ಸೋಮವಾರ, ನವೆಂಬರ್ 18, 2019
23 °C

ಇರಾನ್‌: ಅಮೆರಿಕ ವಿರೋಧಿ ರ‍್ಯಾಲಿ

Published:
Updated:
Prajavani

ಟೆಹರಾನ್‌: ಇಲ್ಲಿನ ಅಮೆರಿಕ ರಾಯಭಾರ ಕಚೇರಿ ಎದುರು ಸೋಮವಾರ ಜಮಾಯಿಸಿದ ಸಾವಿರಾರು ನಾಗರಿಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಘೋಷಣೆ ಕೂಗಿದರು. 

ಇರಾನ್‌ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿದ 40ನೇ ವರ್ಷದ ಆಚರಣೆ ಅಂಗವಾಗಿ ನಡೆದ ಈ ಪ್ರತಿಭಟನಾ ರ‍್ಯಾಲಿ ದೇಶದ ವಿವಿಧೆಡೆಯೂ ನಡೆಯಿತು.

ಅಮೆರಿಕ ರಾಯಭಾರ ಕಚೇರಿ ಇದೀಗ ಇಲ್ಲಿ  ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ವಸ್ತುಸಂಗ್ರಹಾಲಯವಾಗಿ ಬದಲಾಯಿಸಲಾಗಿದೆ. 

ಅಮೆರಿಕ– ಇರಾನ್‌ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಹದಗೆಟ್ಟಿದೆ. ಇದೇ ಜೂನ್‌ನಲ್ಲಿ ಇರಾನ್‌, ಅಮೆರಿಕದ ಡ್ರೋನ್‌ ಅನ್ನು ಹೊಡೆದುರುಳಿಸಿದ್ದ ಭಿತ್ತಿಚಿತ್ರಗಳನ್ನು ರ‍್ಯಾಲಿಯಲ್ಲಿ ನಾಗರಿಕರು ಪ್ರದರ್ಶಿದ್ದಾರೆ. ಅಲ್ಲದೆ, ನಾಗರಿಕರು ‘ಅಮೆರಿಕ ನಾಶವಾಗಲಿ’ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ ಎಂದು ಎಎಫ್‌ಪಿ ಪತ್ರಕರ್ತರು ತಿಳಿಸಿದ್ದಾರೆ. 

ಮಶಾದ್, ಶಿರಾಜ್ ಮತ್ತು ಎಸ್ಫಾಹಾನ್ ನಗರಗಳಲ್ಲೂ ರ‍್ಯಾಲಿ ನಡೆದವು. ಸ್ಥಳೀಯ ಟಿ.ವಿ ವಾಹಿನಿಯೊಂದು ಟ್ರಂಪ್ ಅವರ ಇರಾನ್‌ ವಿರೋಧಿ ಭಾಷಣಗಳನ್ನು ಪ್ರಸಾರ ಮಾಡಿದೆ.  

ಯುರೇನಿಯಂ ಪುಷ್ಟೀಕರಣ
2015ರ ಅಣು ಒಪ್ಪಂದದ ನಿಯಮಾವಳಿ ಮೀರಿ ಯುರೇನಿಯಂ ಪುಷ್ಟೀಕರಣ ಪ್ರಮಾಣವನ್ನು ಇರಾನ್‌ ಹೆಚ್ಚಿಸಿದೆ ಎಂದು ಇರಾನ್‌ ಅಧಿಕಾರಿಗಳು ದೃಢಪಡಿಸಿದ್ದಾರೆ. 

ಅಮೆರಿಕ ರಾಯಭಾರ ಕಚೇರಿ ಮುಚ್ಚಿದ 40ನೇ ವರ್ಷಾಚರಣೆ ದಿನವಾದ ಸೋಮವಾರ ಯುರೇನಿಯಂ ಪುಷ್ಟೀಕರಣದ ಇರಾನ್‌ ಕುರಿತು ಪ್ರಕಟಣೆ ಹೊರಡಿದೆ. ಇದಕ್ಕೆ ಐರೋಪ್ಯ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.

ಅಂಕಿ– ಆಂಶ
1979: 
ಇರಾನ್‌ ವಿದ್ಯಾರ್ಥಿಗಳು ಅಮೆರಿಕ ರಾಯಭಾರ ಕಚೇರಿ ವಶಪಡಿಸಿಕೊಂಡ ವರ್ಷ
1980: ಇರಾನ್‌ ಜೊತೆ ಅಮೆರಿಕ ತನ್ನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ವರ್ಷ
2015: ಇರಾನ್‌– ಅಮೆರಿಕ ಮಧ್ಯೆ ಅಣು ಒಪ್ಪಂದ
2018: ಅಣು ಒಪ್ಪಂದವನ್ನು ಟ್ರಂಪ್‌ ರದ್ದುಗೊಳಿಸಿದ ವರ್ಷ

ಪ್ರತಿಕ್ರಿಯಿಸಿ (+)