ಶುಕ್ರವಾರ, ನವೆಂಬರ್ 15, 2019
21 °C
ಜಾಗತಿಕವಾಗಿ ಮಹತ್ವ ಪಡೆದಿರುವ ಟ್ರಂಪ್‌–ಮೋದಿ ಭೇಟಿ

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ‘ಹೌಡಿ’

Published:
Updated:
Prajavani

ವಾಷಿಂಗ್ಟನ್‌/ಹ್ಯೂಸ್ಟನ್‌: ಹ್ಯೂಸ್ಟನ್‌ನಲ್ಲಿ ಇದೇ 22ರಂದು ಆಯೋಜಿಸಿರುವ ಮೆಗಾ ‘ಹೌಡಿ, ಮೋದಿ’ ರ‍್ಯಾಲಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಜತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಇದು ಉಭಯ ನಾಯಕರ ನಡುವಣ
ಸ್ನೇಹ ಬಾಂಧವ್ಯ ಬಿಂಬಿಸಲಿದೆ ಎಂದೇ ಹೇಳಲಾಗಿದೆ.‌

ಕಳೆದ ಮೂರು ತಿಂಗಳಲ್ಲಿ ಟ್ರಂಪ್‌ ಮತ್ತು ಮೋದಿ ಭೇಟಿಯಾಗುತ್ತಿರುವುದು ಮೂರನೇ ಬಾರಿಯಾಗಲಿದೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಭಾರತೀಯ ಅಮೆರಿಕನ್ನರು ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಳ್ಳುವುದಕ್ಕೂ ಈ ರ‍್ಯಾಲಿ ಮಹತ್ವದ ವೇದಿಕೆಯಾಗಲಿದೆ.

‘ಕನಸುಗಳ ವಿನಿಮಯ, ಉಜ್ವಲ ಭವಿಷ್ಯ‘ ಶೀರ್ಷಿಕೆ ಅಡಿಯಲ್ಲಿ ಟೆಕ್ಸಾಸ್‌ ಇಂಡಿಯಾ ಫೋರಂ (ಟಿಐಎಫ್‌) ಈ ಕಾರ್ಯಕ್ರಮ ಆಯೋಜಿಸಿದೆ. 50 ಸಾವಿರಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ವಾರಾಂತ್ಯದಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.  ‘ಕಳೆದ 15 ವರ್ಷಗಳಲ್ಲಿ ಪ್ರಧಾನಿ ಮತ್ತು ಅಧ್ಯಕ್ಷ ಹುದ್ದೆಗಳನ್ನು ಅಲಂಕರಿಸಿರುವ ವ್ಯಕ್ತಿಗಳು ಮಹತ್ವ ಪಡೆದಿರುವುದು ಗಮನಾರ್ಹವಾಗಿದೆ. ಆದರೂ, ಅಧಿಕಾರದಲ್ಲಿ ಯಾರೇ ಇದ್ದರೂ ಉಭಯ ದೇಶಗಳ ನಡುವಣ ಸಹಭಾಗಿತ್ವ ಮತ್ತು ಸಂಬಂಧಗಳು ವೃದ್ಧಿಯಾಗಿವೆ’ಎಂದು ಹಾರ್ವರ್ಡ್‌ ವಿಶ್ವವಿದ್ಯಾಲಯದ ದಕ್ಷಿಣಏಷ್ಯಾ ಸಂಸ್ಥೆಗಳ ಕಾನೂನು ಮತ್ತು ಭದ್ರತಾ ವಿಷಯಗಳ
‘ಫೆಲೊ’ ರೊನಾಕ್‌ ಡಿ ದೇಸಾಯಿ ವಿಶ್ಲೇಷಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿ ಸಿದ ಕೆಲವು ವಾರಗಳ ಬಳಿಕ ಮೋದಿ ಪಕ್ಕದಲ್ಲಿ ಟ್ರಂಪ್‌ ನಿಲ್ಲುತ್ತಿರುವುದು ಜಾಗತಿಕ ಭೂಪಟದಲ್ಲಿ ಭಾರತ
ಮಹತ್ವ ಪಡೆದಿರುವುದು ಮತ್ತು ಮೋದಿ ಅವರ ವೈಯಕ್ತಿಕ ವರ್ಚಸ್ಸಿಗೆ ಕನ್ನಡಿಯಾಗಿದೆ’ ಎಂದಿದ್ದಾರೆ.

ವಲಸಿಗರಲ್ಲಿ ಭಾರತೀಯರೇ ಹೆಚ್ಚು

2016ರಲ್ಲಿ ಅಮೆರಿಕದಲ್ಲಿದ್ದ ನಾಲ್ವರು ವಿದೇಶಿಯರ ಪೈಕಿ ಒಬ್ಬರು ಭಾರತೀಯ ವ್ಯಕ್ತಿಯಾಗಿದ್ದರು ಎಂದು ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯೂರಿಟಿ ಇಲಾಖೆಯ ವರದಿ ತಿಳಿಸಿದೆ.

ಚೀನಾದ ಶೇಕಡ 15ರಷ್ಟು ನಾಗರಿಕರು ಅಮೆರಿಕದಲ್ಲಿದ್ದರು. ಶೇಕಡ 60ರಷ್ಟು ವಲಸಿಗರು ಏಷ್ಯಾ ರಾಷ್ಟ್ರಗಳಿಗೆ ಸೇರಿದ್ದರು ಎಂದು ವರದಿ ಉಲ್ಲೇಖಿಸಿದೆ.

2016ರಲ್ಲಿ 23 ಲಕ್ಷ ವಲಸಿಗರಿದ್ದರು. ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು, ವಿದ್ಯಾರ್ಥಿಗಳು, ರಾಜತಾಂತ್ರಿಕರು ಸೇರಿದ್ದರು.

2016ರಲ್ಲಿ ಅಮೆರಿಕದಲ್ಲಿ 5.80 ಲಕ್ಷ ಭಾರತೀಯರು ಇದ್ದರು. ಇವರಲ್ಲಿ ಎಚ್‌–1ಬಿ ವೀಸಾ ಪಡೆದ 4.40 ಲಕ್ಷ ತಾತ್ಕಾಲಿಕ ಉದ್ಯೋಗಿಗಳು ಮತ್ತು 1.40 ಲಕ್ಷ ವಿದ್ಯಾರ್ಥಿಗಳಿದ್ದರು. ಎರಡನೇ ಸ್ಥಾನದಲ್ಲಿ ಚೀನಾದ 3.40 ಲಕ್ಷ ನಾಗರಿಕರು ಇದ್ದರು. ಇವರಲ್ಲಿ 2.60 ಲಕ್ಷ ವಿದ್ಯಾರ್ಥಿಗಳು ಎಂದು ವರದಿ ವಿವರಿಸಿದೆ.

ಉಳಿದವರು ಮೆಕ್ಸಿಕೊ, ಕೆನಡಾ, ದಕ್ಷಿಣ ಕೊರಿಯಾ, ಜಪಾನ್‌ ಮತ್ತು ಸೌದಿ ಅರೇಬಿಯಾಗೆ ಸೇರಿದ್ದಾರೆ. ಮೆಕ್ಸಿಕೊದವರಲ್ಲಿ ಶೇಕಡ 85ರಷ್ಟು ಮಂದಿ ಉದ್ಯೋಗಿಗಳಾಗಿದ್ದು, ಶೇಕಡ 10ರಷ್ಟು ಮಾತ್ರ ವಿದ್ಯಾರ್ಥಿಗಳಾಗಿದ್ದರು.

‘ಮೋದಿ ವಿಮಾನಕ್ಕೆ ಅನುಮತಿ ಇಲ್ಲ’

(ಇಸ್ಲಾಮಾಬಾದ್/ನವದೆಹಲಿ -ರಾಯಿಟರ್ಸ್‌): ಪ್ರಧಾನಿ ಮೋದಿ ಅವರ ವಿಮಾನ ತನ್ನ ವಾಯುಪ್ರದೇಶ ಹಾದುಹೋಗಲು ಪಾಕಿಸ್ತಾನ ಅನುಮತಿ ನಿರಾಕರಿಸಿದೆ. ಇದೇ ಶುಕ್ರವಾರ ಮೋದಿ ಜರ್ಮನಿಗೆ ಹೋಗಲಿ
ದ್ದಾರೆ. ಅವರ ವಿಮಾನ ಪಾಕಿಸ್ತಾನದ ವಾಯುಪ್ರದೇಶ ಹಾದುಹೋಗಬೇಕಿತ್ತು. ವಾಪಸ್ ಬರುವಾಗಲೂ ಇದೇ ವಾಯುಮಾರ್ಗ ಬಳಸಬೇಕಿತ್ತು. ಇದೇ ತಿಂಗಳ ಆರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ವಿಮಾನ ತನ್ನ ವಾಯುಪ್ರದೇಶ ಹಾದುಹೋಗಲು ಪಾಕ್ ನಿರಾಕರಿಸಿತ್ತು.
***
ಡಿಜಿಟಲ್‌ ಇಂಡಿಯಾಗೆ ಪ್ರಧಾನಿ ಮೋದಿ ಆದ್ಯತೆ ನೀಡಿರುವುದು ಶ್ಲಾಘನೀಯ. ಭಾರತದ ಪ್ರಗತಿಗೆ ಇದು ಅಗತ್ಯವಾಗಿದೆ.

–ಮಾರ್ಕ್‌ ಝುಕರ್‌ಬರ್ಗ್‌, ಫೇಸ್‌ಬುಕ್‌ ಸಿಇಒ

***
ಭಾರತದಲ್ಲಿ ಶ್ರೇಷ್ಠ ಉದ್ಯಮಿಗಳಿದ್ದಾರೆ. ಪ್ರಧಾನಿ ಅವರಿಗೆ ದೂರದೃಷ್ಟಿ ಇದೆ. ಅಭಿವೃದ್ಧಿ ಸಾಧಿಸಲು ತಂತ್ರಜ್ಞಾನ ಬಲಿಷ್ಠ ಸಾಧನ ಎನ್ನುವುದು ಅವರಿಗೆ ಗೊತ್ತಿದೆ.

–ಸತ್ಯಾ ನಾದೆಲ್ಲ, ಮೈಕ್ರೊಸಾಫ್ಟ್‌ ಸಿಇಒ

***

ಎರಡು ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರಗಳ ಬಲಿಷ್ಠ ಸಂಬಂಧವನ್ನು ಈ ಕಾರ್ಯಕ್ರಮ ಬಿಂಬಿಸಲಿದೆ.
– ಹರ್ಷವರ್ಧನ್‌, ಅಮೆರಿಕದಲ್ಲಿನ ಭಾರತೀಯ ರಾಯಭಾರಿ

 

ಪ್ರತಿಕ್ರಿಯಿಸಿ (+)