ಬುಧವಾರ, ಆಗಸ್ಟ್ 4, 2021
20 °C
ಅಟ್ಲಾಂಟಾದ ಪೊಲೀಸ್‌ ಮುಖ್ಯಸ್ಥ ರಾಜೀನಾಮೆ

ಅಮೆರಿಕ: ಪೊಲೀಸರ ಗುಂಡಿಗೆ ಮತ್ತೊಬ್ಬ ಕಪ್ಪು ವರ್ಣೀಯ ಸಾವು, ಭುಗಿಲೆದ್ದ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಟ್ಲಾಂಟಾ: ಆಫ್ರೋ–ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಇನ್ನೂ ಜನರ ಮನದಲ್ಲಿದ್ದು, ಅಮೆರಿಕಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ, ಮತ್ತೊಬ್ಬ ಕಪ್ಪು ವರ್ಣೀಯನನ್ನು ಅಟ್ಲಾಂಟಾದಲ್ಲಿ ಪೊಲೀಸರು ಗುಂಡಿಕ್ಕಿ ಶನಿವಾರ ಹತ್ಯೆ ಮಾಡಿದ್ದಾರೆ.

27 ವರ್ಷದ ರೇಶರ್ಡ್‌ ಬ್ರೂಕ್ಸ್‌ ಹತ್ಯೆಯಾದ ಕಪ್ಪು ವರ್ಣೀಯ. ಈ ಘಟನೆ ನಡೆದ ಕೆಲವೇ ಗಂಟೆಗಳ ನಂತರ, ಅಟ್ಲಾಂಟಾ ಪೊಲೀಸ್‌ ಮುಖ್ಯಸ್ಥ ಎರಿಕಾ ಶೀಲ್ಡ್ಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಘಟನೆ ಖಂಡಿಸಿ ಅಟ್ಲಾಂಟಾದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಬ್ರೂಕ್ಸ್‌ ಹತ್ಯೆ ನಡೆದ ವೆಂಡಿ ರೆಸ್ಟೋರೆಂಟ್‌ಗೆ ಪ್ರತಿಭಟನಕಾರರು ಶನಿವಾರ ರಾತ್ರಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ: ವೆಂಡಿ ರೆಸ್ಟೋರೆಂಟ್‌ನ ವಾಹನ ಪಾರ್ಕಿಂಗ್‌ ಸ್ಥಳದಲ್ಲಿರುವ ಕಾರೊಂದರಲ್ಲಿ ಯುವಕನೊಬ್ಬ ಮಲಗಿದ್ದು, ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಕೆಲವರು ಪೊಲೀಸರಿಗೆ ದೂರಿದ್ದಾರೆ. 

‘ಸ್ಥಳಕ್ಕೆ ತೆರಳಿದ್ದ ಪೊಲೀಸರು, ಕಾರಿನಲ್ಲಿದ್ದ ಯುವಕ ಬ್ರೂಕ್ಸ್ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತಪಡಿಸಿ, ಪರೀಕ್ಷೆಗೆ ಒಳಗಾಗುವಂತೆ‌ ಸೂಚನೆ ನೀಡಿದ್ದಾರೆ. ಈ ಪರೀಕ್ಷೆಗೆ ಒಳಪಡಲು ನಿರಾಕರಿಸಿದ ಬ್ರೂಕ್ಸ್‌, ಓಡಿ ಹೋಗಲು ಯತ್ನಿಸಿದ್ದಾನೆ’ ಎಂದು ಜಾರ್ಜಿಯಾ ಬ್ಯುರೋ ಆಫ್‌ ಇನ್ವೆಸ್ಟಿಗೇಷನ್‌ (ಜಿಬಿಐ) ಅಧಿಕಾರಿಗಳು ಹೇಳಿದ್ದಾರೆ. 

‘ಆತನನ್ನು ಹಿಡಿಯಲು ಪೊಲೀಸರು ಯತ್ನಿಸಿದಾಗ, ಅವರ ಕೈಯಲ್ಲಿದ್ದ ಟೇಸರ್‌ (ತಪ್ಪಿಸಿಕೊಂಡು ಹೋಗುವವರತ್ತ ವಿದ್ಯುತ್‌ ತರಂಗ ಹೊರಹೊಮ್ಮಿಸಿ, ಅವರು ಚಲಿಸದಂತೆ ಮಾಡಲು ಪೊಲೀಸರು ಉಪಯೋಗಿಸುವ ಸಾಧನ) ಕಿತ್ತುಕೊಂಡ ಬ್ರೂಕ್ಸ್‌, ಓಡಿ ಹೋಗುತ್ತಿದ್ದಾಗ ಪೊಲೀಸರು ಗುಂಡು ಹಾರಿಸಿದರು’ ಎಂದೂ ಜಿಬಿಐ ಅಧಿಕಾರಿಗಳು ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು