ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಮ್ಮೆ ದಾಳಿ ಮಾಡಿದರೆ ಹೊಸಕಿಹಾಕುತ್ತೇವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಅಮೆರಿಕ ಸೇನಾ ನೆಲೆಗಳ ಮೇಲಿನ ದಾಳಿ ಸಮರ್ಥಿಸಿಕೊಂಡ ಇರಾನ್
Last Updated 8 ಜನವರಿ 2020, 5:21 IST
ಅಕ್ಷರ ಗಾತ್ರ

ಟೆಹರಾನ್: ಸೇನಾಧಿಕಾರಿ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲೆಂದು ಇರಾಕ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ್ದ ಇರಾನ್‌, ಇದೀಗಮಾಧ್ಯಮಗಳ ಮೂಲಕ ತನ್ನ ವಾದವನ್ನು ಮುಂದಿಡುವ ಮತ್ತು ತಾನು ಮಾಡಿದ್ದನ್ನುಸರಿಯೆಂದು ಬಿಂಬಿಸುವ‘ಕಥನ ಯುದ್ಧ’ ಆರಂಭಿಸಿದೆ.

ದಾಳಿಯ ನಂತರ ಹೇಳಿಕೆ ಬಿಡುಗಡೆ ಮಾಡಿದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ ಕೋರ್ (ಐಆರ್‌ಜಿಸಿ), ‘ಜಗತ್ತಿನ ದೊಡ್ಡ ಸೈತಾನ, ಯುದ್ಧಪಿಪಾಸು ಮತ್ತು ಉದ್ಧಟ ಅಮೆರಿಕ ಸರ್ಕಾರಕ್ಕೆ ಇದು ನಮ್ಮ ಎಚ್ಚರಿಕೆ. ಇರಾನ್ ವಿರುದ್ಧ ನೀವು ಇನ್ನೊಂದು ಹೆಜ್ಜೆ ಮುಂದಿಟ್ಟರೂ, ನಾವು ಮತ್ತಷ್ಟು ಹಿಂಸಾತ್ಮಕವಾಗಿನಿಮ್ಮನ್ನು ಹೊಸಕಿಹಾಕುವಂಥ ಪ್ರತಿಕ್ರಿಯೆಗೆ ಮುಂದಾಗಬೇಕಾಗುತ್ತದೆ’ ಎಂದು ಕಟುವಾಗಿ ಎಚ್ಚರಿಸಿದೆ.

ಕ್ಷಿಪಣಿ ದಾಳಿಯನ್ನು‘ಆಪರೇಷನ್ ಮಾರ್ಟೈರ್ ಸುಲೇಮಾನಿ (ಹುತಾತ್ಮ ಸುಲೇಮಾನಿ ಕಾರ್ಯಾಚರಣೆ) ಎಂದು ಬಣ್ಣಿಸಿರುವ ಐಆರ್‌ಜಿಸಿ, ನಮ್ಮ ನಾಯಕನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದು ನಮ್ಮ ಹಕ್ಕು. ಅದರಂತೆ ಈ ದಾಳಿ ಮಾಡಿದ್ದೇವೆ’ ಎಂದು ಹೇಳಿಕೊಂಡಿದೆ.

‘ಅಮೆರಿಕ ಸೇನೆಗೆ ಸಹಾಯ ಮಾಡುವ ಯಾವುದೇ ದೇಶ ಇರಾನ್ ದಾಳಿ ಎದುರಿಸಬೇಕಾಗುತ್ತದೆ’ ಎಂದು ಪರೋಕ್ಷವಾಗಿ ಇಸ್ರೇಲ್‌ ಮತ್ತು ಸೌದಿ ಅರೇಬಿಯಾಗಳಿಗೆಎಚ್ಚರಿಕೆ ನೀಡಿದೆ.

ಸುಲೇಮಾನಿ ಹತ್ಯೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಮ್ಮ ರಾಷ್ಟ್ರಧ್ವಜವನ್ನು ಟ್ವೀಟ್ ಮಾಡಿದ್ದರು. ಇದಕ್ಕೆ ಟಾಂಗ್ ಕೊಟ್ಟಿರುವ ಇರಾನ್ ಅಧಿಕಾರಿಯೊಬ್ಬರು ತಮ್ಮದೇಶದ ಧ್ವಜವನ್ನು ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ.

ಸಂಘರ್ಷದ ವಾತಾವರಣದಲ್ಲಿಯೂ ಸಮಚಿತ್ತ ಕಾಯ್ದುಕೊಂಡಿರುವಂತೆ ಪ್ರತಿಕ್ರಿಯಿಸಿದ್ದಾರೆ ಇರಾನ್ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜಾವದ್ ಜರೀಫ್. ‘ವಿಶ್ವಸಂಸ್ಥೆಯ 51ನೇ ಚಾರ್ಟರ್ ಅನ್ವಯ ಇರಾನ್ ಆತ್ಮರಕ್ಷಣೆಯ ಹಕ್ಕು ಚಲಾಯಿಸಿದೆ. ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳುವುದು ನಮಗೆ ಇಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.

ದಾಳಿಯ ನಂತರ ಇರಾನ್ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿರುವ ವಕ್ತಾರ ಅಲಿ ರಬಿ, ‘ಇರಾನ್ ಯುದ್ಧವನ್ನು ಬಯಸಿಲ್ಲ. ಆದರೆ ನಮ್ಮ ತಂಟೆಗೆ ಬಂದವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಕ್ಷಿಪಣಿ ದಾಳಿ ಯಶಸ್ವಿಯಾಗಿದೆ. ಇದಕ್ಕಾಗಿ ಐಆರ್‌ಜಿಸಿ ಪಡೆಗೆ ಧನ್ಯವಾದ ಅರ್ಪಿಸುತ್ತೇವೆ. ನಮ್ಮ ಮೇಲೆ ಕೈ ಮಾಡಿದರೆ, ಹೊಸಕಿಹಾಕುವಂಥ ಪ್ರತಿಕ್ರಿಯೆ ಅನಿವಾರ್ಯವಾಗುತ್ತದೆ’ ಎಂದು ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT