ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾದ್ಯಂತ 1.10 ಲಕ್ಷ ಕೋವಿಡ್‌ 19 ಪ್ರಕರಣಗಳು ಪತ್ತೆ

Last Updated 9 ಮಾರ್ಚ್ 2020, 20:46 IST
ಅಕ್ಷರ ಗಾತ್ರ

ಪ್ಯಾರಿಸ್‌: ವಿಶ್ವದಾದ್ಯಂತ 1.10 ಲಕ್ಷ ಕೋವಿಡ್‌ 19 ಪ್ರಕರಣಗಳು ಪತ್ತೆಯಾಗಿದ್ದು, 100 ದೇಶಗಳಿಗೆ ವ್ಯಾಪಿಸಿದೆ. 3,800ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಎಎಫ್‌ಪಿ ಸೋಮವಾರ ಹೇಳಿದೆ.

ಇರಾನ್‌ದಲ್ಲಿ 600 ಹೊಸ ಪ್ರಕರಣಗಳು ಪತ್ತೆಯಾದ ನಂತರ ಎಎಫ್‌ಪಿ ಈ ಸಂಖ್ಯೆ ಪ್ರಕಟಿಸಿದೆ. ಚೀನಾದಲ್ಲಿ ಹೆಚ್ಚಿನ ಜನರಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆಯೂ ಹೆಚ್ಚಿದೆ.

ಕೋವಿಡ್‌ 19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ 2.20 ಕೋಟಿ ಮುಖಗವಸುಗಳ ಖರೀದಿಗೆ ಇಟಲಿ ಆದೇಶ ಮಾಡಿದೆ. ದೇಶದಲ್ಲಿ ಈವರೆಗೆ 366 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಜನ್ಮ ಶತಮಾನೋತ್ಸವ ಮುಂದಕ್ಕೆ: ಬಾಂಗ್ಲಾ ದೇಶದಲ್ಲಿ ಮೂರು ಕೋವಿಡ್–19 ಪ್ರಕರಣಗಳು ಪತ್ತೆಯಾದ ಕೆಲವೇ ಗಂಟೆಗಳಲ್ಲೇ, ಮಾರ್ಚ್ 17ರಂದು ನಡೆಯಬೇಕಿದ್ದ ಬಾಂಗ್ಲಾದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ಉದ್ಘಾಟನೆ ಸಮಾರಂಭವನ್ನು ಮುಂದೂಡಲಾಗಿದೆ.

ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಿತ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪೋಂಪಿಯೊ ಹೇಳಿಕೆಗೆ ಚೀನಾ ಖಂಡನೆ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೋಂಪಿಯೊ ಅವರು ಕೋವಿಡ್‌–19 ಅನ್ನು ‘ವುಹಾನ್‌ ವೈರಸ್’ ಎಂದು ಕರೆದಿರುವುದಕ್ಕೆ ಖಂಡನೆ ವ್ಯಕ್ತಪಡಿಸಿರುವ ಚೀನಾ, ಇದು‘ ಕೀಳು ಮಟ್ಟದ ನಡವಳಿಕೆ’ ಎಂದಿದೆ.

ಜರ್ಮನಿ: 1,112 ಪ್ರಕರಣಗಳು ಪತ್ತೆ
ಬರ್ಲಿನ್‌ (ಎಎಫ್‌ಪಿ):
ಜರ್ಮನಿಯಲ್ಲಿ ಕೋವಿಡ್‌ 19 ಸೋಂಕು ತಗುಲಿರುವ 1,112 ಪ್ರಕರಣಗಳು ದೃಢಪಟ್ಟಿವೆ.

‘ಸೋಂಕು ತಡೆಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಒಂದೇ ಕಡೆಗೆ ಸಾಮೂಹಿಕವಾಗಿ ಜನರು ಸೇರಬಾರದು’ ಎಂದು ಆರೋಗ್ಯ ಸಚಿವ ಜೆನ್ಸ್‌ ಸ್ಪಾನ್‌ ಹೇಳಿದ್ದಾರೆ. ಜನರು ಸೇರದಿರುವುದರಿಂದ ಫುಟ್‌ಬಾಲ್‌ ಹಾಗೂ ಡರ್ಬಿ ಕ್ರೀಡೆಗಳಿಗೆ ಜನರು ಬರದಂತಾಗಿದ್ದು, ತೀವ್ರ ಪರಿಣಾಮ ಉಂಟಾಗಿದೆ.

ವಿಮಾನಯಾನ ಸ್ಥಗಿತ
ದುಬೈ (ಎಪಿ):
ಜಾಗತಿಕ ಆರ್ಥಿಕತೆಯ ಮೇಲೆ ಏಕಾಏಕಿ ಪರಿಣಾಮ ಬೀರಬಹುದೆಂಬ ಭಿತಿಯಿಂದ ಷೇರು ಮಾರುಕಟ್ಟೆಗಳು ಕುಸಿದಿದ್ದು, ಕೋವಿಡ್‌ 19 ಸೋಂಕು ಪಿಡಿತ 9 ರಾಷ್ಟ್ರಗಳಿಗೆ ವಿಮಾನಯಾನ ಹಾಗೂ ಸಮುದ್ರ ಪ್ರಯಾಣವನ್ನು ಸೌದಿ ಅರೇಬಿಯಾ ಸೋಮವಾರ ಸ್ಥಗಿತಗೊಳಿಸಿದೆ.

ತೈಲ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದ್ದು, ರಿಯಾದ್‌ನ ತಡಾವುಲ್‌ ಷೇರು ವಿನಿಮಯ ಕೇಂದ್ರದಲ್ಲಿ ಸೌದಿ ಅರಾಮ್ಕೊ ತೈಲ ಕಂಪನಿಯ ಷೇರು ಶೇ 10 ರಷ್ಟು ಕುಸಿದಿದ್ದು, ಕಂಪನಿಯು ವಹಿವಾಟನ್ನು ಸ್ಥಗಿತಗೊಳಿಸಿದೆ.

ಪ್ರವೇಶ ನಿಷೇಧ
ನವದೆಹಲಿ (ಪಿಟಿಐ):
ಭಾರತ ಸೇರಿದಂತೆ 13 ದೇಶಗಳ ಜನರ ಪ್ರವೇಶವನ್ನು ಕತಾರ್‌ ತಾತ್ಕಾಲಿಕವಾಗಿ ನಿಷೇಧಿಸಿದೆ.

‘ಕೋವಿಡ್‌ 19 ಸೋಂಕು ವಿಶ್ವದಾದ್ಯಂತ ಹರಡುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಮತ್ತೆ 43 ಸಾವು
ಟೆಹರಾನ್‌ (ಎಎಫ್‌ಪಿ):
ಇರಾನ್‌ನಲ್ಲಿ ಕೋವಿಡ್‌ 19 ಸೋಂಕಿಗೆ ಮತ್ತೆ 43 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 237 ಕ್ಕೇರಿದಂತಾಗಿದೆ. ಕಳೆದ 24 ಗಂಟೆಗಳಲ್ಲಿ 595 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 7,167 ಮಂದಿಗೆ ಸೋಂಕು ತಗುಲಿದ್ದು, ಈವರೆಗೆ 2,394 ಮಂದಿ ಗುಣಮುಖರಾಗಿದ್ದಾರೆ.

ಇಲ್ಲಿನ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಸಿ–17 ಗ್ಲೋಬ್‌ ಮಾಸ್ಟರ್‌ ಸೇನಾ ವಿಮಾನವನ್ನು ಇರಾನ್‌ಗೆ ಕಳುಹಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

22 ಮಂದಿ ಸಾವು
ಬೀಜಿಂಗ್‌ (ಪಿಟಿಐ):
ಚೀನಾದಲ್ಲಿ ಕೋವಿಡ್‌ 19 ಸೋಂಕಿಗೆ ಮತ್ತೆ 22 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 3,119 ಮಂದಿ ಮೃತಪಟ್ಟಂತಾಗಿದೆ.

ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, 40 ಪ್ರಕರಣಗಳು ಪತ್ತೆಯಾಗಿವೆ. ವೈರಸ್‌ ಕೇಂದ್ರಬಿಂದು ಪ್ರದೇಶವಾಗಿರುವ ವುಹಾನ್‌ನಲ್ಲಿ 11 ತಾತ್ಕಾಲಿಕ ಆಸ್ಪತ್ರೆಗಳನ್ನು ಬಂದ್‌ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಈವರೆಗೆ ಒಟ್ಟು 80,735 ಮಂದಿಗೆ ಸೋಂಕು ತಗುಲಿದ್ದು, 19,016 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 58,600 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

**
ರೋಗ ತಡೆಗಟ್ಟುವ ಮಾರ್ಗಸೂಚಿಗಳನ್ನು ಎಲ್ಲ ರಾಜ್ಯಗಳಿಗೆ ನೀಡಲಾಗಿದೆ. ಪ್ರಯೋಗಾಲಯಗಳನ್ನು ಹೆಚ್ಚಿಸಿಲು<br/>ನಿರ್ದೇಶನ ನೀಡಲಾಗಿದೆ.
ಹರ್ಷ ವರ್ಧನ್‌, ಕೇಂದ್ರ ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT