ಸೋಮವಾರ, ಡಿಸೆಂಬರ್ 9, 2019
20 °C
ಸಜಿತ್‌ ಪ್ರೇಮದಾಸಗೆ ಸೋಲು

ಗೋಟಬಯ ರಾಜಪಕ್ಸೆ ಶ್ರೀಲಂಕಾ ಅಧ್ಯಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಗೋಟಬಯ ರಾಜಪಕ್ಸೆ (70) ಭಾನುವಾರ ಆಯ್ಕೆಯಾಗಿದ್ದಾರೆ. ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದ ಗೋಟಬಯ ಅವರು ಆಡಳಿತಾರೂಢ ಪಕ್ಷದ ಅಭ್ಯರ್ಥಿ ಸಜಿತ್‌ ಪ್ರೇಮದಾಸ ಅವರನ್ನು ಸೋಲಿಸಿದ್ದಾರೆ. ಈವರೆಗೆ ಮೈತ್ರಿಪಾಲ ಸಿರಿಸೇನಾ ಅವರು ಅಧ್ಯಕ್ಷರಾಗಿದ್ದರು. ಲಂಕಾದಲ್ಲಿ ಭಾನುವಾರ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಮುಂದಿನ ಐದು ವರ್ಷಗಳವರೆಗೆ ಗೋಟಬಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 

ಈಸ್ಟರ್‌ ಸಂಡೆಯಂದು ನಡೆದ ಭಾರಿ ಭಯೋತ್ಪಾದಕರ ದಾಳಿಯಲ್ಲಿ 269 ಮಂದಿ ಮೃತಪಟ್ಟಿದ್ದರು. ಇದಾದ ನಂತರ ದೇಶದಲ್ಲಿ ರಕ್ಷಣೆಗೆ ಸಂಬಂಧಿತ ಸವಾಲುಗಳು ಎದುರಾಗಿದ್ದವು. ಇದೀಗ ರಾಜಪಕ್ಸೆ ಕುಟುಂಬ ಮತ್ತೆ ಅಧಿಕಾರಕ್ಕೆ ಬಂದಿದೆ.

ಶ್ರೀಲಂಕಾದ ಹೊಸ ಪಯಣದಲ್ಲಿ ನಾವು ಸಾಗುತ್ತಿದ್ದೇವೆ. ಇದರಲ್ಲಿ ದೇಶದ ಎಲ್ಲಾ ಜನರು ಭಾಗಿದಾರರು. ಎಲ್ಲವನ್ನೂ ನಾವು ಖುಷಿಯಿಂದ ಆಚರಿಸೋಣ ಎಂದು ನೂತನ ಅಧ್ಯಕ್ಷ  ಗೋಟಬಯ ರಾಜಪಕ್ಸೆ ಹೇಳಿದರು.

ಭಾರತದ ಕಣ್ಣು: ಚೀನಾ ಪರವಾದ ನಿಲುವುಗಳನ್ನು ಹೊಂದಿರುವ ಗೋಟಬಯ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾಗಿನಿಂದ ಭಾರತ ಲಂಕಾದಲ್ಲಿನ ಬೆಳವಣಿಗೆಯ ಮೇಲೆ ಕಣ್ಣಿಟ್ಟಿತ್ತು. ಬಂಗಾಳ ಕೊಲ್ಲಿಯ ಮೇಲೆ ಚೀನಾ ಪದೇ ಪದೇ ಗಮನಹರಿಸುತ್ತಲೇ ಇದೆ. ನೌಕಾಶಕ್ತಿಯನ್ನು ಇಲ್ಲಿ ಚೀನಾ ವಿಸ್ತರಿಸುತ್ತಲೇ ಇದೆ. ಹಂಬನ್‌ಟೋಟ ಬಂದರನ್ನು ಚೀನಾ 2017 ರಲ್ಲಿ ವಶಪಡಿಸಿಕೊಂಡಿತ್ತು. 

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅಣ್ಣ ಮಹಿಂದಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 

ಹತ್ಯೆಯಾದ ಮಾಜಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಪುತ್ರರಾಗಿರುವ ಸಜಿತ್ ಪ್ರೇಮದಾಸ ಅವರು 25 ವರ್ಷಗಳಿಗೂ ಹೆಚ್ಚು ಕಾಲ ರಾಜಕೀಯದ ಅನುಭವ ಹೊಂದಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇವರಿಗೆ ಅಲ್ಪಸಂಖ್ಯಾತ ತಮಿಳರೇ ಹೆಚ್ಚಿನ ಬೆಂಬಲಿಗರು. 

ಹಣಕಾಸು ಸಚಿವ ರಾಜೀನಾಮೆ: ಶ್ರೀಲಂಕಾದ ಹಣಕಾಸು ಸಚಿವ ಮಂಗಲ ಸಮರವೀರ ಅವರು ಭಾನುವಾರ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಅಭ್ಯರ್ಥಿಯನ್ನೇ ಜನರು ನಿರಾಕರಿಸಿರುವಾಗ ಅಧಿಕಾರದಲ್ಲಿ ಇರಲಾಗದು ಎಂದು ಹೇಳಿದ್ದಾರೆ. ಸಜಿತ್‌ ಅವರ ಚುನಾವಣಾ ಪ್ರಚಾರದಲ್ಲಿ ಸಮರವೀರ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದರು. 

ಗೋಟಬಯ ಆಯ್ಕೆ ದುರದೃಷ್ಟಕರ (ಚೆನ್ನೈ ವರದಿ): ಗೋಟಬಯ ರಾಜಪಕ್ಸೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ದುರದೃಷ್ಟಕರ ಎಂದು ತಮಿಳುನಾಡಿನ ಪಕ್ಷಗಳು ಹೇಳಿವೆ. ಹೊಸ ನಾಯಕತ್ವವು ದ್ವೀಪರಾಷ್ಟ್ರದಲ್ಲಿನ ಅಲ್ಪಸಂಖ್ಯಾತ ತಮಿಳರಿಗೆ ಯಾವುದೇ ಕೊಡುಗೆ ನೀಡುವುದಿಲ್ಲ ಎಂದು ತಿಳಿಸಿವೆ. 

‘ಶ್ರೀಲಂಕಾದಲ್ಲಿರುವ ತಮಿಳರ ರಕ್ಷಣೆ ಮತ್ತು ಸುರಕ್ಷೆಗಾಗಿ ತಮಿಳುನಾಡು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ‌’ ಎಂದು ಎಐಎಡಿಎಂಕೆ ನಾಯಕ ಹಾಗೂ ಮೀನುಗಾರಿಕಾ ಸಚಿವ ಡಿ.ಜಯಕುಮಾರ್‌ ಹೇಳಿದ್ದಾರೆ. 

ಸೋಲು ಒಪ್ಪಿಕೊಂಡ ಪ್ರೇಮದಾಸ: ಅಧ್ಯಕ್ಷೀಯ ಚುನಾವಣೆಯ ಸೋಲನ್ನು ಒಪ್ಪಿಕೊಂಡಿರುವುದಾಗಿ ಸಜಿತ್ ಪ್ರೇಮದಾಸ ಅವರು ಹೇಳಿದ್ದಾರೆ. 

‘ದೇಶದ ಜನರ ತೀರ್ಮಾನವನ್ನು ನಾನು ಗೌರವಿಸುತ್ತೇನೆ. ಇದೇ ವೇಳೆ ಗೆಲುವು ಸಾಧಿಸಿದ ಗೋಟಭಯ ಅವರನ್ನು ಅಭಿನಂದಿಸುತ್ತೇನೆ‌‌’ ಎಂದು ಹೇಳಿದ್ದಾರೆ. 

ಸೋಲು ಅನುಭವಿಸುತ್ತಿದ್ದಂತೆ ಆಡಳಿತಾರೂಢ ಯುನೈಟೆಡ್‌ ನ್ಯಾಷನಲ್‌ ಪಾರ್ಟಿಯ ಉಪಾಧ್ಯಕ್ಷ ಸ್ಥಾನದಿಂದ ಪ್ರೇಮದಾಸ ಅವರು ಕೆಳಗಿಳಿದಿದ್ದಾರೆ.

30 ವರ್ಷದ ಯುದ್ಧ ಕೊನೆಗಾಣಿಸಿದ್ದ ‘ಹೀರೊ‌’: ಶ್ರೀಲಂಕಾದಲ್ಲಿ ಎಲ್‌ಟಿಟಿಇ ಜತೆಗೆ ನಡೆದ ಯುದ್ಧದ್ದೇ ದೊಡ್ಡ ಇತಿಹಾಸ. 30 ವರ್ಷದ ನಡೆದ ಈ ಯುದ್ಧವನ್ನು ಕೊನೆಗಾಣಿಸಿದ ಕೀರ್ತಿ ಗೋಟಬಯ ಅವರದ್ದು. ಇದರಿಂದಾಗಿಯೇ ಇವರು ದ್ವೀಪರಾಷ್ಟ್ರದಲ್ಲಿ ವಿವಾದಾತ್ಮಕ ಮತ್ತು ಹೆಚ್ಚು ಗೌರವಿಸಲಾಗುವ ವ್ಯಕ್ತಿ ಎಂದೂ ಪ್ರಸಿದ್ಧರು. ಈ ಎಲ್ಲಾ ಕಾರಣಗಳಿಂದ ಇವರನ್ನು ‘ಯುದ್ಧದ ಹೀರೊ’ ಎಂದು ಕರೆಯಲಾಗುತ್ತದೆ. 

ಗೋಟಬಯ ಅವರು ಅಸ್ಸಾಂನಲ್ಲಿ 1980 ರಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಅರಣ್ಯ ಯುದ್ಧದ ಬಗ್ಗೆ ತರಬೇತಿ ಪಡೆದುಕೊಂಡಿದ್ದರು. 1983ರಲ್ಲಿ ಮದ್ರಾಸ್‌ ವಿಶ್ವವಿದ್ಯಾಲಯದಿಂದ ರಕ್ಷಣಾ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ಹಿರಿಯ ಸಹೋದರ ಮಹಿಂದಾ ರಾಜಪಕ್ಸೆ ಅವರು 2005 ರಿಂದ 2014 ರವರೆಗೆ ಅಧ್ಯಕ್ಷರಾಗಿದ್ದ ವೇಳೆ ರಕ್ಷಣಾ ಕಾರ್ಯದರ್ಶಿಯಾಗಿದ್ದರು. 

ಪ್ರಧಾನಿ ಮೋದಿ ಶುಭಾಶಯ 

ನವದೆಹಲಿ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೋಟಬಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

‌‘ಉಭಯ ದೇಶಗಳು ಮತ್ತು ನಾಗರಿಕರ ನಡುವಿನ ಆಪ್ತ ಮತ್ತು ಭ್ರಾತೃತ್ವದ ಸಂಬಂಧಗಳನ್ನು ಗಾಢವಾಗಿಸಲು ಮತ್ತು ನಮ್ಮ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುರಕ್ಷತೆಗಾಗಿ ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ’ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಅಲ್ಲದೆ, ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕಾಗಿ ಶ್ರೀಲಂಕಾದ ಜನರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

 

 

ಪ್ರತಿಕ್ರಿಯಿಸಿ (+)