ಭಾನುವಾರ, ಮಾರ್ಚ್ 7, 2021
20 °C
ತಾಯಿಯ ಜತೆ ಜಗಳವಾಡಿ ಹೆದ್ದಾರಿಯಲ್ಲಿ ಕಾರು ಚಲಾಯಿಸಿದ ಪೋರ

3 ಡಾಲರ್‌ಗೆ ಲ್ಯಾಂಬೊರ್ಗಿನಿ ಕಾರ್ ಖರೀದಿಸಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ಬಾಲಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಐದು ವರ್ಷದ ಬಾಲಕನೊಬ್ಬ ಜೇಬಿನಲ್ಲಿ ಕೇವಲ 3 ಡಾಲರ್‌ಗಳನ್ನಿಟ್ಟುಕೊಂಡು ದುಬಾರಿ ಲ್ಯಾಂಬೊರ್ಗಿನಿ ಖರೀದಿಸಲು ತನ್ನ ತಾಯಿಯ ಕಾರು ಚಲಾಯಿಸಿಕೊಂಡು ಕ್ಯಾಲಿಫೋರ್ನಿಯಾಗೆ ತೆರಳುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅಮೆರಿಕದ ಉತಾಹ್‌ ರಾಜ್ಯದಲ್ಲಿ ಈ ಪ್ರಸಂಗ ನಡೆದಿದೆ. ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುತ್ತಿದ್ದನ್ನು ಕಂಡ ಪೊಲೀಸರು ತಡೆ ಹಿಡಿದಾಗ ಕ್ಷಣ ಕಾಲ ಅಚ್ಚರಿಪಟ್ಟಿದ್ದಾರೆ.

‘ತನಗೆ ಲ್ಯಾಂಬೊರ್ಗಿನಿ ಕಾರು ಕೊಡಿಸುವಂತೆ ದುಂಬಾಲು ಬಿದ್ದಿದ್ದ ಬಾಲಕ ತಾಯಿಯ ಜತೆ ಜಗಳವಾಡಿದ್ದಾನೆ. ಆತನ ಮಾತಿಗೆ ಒಪ್ಪಿಗೆ ನೀಡದಿದ್ದಾಗ ಮುನಿಸಿಕೊಂಡ ಆತ, ತಾಯಿಯ ಕಾರನ್ನೇ ತೆಗೆದುಕೊಂಡು ಕ್ಯಾಲಿಫೋರ್ನಿಯಾಗೆ ತೆರಳಿ ಲ್ಯಾಂಬೊರ್ಗಿನಿ ಖರೀದಿಸಲು ಮುಂದಾಗಿದ್ದಾನೆ’ ಎಂದು ಉತಾಹ್‌ ಪೊಲೀಸರು ತಿಳಿಸಿದ್ದಾರೆ.

ಹೊಸ ಲ್ಯಾಂಬೊರ್ಗಿನಿ ಕಾರಿನ ಬೆಲೆ ಸುಮಾರು 2 ಲಕ್ಷ ಡಾಲರ್‌ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತಾಹ್‌ ರಾಜ್ಯದ ಒಗ್ಡೇನ್‌ ಬಳಿಯ ಹೆದ್ದಾರಿಯಲ್ಲಿ ಮನಬಂದಂತೆ ಚಲಾಯಿಸುತ್ತಿದ್ದ ಕಾರನ್ನು ಕಂಡ ಪೊಲೀಸರು ತಡೆದು ನಿಲ್ಲಿಸಿದಾಗ ಕ್ಷಣಕಾಲ ದಂಗಾದರು. ಚಾಲಕನ ಸೀಟಿನಲ್ಲಿ ಬಾಲಕನಿದ್ದ. ಅದೃಷ್ಟವಶಾತ್‌ ಯಾವುದೇ ಹಾನಿಯಾಗಿಲ್ಲ. ಪೋಷಕರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ಸರ್ಕಾರಿ ವಕೀಲರು ನಿರ್ಧರಿಸಲಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ರಿಕ್‌ ಮಾರ್ಗನ್‌ ತಿಳಿಸಿದ್ದಾರೆ.

ಈ ಮೊದಲು ಬಾಲಕ ಕಾರು ಚಲಾಯಿಸಿರಲಿಲ್ಲ ಮತ್ತು ಈ ರೀತಿ ವರ್ತಿಸಿರಲಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

ಇಬ್ಬರು ಪೋಷಕರು ಕೆಲಸಕ್ಕೆ ತೆರಳುತ್ತಿದ್ದು, ಬಾಲಕನ ಸಹೋದರ ಆತನನ್ನು ನೋಡಿಕೊಳ್ಳುತ್ತಿದ್ದ. ಮನೆಯಲ್ಲಿದ್ದ ಕಾರಿನ ಕೀ ತೆಗೆದುಕೊಂಡ ಬಾಲಕ ಕಾರು ಚಲಾಯಿಸಿಕೊಂಡು ಹೋಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು