ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗ್ದಾದಿ ಬಗ್ಗೆ ಆಪ್ತನಿಂದ ಸಿಕ್ಕಿತ್ತು ಮಾಹಿತಿ: ಅಮೆರಿಕದಿಂದ ಯೋಜನಾಬದ್ಧ ದಾಳಿ!

Last Updated 29 ಅಕ್ಟೋಬರ್ 2019, 2:49 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ವಿಶೇಷ ಪಡೆಗಳು ಶನಿವಾರ ರಾತ್ರಿ ಉತ್ತರ ಸಿರಿಯಾದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಐಎಸ್‌ ಉಗ್ರ ಸಂಘಟನೆ ಸ್ಥಾಪಕ ಅಬು ಬಕರ್‌ ಅಲ್‌ ಬಾಗ್ದಾದಿ ತನ್ನನ್ನು ತಾನು ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದಾನೆ. ಆದರೆ, ಆತನನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಅಮೆರಿಕ ಸೇನೆ ಹಲವು ದಿನಗಳ ಹಿಂದಿನಿಂದಲೇ ಸಿದ್ಧತೆಗಳನ್ನು ನಡೆಸಿತ್ತು ಎನ್ನಲಾಗಿದೆ.

ಗುಪ್ತಚರ ಮಾಹಿತಿಯ ಮೇರೆಗೆ ಅಮೆರಿಕವು ಸಿರಿಯಾದ ಇಬ್ಲಿಬ್‌ ಪ್ರಾಂತ್ಯದಲ್ಲಿರುವ ಬಾಗ್ದಾದಿಯ ಅಡಗುದಾಣವನ್ನು ಎರಡು ವಾರಗಳ ಹಿಂದೆಯೇ ಪತ್ತೆ ಮಾಡಿತ್ತು. ಆತನ ವಿರುದ್ಧ ಕಾರ್ಯಾಚರಣೆಗೆ ಹಲವು ವರ್ಷಗಳಿಂದಲೇ ತಯಾರಿ ನಡೆಸುತ್ತಿದ್ದ ಅಮೆರಿಕ ಶನಿವಾರ ಸಿರಿಯಾದ ನಿಗದಿತ ಪ್ರದೇಶಕ್ಕೆ ಸೇನೆಯ ವಿಶೇಷ ಪಡೆಗಳನ್ನು 8 ಹೆಲಿಕಾಪ್ಟರ್‌ಗಳ ಮೂಲಕ ರವಾನಿಸಿತ್ತು. ಬಾಗ್ದಾದಿ ಇರುವ ಜಾಗದ ಕಾಂಪೌಂಡ್‌ ಬಳಿ ಇಳಿದ ಸೇನಾ ಪಡೆಗಳು ಕ್ಷಣ ಮಾತ್ರದಲ್ಲಿ ಅದನ್ನು ಸ್ಫೋಟಿಸಿ ಆತನಿರುವಲ್ಲಿಗೆ ಪ್ರವೇಶ ಪಡೆದಿವೆ. ಅಮೆರಿಕ ಸೇನಾ ಪಡೆಗಳನ್ನು ನೋಡುತ್ತಲೇ ಬಾಗ್ದಾದಿ ಭಯ ಭೀತಗೊಂಡು ಓಡಲಾರಂಭಿಸಿದ್ದಾನೆ. ನಂತರ ಸುರಂಗವೊಂದನ್ನು ಪ್ರವೇಶಿಸಿ ಅಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಆತನ ದೇಹ ಛಿದ್ರಗೊಂಡಿತ್ತು ಎಂದು ಅಮೆರಿಕ ಸೇನೆ ನೀಡಿದ ಮಾಹಿತಿ ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯ್ಟರ್ಸ್‌ ವರದಿ ಮಾಡಿದೆ.

ಆಪ್ತನೇ ನೀಡಿದ್ದ ಮಾಹಿತಿ

ಜಗತ್ತಿನಾದ್ಯಂತ ಭಯ ಬಿತ್ತಿದ್ದ, ಇರಾಕ್‌ನ ಹಲವು ಪ್ರದೇಶಗಳ ಮೇಲೆ ನೇರ ಹಿಡಿತ ಹೊಂದಿದ್ದ, ಇಸ್ಲಾಂ ಹೆಸರಲ್ಲಿ ಸ್ವಂತ ಸಾಮ್ರಾಜ್ಯ ಕಟ್ಟಿದ ಬಾಗ್ದಾದಿ ಇತ್ತೀಚಿನ ಎರಡು ವರ್ಷಗಳಲ್ಲಿ ಅಮೆರಿಕ, ರಷ್ಯಾದಂಥ ದೇಶಗಳ ನಿರಂತರ ದಾಳಿಗೆ ಸಿಕ್ಕು ಹೈರಾಣಾಗಿದ್ದ. ನಂತರ ಸಿರಿಯಾಕ್ಕೆ ಪಲಾಯನ ಮಾಡಿದ್ದ ಬಾಗ್ದಾದಿ ಅಮೆರಿಕ ಕೈಗೆ ಸಿಕ್ಕಿಬೀಳುವ ಆಂತಕ ಎದುರಿಸುತ್ತಿದ್ದ. ತನ್ನ ಚಲನವಲನದಲ್ಲಿ ಗೌಪ್ಯತೆ ಕಾಯ್ದುಕೊಂಡಿದ್ದ. ತನ್ನ ಯೋಜನೆ, ಕಾರ್ಯತಂತ್ರಗಳನ್ನು ನಿರಂತರವಾಗಿ ಬದಲಿಸುತ್ತಿದ್ದ ಎಂದು ಆತನ ಆಪ್ತ ಇಸ್ಮಾಯಿಲ್‌ ಅಲ್‌ ಎತ್ವಾಯಿ ಇರಾಕ್‌ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದಾನೆ.

‘ಕೆಲವೊಂದು ಬಾರಿ ಬಾಗ್ದಾದಿ ತರಕಾರಿ ವಾಹನದಲ್ಲೂ ಓಡಾಡುತ್ತಿದ್ದ. ಅಲ್ಲಿಯೇ ತಂತ್ರಗಾರಿಕೆ ರೂಪಿಸುತ್ತಿದ್ದ,’ ಎಂದೂ ಇಸ್ಮಾಯಿಲ್‌ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT