ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಒಎಫ್‌ಸಿ: ಕೋಟ್ಯಂತರ ರೂಪಾಯಿ ವಂಚನೆ

ಪರವಾನಗಿ ಇಲ್ಲದೆ ಯಲಚೇನಹಳ್ಳಿ ರಸ್ತೆಗಳ ಒಡಲು ಸೇರಿದ ಕೇಬಲ್‌ l ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಕೋರ್ಟ್‌ಗೆ
Last Updated 1 ಏಪ್ರಿಲ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯಿಂದ ಪರವಾನಗಿ ಪಡೆಯದೆಯೇ ಯಲಚೇನಹಳ್ಳಿ ವಾರ್ಡ್‌ನಲ್ಲಿ ಒಎಫ್‌ಸಿ ಅಳವಡಿಸಿರುವ ಅಕ್ರಮ ಹಾಡಹಗಲೇ ನಡೆದಿದ್ದರೂ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣ ಕುರುಡುತನ ತೋರಿದ್ದಾರೆ. ಆರ್‌ಟಿಐ ಮೂಲಕ ಪಡೆಯಲಾದ ಮಾಹಿತಿ ಈ ಅಕ್ರಮವನ್ನು ಬಹಿರಂಗಪಡಿಸಿದೆ.

ಈ ವಾರ್ಡ್‌ನಲ್ಲಿ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಜಾಲ ಜೋಡಿಸಲು 2015ರಿಂದ ಈವರೆಗೂ ಪಾಲಿಕೆ ಅನುಮತಿಯನ್ನೇ ನೀಡಿಲ್ಲ ಎನ್ನುತ್ತದೆ ಆರ್‌ಟಿಐ ಮಾಹಿತಿ. ಆದರೂ, ಈ ವಾರ್ಡ್‌ನ ಆಶ್ರಮ ರಸ್ತೆ, ಜೆ.ಸಿ.ಕೈಗಾರಿಕಾ ಪ್ರದೇಶ, ಕಾಶಿನಗರ ಸುತ್ತಮುತ್ತಲಿನ ರಸ್ತೆಗಳನ್ನು ಕತ್ತರಿಸಿ, ಯಂತ್ರಗಳಿಂದ ಕೊಳವೆ ಮಾರ್ಗ ಕೊರೆದು ಕೇಬಲ್‌ಗಳನ್ನು ತೂರಿಸಲಾಗಿದೆ.

ರಸ್ತೆಯನ್ನು ಅಗೆದು ಸರಾಸರಿ 50 ಮೀಟರ್‌ ಅಂತರದಲ್ಲಿ ಈ ಕೇಬಲ್‌ಗಳ ಡಕ್ಟ್‌ಗಳನ್ನು ನಿರ್ಮಿಸಿ, ರಸ್ತೆಯ ಸಮತಲವನ್ನೆ ಹಾಳು ಮಾಡಲಾಗಿದೆ. ಕಾಮಗಾರಿಯಿಂದ ಸೃಷ್ಟಿಯಾದ ಗುಂಡಿಗಳಿಗೆ ಡಾಂಬರಿನ ತೇಪೆ ಹಾಕಲಾಗಿದೆ.

ಈ ಕಾಮಗಾರಿ ಬಗ್ಗೆ ಸ್ಥಳೀಯರು ಕಳೆದ ವರ್ಷದ ಡಿಸೆಂಬರ್‌ನಲ್ಲಿಯೇ ಗಮನ ಸೆಳೆದಿದ್ದರೂ ಪಾಲಿಕೆಯ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಈ ಕಾಮಗಾರಿಯ ಒಳತಿರುಳನ್ನು ತಿಳಿಯಲು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಬೆಂಗಳೂರು ನಗರ ಘಟಕದ ಅಧ್ಯಕ್ಷ ವಿ.ಆರ್‌.ಮರಾಠೆ ಅವರು ಡಿಸೆಂಬರ್‌ 27ರಂದು ಆರ್‌ಟಿಐನಡಿ ಮಾಹಿತಿ ಕೋರಿದ್ದರು. ಪಾಲಿಕೆಯ ಒಎಫ್‌ಸಿ ವಿಭಾಗಕ್ಕೆ ಹತ್ತಾರು ಬಾರಿ ಅಲೆದ ಬಳಿಕ ಮಾರ್ಚ್‌ 23ರಂದು ಸಿಕ್ಕ ಮಾಹಿತಿಯು ಅಕ್ರಮದ ಸತ್ಯವನ್ನೇ ಬಿಚ್ಚಿಟ್ಟಿದೆ.

‘ಕಾನೂನು ಬದ್ಧವಾಗಿ ಒಎಫ್‌ಸಿ ಅಳವಡಿಕೆಗೆ ಪಾಲಿಕೆಗೆ ನಿರ್ದಿಷ್ಟ ಶುಲ್ಕಗಳನ್ನು ಪಾವತಿಸದೆ, ಅನುಮತಿ ಪಡೆಯದೇ ಕಾಮಗಾರಿ ನಡೆಸಲಾಗಿದೆ. ಇದರಿಂದ ಪಾಲಿಕೆಯ ಬೊಕ್ಕಸ ತುಂಬಬೇಕಿದ್ದ ಲಕ್ಷಾಂತರ ರೂಪಾಯಿ ಗುಳುಂ ಆಗಿದೆ’ ಎಂದು ನೇರವಾಗಿ ಆರೋಪಿಸುತ್ತಾರೆ ವಿ.ಆರ್‌.ಮರಾಠೆ.

‘ರಸ್ತೆಗಳನ್ನು ಕಳೆದ ವರ್ಷರಾತ್ರಿ–ಹಗಲೆನ್ನದೆ ಯದ್ವಾತದ್ವಾ ಅಗೆಯುತ್ತಿದ್ದಾಗ ವಾರ್ಡ್‌ನ ಎಂಜಿನಿಯರ್‌ನಿಂದ ಮೊದಲಾಗಿ ಆಯುಕ್ತರ ವರೆಗೂ ಈ ಕಾಮಗಾರಿಯತ್ತ ಗಮನ ಸೆಳೆದಿದ್ದೆ. ಎಲ್ಲರೂ ‘ಪರಿಶೀಲಿಸುವುದಾಗಿ’ ಭರವಸೆ ನೀಡಿ ನಿರ್ಲಕ್ಷ್ಯ ತೋರಿದರು. ಈಗ ಅಕ್ರಮ ಕಾಮಗಾರಿಗಳೆಲ್ಲ ಮುಗಿದು, ರಸ್ತೆಗಳಲ್ಲ ಹಾಳಾಗಿವೆ’ ಎಂದು ದೂರುತ್ತಾರೆ ಯಲಚೇನಹಳ್ಳಿ ವಾರ್ಡ್‌ನ ನಿವಾಸಿಯೂ ಆಗಿರುವ ಮರಾಠೆ.

ಈ ಅಕ್ರಮ ಎಸಿಬಿ, ನ್ಯಾಯಾಲಯ ಅಂಗಳಕ್ಕೆ?

ಅಕ್ರಮ ನಡೆಯುತ್ತಿದ್ದರೂ ಕರ್ತವ್ಯಲೋಪ ಎಸಗಿದ ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲು, ‘ನಡೆದಿರಬಹುದಾದ ಭ್ರಷ್ಟಾಚಾರದ ಕುರಿತು ತನಿಖೆ’ ಮಾಡಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ನಿರ್ಧರಿಸಿದೆ.

ಪಾಲಿಕೆಯ ಆದಾಯ ಸೋರಿಕೆ ಮಾಡಿದ, ಸರ್ಕಾರಿ ಸೇವೆಯನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪದ ಮೇಲೆ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತಯಾರಿ ಮಾಡಿಕೊಳ್ಳುತ್ತಿದೆ.

‘ಪ್ರತಿ ಕಿ.ಮೀ. ಉದ್ದದ ಒಎಫ್‌ಸಿ ಅಳವಡಿಕೆಗೆ ಪಾಲಿಕೆಗೆ ಅಂದಾಜು ₹ 8.50 ಲಕ್ಷ ಶುಲ್ಕ ಕಟ್ಟಬೇಕು. ಯಲಚೇನಹಳ್ಳಿ ವಾರ್ಡ್‌ ಒಂದರಲ್ಲಿನ ಅಕ್ರಮದಿಂದ ಅಂದಾಜು ₹ 25 ಲಕ್ಷ ಶುಲ್ಕ ಪಾಲಿಕೆಯ ಕೈತಪ್ಪಿದೆ. ಇಂತಹ ಅಕ್ರಮಗಳು ಬಹುತೇಕ ವಾರ್ಡ್‌ಗಳಲ್ಲೂ ನಡೆದಿವೆ. ಇದರಿಂದ ಪಾಲಿಕೆ ಖಜಾನೆ ತುಂಬಬೇಕಿದ್ದ ನೂರಾರು ಕೋಟಿ ವರಮಾನ ಕೋತಾ ಆಗಿದೆ’ ಎಂಬ ಆರೋಪ ಆರ್‌ಟಿಐ ಅರ್ಜಿದಾರರದು.

ಒಎಫ್‌ಸಿ: ಮಾಹಿತಿ ಹರಿಸುವ ಕಾಲುವೆ
ಜಗತ್ತು ಅಂತರ್ಜಾಲದ ಸಮೂಹ ಸನ್ನಿಗೆ ಒಳಗಾದ ಬಳಿಕ ಮೊಬೈಲ್‌ ಟವರ್‌ಗಳು ಹಾಗೂ ಬ್ರಾಡ್‌ ಬ್ಯಾಂಡ್‌ ಸೇವೆಗಳನ್ನು ನೀಡಲು ಒಎಫ್‌ಸಿ ಬಳಸಲಾಗುತ್ತಿದೆ.

ಸ್ವೀಕರಿಸುವ ವಿದ್ಯುತ್‌ ತರಂಗಗಳನ್ನು ಆಪ್ಟಿಕಲ್‌ (ಬೆಳಕಿನ) ಸಂಜ್ಞೆಗಳನ್ನಾಗಿ ಪರಿವರ್ತಿಸಿ ಅಂತಿಮ ತಾಣದವರೆಗೆ ಪ್ರವಹಿಸಿ, ಅಲ್ಲಿ ಪುನಃ ವಿದ್ಯುತ್‌ ತರಂಗಗಳನ್ನಾಗಿ ಪರಿವರ್ತಿಸುವ ಜಾಲ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ).

ಕೇಬಲ್‌ ಒಳಗಿರುವ ಸಿಲಿಕಾ ಗಾಜಿನ (ಮೆದುವಾದ ಹಾಗೂ ಬಾಗುವಂತಹ) ತಂತುಗಳು ಆಪ್ಟಿಕಲ್‌ ಸಂಜ್ಞೆಗಳನ್ನು ಸಾಗಿಸುವ ಸಾಧನಗಳಾಗಿವೆ. ಧ್ವನಿ ಹಾಗೂ ಚಿತ್ರಗಳ ಸ್ಪಷ್ಟತೆಗಾಗಿ ಈ ವ್ಯವಸ್ಥೆಯನ್ನು ಆವಿಷ್ಕರಿಸಲಾಗಿದೆ. ಒಎಫ್‌ಸಿ ಜಾಲಕ್ಕೆ ಮಾಹಿತಿಯನ್ನು ಹರಿಸುವ ‘ತಂತ್ರಜ್ಞಾನದ ಕಾಲುವೆ’ ಆಗಿದೆ!

ಒಎಫ್‌ಸಿಯಲ್ಲಿ ಎರಡು ವಿಧ : ಒಎಫ್‌ಸಿ ಸೇವಾದಾರರಲ್ಲಿ ಎರಡು ವಿಧ. ದೂರಸಂಪರ್ಕ ಸೇವೆಗಳನ್ನು ಒದಗಿಸುವ ಸೇವಾದಾರರದು ಒಂದು ವಿಧವಾದರೆ, ದೂರದರ್ಶನ ಸೇವೆಗಳೊಂದಿಗೆ ಅಂತರ್ಜಾಲ ಸೇವೆ (ಐಎಸ್‌ಪಿ) ಒದಗಿಸುವವರದು ಇನ್ನೊಂದು ವಿಧ. ಐಎಸ್‌ಪಿ ಸೇವೆ ಒದಗಿಸುವವರು ಒಎಫ್‌ಸಿಯನ್ನು ಮರದಿಂದ ಮರಕ್ಕೆ, ಕಂಬದಿಂದ ಕಂಬಕ್ಕೆ ತೂಗುಹಾಕಿ ರಸ್ತೆ–ರಸ್ತೆಗೆ ತೋರಣ ಕಟ್ಟಿದ್ದಾರೆ.

ನಗರ ಸೌಂದರ್ಯ ಕುರೂಪಗೊಳಿಸಿದ ಕೇಬಲ್‌
ನಗರದ ನೆಲದಡಿ ಹರಡಿಕೊಳ್ಳುವ ಒಎಫ್‌ಸಿ ಜಾಲ ರಸ್ತೆಗಳಲ್ಲಿ ಗುಂಡಿಗಳನ್ನು ಸೃಷ್ಟಿಸುತ್ತದೆ. ಅವುಗಳನ್ನು ‘ಅವೈಜ್ಞಾನಿಕವಾಗಿ’ ಮುಚ್ಚಲು ಪಾಲಿಕೆ ಕೋಟ್ಯಂತರ ಮೊತ್ತ ವ್ಯಯಿಸುತ್ತದೆ ಎಂಬ ಸಾಮಾನ್ಯ ಆರೋಪ ಈ ಹಿಂದಿನಿಂದಲೂ ಇದೆ.

ಮರಗಳು, ವಿದ್ಯುತ್‌ ಕಂಬಗಳು, ಕಟ್ಟಡಗಳು, ಟ್ರಾಫಿಕ್‌ ಸಿಗ್ನಲ್‌ಗಳ ಕಂಬಗಳಿಗೂ ಸುತ್ತಿಕೊಂಡಿರುವ ಈ ಕೇಬಲ್‌ಗಳು ನಗರದ ಸೌಂದರ್ಯವನ್ನು ಹಾಳು ಮಾಡಿವೆ. ಮಳೆ–ಗಾಳಿಗೆ ರಸ್ತೆ, ಪಾದಚಾರಿ ಮಾರ್ಗದ ಮೇಲೆ ಬೀಳುವ ಇವು ದಾರಿಹೋಕರ ಸರಾಗ ನಡಿಗೆಗೂ ಅಡ್ಡಗಾಲಾಗಿ ಪರಿಣಮಿಸಿರುವ ಉದಾಹರಣೆಗಳು ಪ್ರತಿ ರಸ್ತೆಯಲ್ಲಿ ಸಿಗುತ್ತವೆ.

**

ನಾನು ಒಎಫ್‌ಸಿ ವಿಭಾಗಕ್ಕೆ ವರ್ಗವಾಗಿ ಬಂದು ನಾಲ್ಕು ತಿಂಗಳುಗಳು ಮಾತ್ರ ಆಗಿವೆ. ಈ ಹಿಂದಿನ ಕಾಮಗಾರಿಗಳ ಬಗ್ಗೆ ಹೆಚ್ಚು ಗೊತ್ತಿಲ್ಲ.
–ಎನ್‌.ರಮೇಶ್‌, ಮುಖ್ಯ ಎಂಜಿನಿಯರ್‌, ಒಎಫ್‌ಸಿ ವಿಭಾಗ, ಬಿಬಿಎಂಪಿ

**

ನಗರದಲ್ಲಿನ ಪ್ರಮುಖ ಸೇವಾ ಸಂಸ್ಥೆಗಳು(ಪಾಲಿಕೆ ದಾಖಲೆಗಳ ಪ್ರಕಾರ)

ರಿಲಯನ್ಸ್‌ ಜಿಯೊ ಇನ್ಫೊಕಾಂ ಲಿಮಿಟೆಡ್‌, ರಿಲಯನ್ಸ್‌ ಕಮ್ಯೂನಿಕೇಷನ್ಸ್‌ ಲಿಮಿಟೆಡ್‌, ವೊಡಾಫೋನ್‌ ಎಸ್ಸಾರ್‌ ಸೌತ್‌ ಲಿಮಿಟೆಡ್‌, ಟಾಟಾ ಟೆಲಿ ಸರ್ವಿಸಸ್‌, ಟಾಟಾ ಕಮ್ಯೂನಿಕೇಷನ್ಸ್‌ ಲಿಮಿಟೆಡ್‌, ಭಾರತಿ ಏರ್‌ಟೆಲ್‌ ಲಿಮಿಟೆಡ್‌, ಡಿಷ್‌ನೆಟ್‌ ವೈರ್‌ಲೆಸ್‌ ಪ್ರೈವೇಟ್‌ ಲಿಮಿಟೆಡ್‌, ಐಡಿಯಾ ಸೆಲ್ಯುಲರ್‌ ಲಿಮಿಟೆಡ್‌, ಸಿಸ್ಟಿಮಾ ಶ್ಯಾಮ್‌ ಟೆಲಿ ಸರ್ವಿಸ್‌ ಲಿಮಿಟೆಡ್‌, ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌, ಸ್ಪೈಸ್‌ ಟೆಲಿಕಾಂ ಲಿಮಿಟೆಡ್‌, ಹಾತ್‌ವೇ, ಬೆಲ್‌ ಟೆಲಿ ಸರ್ವಿಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಯುನಿನಾರ್‌ ಯೂನಿಟೆಕ್‌ ವೈರ್‌ಲೆಸ್‌ (ಸೌತ್‌) ಪ್ರೈವೇಟ್‌ ಲಿಮಿಟೆಡ್‌, ಸ್ಪೆಕ್ಟ್ರಾ ಐಎಸ್‌ಪಿ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌.

ಪ್ರತಿ ಮೀಟರ್‌ ಒಎಫ್‌ಸಿ ಅಳವಡಿಕೆಗೆ ಪಾಲಿಕೆಗೆ ಪಾವತಿಸಬೇಕಾದ ಶುಲ್ಕ
ಅಳವಡಿಕೆ ಶುಲ್ಕ; ₹ 600
ಮೇಲ್ವಿಚಾರಣೆ ಶುಲ್ಕ; ₹ 100
ಭದ್ರತಾ ಠೇವಣಿ; ₹ 150

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT