ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಸಮಸ್ಯೆಗಳಿಗೆ ಬುದ್ಧನ ಬೋಧನೆಗಳಲ್ಲಿವೆ ಪರಿಹಾರ: ಪ್ರಧಾನಿ ಮೋದಿ

ಧಮ್ಮ ಚಕ್ರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ
Last Updated 4 ಜುಲೈ 2020, 7:58 IST
ಅಕ್ಷರ ಗಾತ್ರ

ನವದೆಹಲಿ: 'ಜಗತ್ತು ಇಂದು ಅಸಾಧಾರಣ ಸವಾಲುಗಳನ್ನು ಎದುರಿಸುತ್ತಿದ್ದು, ಇದರಿಂದ ಹೊರಬರುವ ಪರಿಹಾರ ಮಾರ್ಗಗಳು ಬುದ್ಧನ ಬೋಧನೆಗಳಲ್ಲಿ ಇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದರು.

ಧಮ್ಮ ಚಕ್ರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸಾರನಾಥದಲ್ಲಿ ಬುದ್ಧ ನೀಡಿದ ತನ್ನ ಮೊದಲ ಧರ್ಮೋಪದೇಶದಲ್ಲಿ ವಿಶ್ವಾಸ ಮತ್ತು ಸಂಕಲ್ಪಶಕ್ತಿಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಇದು, ಮನುಷ್ಯನ ನೋವುಗಳನ್ನು ಶಮನಗೊಳಿಸುವ ಕ್ರಮವೇ ಆಗಿದೆ' ಎಂದು ಅಭಿಪ್ರಾಯಪಟ್ಟರು.

'ನಾವು ಯಾವುದೇ ಸಂದರ್ಭ ಬಂದರೂ ಎದುರಿಸಲು ಸನ್ನದ್ಧರಾಗಬೇಕು. ಜನರಲ್ಲಿ ವಿಶ್ವಾಸವನ್ನು ಇಮ್ಮಡಿಸಲು ಏನು ಸಾಧ್ಯವೋ ಅದನ್ನು ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

‘ಭರವಸೆ, ಅನ್ವೇಷಣೆ, ಸಾಧನೆಗಳಿಂದ ಸಂಕಷ್ಟ ಶಮನ ಸಾಧ್ಯ ಎಂಬುದಕ್ಕೆ ಭಾರತದ ನವೋದ್ಯಮ ಕ್ಷೇತ್ರವು ಉತ್ತಮ ನಿದರ್ಶನ. ಯುವ ಪ್ರತಿಭಾವಂತರು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಭಾರತವು ಸ್ಟಾರ್ಟ್ ಅಪ್‍ ಕ್ಷೇತ್ರದ ಅತಿದೊಡ್ಡ ಕೇಂದ್ರವಾಗಿದೆ ಎಂದು ಹೇಳಿದರು.

ಬುದ್ಧನ ಅಷ್ಟಾಂಗ ಮಾರ್ಗಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ‘ಇವು ಹಲವು ಸಮಾಜ, ದೇಶಗಳಿಗೆ ಸನ್ನಡತೆಯ ಮಾರ್ಗಗಳಾಗಿವೆ. ಇವು ದಯಾಗುಣವನ್ನು ಎತ್ತಿಹಿಡಿದಿವೆ’ ಎಂದರು.

‘21ನೇ ಶತಮಾನವು ಸರ್ವರಿಗೂ ಒಳಿತಾಗಬಹುದೆಂಬ ವಿಶ್ವಾಸವಿದೆ. ಬುದ್ಧನ ಆದರ್ಶಗಳೊಂದಿಗೆ ಮಿಳಿತವಾಗಿರುವ ಎಳೆಯ ಮನಸ್ಸುಗಳು ಈ ಆಶಾವಾದಕ್ಕೆ ಕಾರಣ. ಬುದ್ಧನ ಬೋಧನೆಗಳು ಜಗತ್ತಿನ ಸುಸ್ಥಿರತೆಗೆ ಒತ್ತು ನೀಡುವ ರೀತಿಯಲ್ಲಿವೆ’ ಎಂದು ಹೇಳಿದರು.

ಬೌದ್ಧ ಕ್ಷೇತ್ರಗಳ ಅಭಿವೃದ್ಧಿ: ‘ಬೌದ್ಧ ಪರಂಪರೆಯ ಕ್ಷೇತ್ರಗಳಿಗೆ ಹೆಚ್ಚು ಜನರನ್ನು ಆಕರ್ಷಿಸುವುದು ಪ್ರಸ್ತುತ ಅಗತ್ಯವಾಗಿದೆ. ಭಾರತದಲ್ಲಿ ಇಂಥ ಹಲವು ಸ್ಥಳಗಳಿವೆ. ನನ್ನ ಲೋಕಸಭಾ ಕ್ಷೇತ್ರವನ್ನು ಜನರು ಸಾರನಾಥದಿಂದಲೂ ಗುರುತ್ತಿಸುತ್ತಾರೆ’ ಎಂದು ಮೋದಿ ಹೇಳಿದರು. ಸಾರನಾಥ, ವಾರಾಣಸಿ ಪಟ್ಟಣದಿಂದ 10 ಕಿ.ಮೀ.ದೂರವಿದೆ.

ಇತ್ತೀಚೆಗಷ್ಟೇ ಕೇಂದ್ರ ಸಂಪುಟವು, ಕುಶಿನಗರ ವಿಮಾನನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾರ್ಪಡಿಸಲಾಗುವುದು ಎಂದು ಪ್ರಕಟಿಸಿದ್ದನ್ನು ಪ್ರಸ್ತಾಪಿಸಿದ ಮೋದಿ, ಈ ಕ್ರಮದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಯಾತ್ರಿಗಳು ದೇಶಕ್ಕೆ ಬರುತ್ತಾರೆ ಎಂದರು.

ಧಮ್ಮ ಅಥವಾ ಧರ್ಮ ಚಕ್ರ ದಿನವನ್ನು ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT