ಮಂಗಳವಾರ, ನವೆಂಬರ್ 19, 2019
28 °C

ಖುಷಿಪಡಬೇಡ ಅಮೆರಿಕ ಎಂದ ಐಎಸ್: ಹೊಸ ನಾಯಕನ ಘೋಷಣೆ

Published:
Updated:
prajavani

ಬೈರೂತ್ (ಲೆಬನಾನ್): ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ತನ್ನ ಹೊಸ ನಾಯಕನನ್ನು ಹೆಸರಿಸಿದೆ. 'ಗೆದ್ದೆವು ಎಂದು ಖುಷಿಪಡಬೇಡಿ' ಎಂದು ಅಮೆರಿಕಕ್ಕೆ ಎಚ್ಚರಿಕೆಯನ್ನೂ ನೀಡಿದೆ.

ಸಿರಿಯಾದಲ್ಲಿ ಅಮೆರಿಕ ಪಡೆಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ಸಂಘಟನೆಯ ನಾಯಕ ಅಬುಬಕರ್ ಅಲ್ ಬಾಗ್ದಾದಿ ಮೃತಪಟ್ಟಿದ್ದ. ಅವನ‌ ಉತ್ತರಾಧಿಕಾರಿ ಘೋಷಣೆ ಸಂಬಂಧ ಐಎಸ್ ನಲ್ಲಿ ಅಂತಃಕಲಹ ನಡೆಯಲಿದೆ ಎಂದು ಅಮೆರಿಕ ಅಂದಾಜಿಸಿತ್ತು.

ಈ ಕುರಿತು ಆಡಿಯೊ ಟೇಪ್ ಬಿಡುಗಡೆ ಮಾಡಿರುವ ಐಎಸ್ ನ ಮಾಧ್ಯಮ ವಿಭಾಗ, ಬಾಗ್ದಾದಿ ಮೃತಪಟ್ಟಿರುವುದನ್ನು ದೃಢಪಡಿಸಿದೆ. ಬಾಗ್ದಾದಿ ಉತ್ತರಾಧಿಕಾರಿಯಾಗಿ ಅಬು ಇಬ್ರಾಹಿಂ ಅಲ್ ಹಷಿಮಿ ಅಲ್ ಖುರೇಷಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ. 'ಬಾಗ್ದಾದಿಯನ್ನು ಕೊಂದು ಏನೋ ಘನಂದಾರಿ ಸಾಧನೆ ಮಾಡಿದೆ ಎಂದು ಬೀಗಬೇಡ ಅಮೆರಿಕ. ಇಸ್ಲಾಮಿಕ್ ಸ್ಟೇಟ್ ಇಂದು ಯೂರೋಪ್, ಮಧ್ಯ ಆಫ್ರಿಕಾದ ಬಾಗಿಲಿಗೆ ಬಂದಿದೆ. ನಮ್ಮ ಪ್ರಭಾವ ದೃಢವಾಗಿ ವಿಸ್ತರಿಸುತ್ತಿದೆ' ಎಂದು ಆಡಿಯೊ ಕ್ಲಿಪಿಂಗ್ ನಲ್ಲಿ ಐಎಸ್ ವಕ್ತಾರ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾನೆ. 

ಐಎಸ್ ನ ಸಮಾಲೋಚನಾ ಮಂಡಳಿ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಬಾಗ್ದಾದಿ ಸಾವಿನ ಬಗ್ಗೆ ಐಎಸ್ ಹೆಚ್ಚು ವಿವರ ಕೊಟ್ಟಿಲ್ಲ. ಹಿಂದಿನ ವಕ್ತಾರ ಮೃತಪಟ್ಟಿದ್ದಾನೆ ಎಂದಷ್ಟೇ ಹೇಳಿದೆ.

'ಜಗತ್ತಿನಲ್ಲಿ ಅಮೆರಿಕ ಈಗ ಹಾಸ್ಯದ ವಸ್ತುವಾಗಿದೆ. ನಿಮ್ಮ ಅಧ್ಯಕ್ಷರು ರಾತ್ರಿ ಮಲಗುವಾಗ ತೆಗೆದುಕೊಂಡ ನಿರ್ಧಾರವನ್ನು ಬೆಳೆಗ್ಗೆ ಏಳುವ ಹೊತ್ತಿಗೆ ಬದಲಿಸಿರುತ್ತಾರೆ' ಎಂದು ಡೊನಾಲ್ಡ್ ಟ್ರಂಪ್ ಅವರನ್ನು ಲೇವಡಿ ಮಾಡಿದೆ.

ಬಾಗ್ದಾದಿ ಸಾವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರ ಸಂಘಟನೆಗೆ ದೊಡ್ಡ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ. ಬ್ರಿಟನ್ ದೇಶದಷ್ಟು ದೊಡ್ಡ ಭೂಪ್ರದೇಶ ಆಕ್ರಮಿಸಿಕೊಂಡಿದ್ದ ಐಎಸ್ ಉಗ್ರರು ಖಿಲಾಫತ್ ಸ್ಥಾಪಿಸಿದ್ದೇವೆ ಎಂದು ಘೋಷಿಸಿ, ಮಧ್ಯಯುಗ ಕಾಲದ ಕಟ್ಟರ್ ಇಸ್ಲಾಮಿಕ್ ಆಚರಣೆಗಳನ್ನು ಅತ್ಯಂತ ಕ್ರೂರವಾಗಿ ಜಾರಿ ಮಾಡಿದ್ದರು.

ಪ್ರತಿಕ್ರಿಯಿಸಿ (+)