸ್ಪಂದಿಸುತ್ತಾರೆ. ಅವರಿಗೆ ಸಂವೇದನೆ ಇದೆ. ಸನ್ಯಾಸತ್ವ ಸ್ವೀಕರಿಸಿ 80 ವರ್ಷ ಸಂದ ಸಂದರ್ಭದಲ್ಲಿ ಅವರ ಸೇವೆಯನ್ನು ಮುಂದಿಟ್ಟುಕೊಂಡು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ, ‘ಮಾಧವ ಸೇವೆ ಮತ್ತು ಮಾನವ ಸೇವೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ದೇವರ ಸೇವೆಯ ಜತೆಗೆ ದೀನರ ಸೇವೆಯನ್ನೂ ಮಾಡಬೇಕು. ಇಲ್ಲದಿದ್ದರೆ ಮುಕ್ತಿಗೆ ವೀಸಾ ಸಿಗುವುದಿಲ್ಲ. ಕೇವಲ ಪ್ರತಿಮೆಯಲ್ಲಿ ದೇವರನ್ನು ಕಾಣುವವನು ಪರಿಪೂರ್ಣ ಭಕ್ತನಲ್ಲ. ಸಮಾಜ ಮತ್ತು ಪ್ರಕೃತಿಯ ಅಂಶಗಳಲ್ಲಿ ದೇವರನ್ನು ಹುಡುಕುವವನು ನಿಜ ಭಕ್ತ’ ಎಂದು ಅವರು ವ್ಯಾಖ್ಯಾನಿಸಿದರು.

ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌,‘ಶ್ರೀಗಳು ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು ಎನ್ನುವಂತಿದ್ದಾರೆ. ಚಿಕ್ಕವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ, ಉತ್ತಮ ಸೇವೆಯಲ್ಲಿ ತೊಡಗಿದ್ದಾರೆ. ದಲಿತರ ಕೇರಿಗೆ ತೆರಳಿ ಸಮಾನತೆಯನ್ನು ಸಾರುವಂತಹ ದಿಟ್ಟತನದ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಗುಣಗಾನ ಮಾಡಿದರು.

**

ಭಕ್ತರ ಪ್ರೀತಿಗೆ ಅಭಾರಿಯಾಗಿದ್ದೇನೆ. ಪ್ರಾಮಾಣಿಕವಾಗಿ ಸಮಾಜ ಮತ್ತು ಭಗವಂತನ ಸೇವೆ ಮಾಡುತ್ತೇನೆ
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !