ಮಂಗಳವಾರ, ಸೆಪ್ಟೆಂಬರ್ 24, 2019
29 °C

ಲಂಡನ್‌ನಲ್ಲಿ ನಾಪತ್ತೆಯಾಗಿದ್ದ ಬಿಜೆಪಿ ನಾಯಕನ ಮಗನ ಶವ ಪತ್ತೆ?

Published:
Updated:

ಲಂಡನ್ (ಪಿಟಿಐ): ಬ್ರಿಟನ್‌ನ ಸುಸ್ಸೆಕ್ಸ್‌ನಲ್ಲಿ ಭಾರತದ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದ್ದು, ಅದು ತೆಲಂಗಾಣ ಬಿಜೆಪಿ ನಾಯಕ ಸನ್ನೆ ಉದಯ್ ಪ್ರತಾಪ್ ಅವರ ಮಗ ಉಜ್ವಲ್ ಶ್ರೀಹರ್ಷ ಸನ್ನೆ ಅವರದ್ದಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಕಮ್ಮಂ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸನ್ನೆ ಉದಯ್ ಪ್ರತಾಪ್ ಅವರ ಮಗ ಉಜ್ವಲ್ ಶ್ರೀಹರ್ಷ ಸನ್ನೆ  (24) ಲಂಡನ್‌ನಲ್ಲಿ ಓದುತ್ತಿದ್ದು, ಶುಕ್ರವಾರದಿಂದ ನಾಪತ್ತೆಯಾಗಿದ್ದರು. 

ಪೊಲೀಸರು ಹೆಲಿಕಾಪ್ಟರ್ ಸಹಾಯದಿಂದ ಉಜ್ವಲ್ ಅವರ ಶವವನ್ನು ಭಾನುವಾರ ಸುಸ್ಸೆಕ್ಸ್‌ನ ಬೀಚಿಹೆಡ್‌ ಪ್ರದೇಶದ ಸೀಮೆಸುಣ್ಣದ ಬಂಡೆಗಲ್ಲುಗಳ ಮೇಲೆ ಪತ್ತೆ ಹಚ್ಚಿದ್ದಾರೆ. ಬೀಚಿಹೆಡ್  ಆತ್ಮಹತ್ಯೆ ತಾಣವೆಂದು ಕುಖ್ಯಾತಿಯಾಗಿದೆ. 

‘ಭಾನುವಾರ ರಾತ್ರಿ 10ರ ಸುಮಾರಿಗೆ  ಶವ ಪತ್ತೆಯಾಗಿದೆ. ನಾಪತ್ತೆ ಯಾಗಿದ್ದ ಉಜ್ವಲ್ ಅವರನ್ನು ಈ ಶವ ಹೋಲುತ್ತಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ’ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.

ಲಂಡನ್‌ನ ಕ್ವೀನ್ ಮೇರಿ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಉಜ್ವಲ್, ಆಗಸ್ಟ್ 21ರಂದು ಕೊನೆಯ ಬಾರಿಗೆ ಪೋಷಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ನಂತರ ಅವರು ನಾಪತ್ತೆಯಾಗಿದ್ದರು.

Post Comments (+)