ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ರಾಜಕೀಯ | ಸಚಿನ್‌ ಪೈಲಟ್ ಬಣದ ಅನರ್ಹತೆ ತೀರ್ಪು ಇಂದು

Last Updated 23 ಜುಲೈ 2020, 19:32 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದ ವಜಾಗೊಂಡ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಸೇರಿ 19 ಶಾಸಕರ ಅನರ್ಹತೆ ಅರ್ಜಿ ಬಗ್ಗೆ ತೀರ್ಪು ನೀಡಲು ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಿದೆ. ಆದರೆ, ಈ ತೀರ್ಪು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಬದ್ಧವಾಗಿರುತ್ತದೆ ಎಂದೂ ಹೇಳಿದೆ.

ಅನರ್ಹತೆಗೆ ಸಂಬಂಧಿಸಿ ವಿಧಾನಸಭೆ ಸ್ಪೀಕರ್‌ ಸಿ.‍ಪಿ. ಜೋಶಿ ನೀಡಿದ್ದ ನೋಟಿಸನ್ನು ಪ್ರಶ್ನಿಸಿ ಪೈಲಟ್‌ ಮತ್ತು ಅವರ ಬಣದ ಶಾಸಕರು ರಾಜಸ್ಥಾನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಮೇಲಿನ ಆದೇಶವನ್ನು ಶುಕ್ರವಾರ ಪ್ರಕಟಿಸಲಾಗುವುದು ಎಂದು ಹೈಕೋರ್ಟ್‌ ತಿಳಿಸಿತ್ತು. ಆದರೆ, ಹೈಕೋರ್ಟ್ ತೀರ್ಪು ನೀಡಬಾರದು ಎಂದು ಕೋರಿ ಸ್ಪೀಕರ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸ್ಪೀಕರ್‌ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿಲ್ಲ. ಹಾಗಾಗಿ, ಹೈಕೋರ್ಟ್‌ ಶುಕ್ರವಾರ ತೀರ್ಪು ಪ್ರಕಟಿಸಲಿದೆ.

ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಬಿ.ಆರ್‌.ಗವಾಯಿ ಮತ್ತು ಕೃಷ್ಣ ಮುರಳಿ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಸ್ಪೀಕರ್‌ ಅವರ ಅರ್ಜಿಯು ಹಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದೆ. ಹಾಗಾಗಿ, ಈ ಬಗ್ಗೆ ದೀರ್ಘವಾದ ವಿಚಾರಣೆ ಅಗತ್ಯವಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಸೋಮವಾರ ವಿಚಾರಣೆ ಮುಂದುವರಿಯಲಿದೆ.

ಭಿನ್ನಮತಕ್ಕಿಲ್ಲವೇ ಅವಕಾಶ?

ಪಕ್ಷವೊಂದರ ಟಿಕೆಟ್‌ನಲ್ಲಿ ಆಯ್ಕೆಯಾದ ಶಾಸಕರು ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇಲ್ಲವೇ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಇಂತಹ ಭಿನ್ನಾಭಿಪ್ರಾಯಕ್ಕೆ ಅವಕಾಶ ಇಲ್ಲ ಎಂದಾದರೆ ಪ್ರಜಾಪ್ರಭುತ್ವವನ್ನು ಅಲ್ಲಗಳೆದಂತೆ ಅಲ್ಲವೇ ಎಂದೂ ಕೋರ್ಟ್‌ ಕೇಳಿದೆ.

ಶೀಘ್ರವೇ ವಿಶ್ವಾಸಮತ- ಗೆಹ್ಲೋಟ್‌:ವಿಧಾನಸಭೆಯ ಅಧಿವೇಶನವನ್ನು ಶೀಘ್ರವೇ ಕರೆಯಲಾಗುವುದು. ತಮ್ಮ ಪಕ್ಷಕ್ಕೆ ಸದನದಲ್ಲಿ
ಬಹುಮತ ಇದೆ. ಹಾಗಾಗಿ, ವಿಶ್ವಾಸಮತ ಸಾಬೀತು ಮಾಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಹೇಳಿದ್ದಾರೆ.

ಶೀಘ್ರವೇ ಅಧಿವೇಶನ ಕರೆಯವುದುದು ಸಾಧ್ಯವಿಲ್ಲ. ಏಕೆಂದರೆ, ಅಧಿವೇಶನಕ್ಕೆ ಕನಿಷ್ಠ 21 ದಿನಗಳ ಮೊದಲು ನೋಟಿಸ್‌ ನೀಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ರಾಜೇಂದ್ರ ರಾಥೋಡ್‌ ಹೇಳಿದ್ದಾರೆ.

ಮತ್ತೊಂದು ತನಿಖೆ

ಜೈಪುರ: ಸಂಜೀವನಿ ಸಾಲ ಸಹಕಾರ ಸಂಘದ ಹಗರಣವೊಂದರಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರ ಪಾತ್ರವೇನು ಎಂಬುದರ ತನಿಖೆ ನಡೆಸುವಂತೆ ಜೈಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಪೊಲೀಸರಿಗೆ ಆದೇಶಿಸಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಶೇಖಾವತ್‌ ಅವರು ಷಡ್ಯಂತ್ರ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ನಡುವೆಯೇ ಶೇಖಾವತ್‌ ವಿರುದ್ಧ ತನಿಖೆಗೆ ನ್ಯಾಯಾಲಯವು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT