ಶನಿವಾರ, ಮೇ 15, 2021
26 °C
ಸಾಂಪ್ರದಾಯಿಕ ಧೋತಿ ಧರಿಸಿ ಗಮನಸೆಳೆದ ಬ್ಯಾನರ್ಜಿ

ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಅಭಿಜಿತ್‌ ಬ್ಯಾನರ್ಜಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ಸ್ಟಾಕ್ಹೋಮ್: ಭಾರತ ಮೂಲದ ಅಭಿಜಿತ್‌ ಬ್ಯಾನರ್ಜಿ, ಅವರ ಪತ್ನಿ ಎಸ್ತರ್‌ ಡಫ್ಲೊ ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ಗೆ ಸ್ವೀಡನ್‌ನಲ್ಲಿ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಬ್ಯಾನರ್ಜಿ ಅವರು ಸಾಂಪ್ರದಾಯಿಕ ಧೋತಿ ಮತ್ತು ಕೋಟ್ ಧರಿಸಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡರೆ, ಡಫ್ಲೊ ನೀಲಿ ಸೀರೆ ಹಾಗೂ ಕ್ರೆಮರ್‌ ಸೂಟ್ ಧರಿಸಿದ್ದರು. ಪ್ರಶಸ್ತಿಯು 90 ಲಕ್ಷ ಸ್ವೀಡಿಶ್ ಕ್ರೊನಾರ್‌ (ಸುಮಾರು ₹6.5 ಕೋಟಿ) ನಗದನ್ನು ಒಳಗೊಂಡಿದೆ.

ಜಾಗತಿಕ ಮಟ್ಟದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಇವರು ತೋರಿಸಿಕೊಟ್ಟ ಪ್ರಾಯೋಗಿಕ ಧೋರಣೆಗಾಗಿ ಪ್ರಶಸ್ತಿಯ ಗೌರವ ಸಂದಿದೆ. 

ಕೋಲ್ಕತ್ತದಲ್ಲಿ ಜನಿಸಿದ ಅಭಿಜಿತ್‌ ಅವರು ಅಲ್ಲಿನ ವಿಶ್ವವಿದ್ಯಾಲಯ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು. 1998ರಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದಾರೆ. 2003ರಲ್ಲಿ ಅಭಿಜಿತ್‌ ಅವರು ಎಸ್ತರ್‌ ಡಫ್ಲೊ ಮತ್ತು ಸೆಂಥಿಲ್‌ ಮುಲೈನಾಥನ್‌ ಅವರೊಂದಿಗೆ ಸೇರಿ ‘ದಿ ಅಬ್ದುಲ್‌ ಲತೀಫ್‌ ಜಮೀಲ್‌ ಪಾವರ್ಟಿ ಆ್ಯಕ್ಷನ್‌ ಲ್ಯಾಬ್‌’ ಸ್ಥಾಪಿಸಿದ್ದರು. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯ ಉನ್ನತ ಮಟ್ಟದ ಸಮಿತಿಯಲ್ಲೂ ಅಭಿಜಿತ್‌ ಕಾರ್ಯನಿರ್ವಹಿಸಿದ್ದರು.

ಬ್ಯಾನರ್ಜಿ ಮತ್ತು ಡಫ್ಲೊ ಅವರಿಬ್ಬರೂ ಅಮೆರಿಕದ ಮೆಸ್ಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ (ಎಂಐಟಿ) ಪ್ರಾಧ್ಯಾಪಕರಾಗಿದ್ದಾರೆ. ಡಫ್ಲೊ ಅವರು ಅರ್ಥಶಾಸ್ತ್ರದಲ್ಲಿ ಈ ಪ್ರಶಸ್ತಿ ಪಡೆದ ಎರಡನೇ ಮಹಿಳೆ. ಅಷ್ಟೇ ಅಲ್ಲ, ಈ ‍ಕ್ಷೇತ್ರದಲ್ಲಿ ಈ ಪ‍್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು