ಬುಧವಾರ, ನವೆಂಬರ್ 13, 2019
24 °C
ಪ್ರತೀಕಾರ ಸಾಧಿಸಲು ದಾಳಿ ನಡೆಸುವ ಸಾಧ್ಯತೆ: ಅಮೆರಿಕ

ಐಎಸ್‌ ಸಂಘಟನೆ ನಿರ್ನಾಮವಾಗಿಲ್ಲ: ಅದರ ಮೇಲಿನ ದಾಳಿ ನಿಲ್ಲುವುದಿಲ್ಲ ಎಂದ ಅಮೆರಿಕ

Published:
Updated:
Prajavani

ವಾಷಿಂಗ್ಟನ್‌: ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಇನ್ನೂ ಅಪಾಯಕಾರಿ ಉಗ್ರಗಾಮಿ ಸಂಘಟನೆಯಾಗಿಯೇ ಉಳಿದಿದ್ದು, ಪ್ರತೀಕಾರ ಸಾಧಿಸಲು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಹೇಳಿದೆ.

‘ಐಎಸ್‌ ಸ್ಥಾಪಕ ಅಬುಬಕರ್‌ ಅಲ್‌–ಬಗ್ದಾದಿಯನ್ನು ಹತ್ಯೆ ಮಾಡಿದ್ದರಿಂದ ಅದು ಸಂಪೂರ್ಣ ನಾಶವಾಗಿದೆ ಎನ್ನುವ ಭ್ರಮೆಯಲ್ಲಿ ನಾವು ಇಲ್ಲ. ನಾಯಕತ್ವದ ಹಂತಕ್ಕೆ ಧಕ್ಕೆಯಾಗಿರಬಹುದು. ಆದರೂ, ಈ ಸಂಘಟನೆ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆ. ಕೆಲ ಸಮಯದ ಬಳಿಕ ಮತ್ತೆ ಕ್ರಿಯಾಶೀಲವಾಗಬಹುದು’ ಎಂದು ಅಮೆರಿಕದ ಕೇಂದ್ರೀಯ ಕಮಾಂಡ್‌ನ ಜನರಲ್‌ ಕೆನ್ನೆಥ್‌ ಮ್ಯಾಕೆಂಝಿ ಹೇಳಿದ್ದಾರೆ.

‘ಐಎಸ್‌ ಸದಾ ಅಪಾಯಕಾರಿ. ದ್ವೇಷ ಸಾಧಿಸಲು ಈ ಸಂಘಟನೆ ನಡೆಸುವ ದಾಳಿ ಎದುರಿಸಲು ನಾವು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

‘ತನ್ನದೇ ಆದ ಒಂದು ಸಿದ್ಧಾಂತದ ಮೇಲೆ ಐಎಸ್‌ ಸಂಘಟನೆ ಬೆಳೆದಿದೆ. ಹೀಗಾಗಿ, ಈ ಸಂಘಟನೆಯನ್ನು ನಿರ್ಮೂಲನೆ ಮಾಡುವುದು ಕಷ್ಟಸಾಧ್ಯ. ಆದರೆ, ಈ ಸಿದ್ಧಾಂತ ಪ್ರಭಾವ ಬೀರುವುದನ್ನು ಕ್ರಮೇಣವಾಗಿ ಕಡಿಮೆ ಮಾಡಬಹುದು’ ಎಂದು ಹೇಳಿದ್ದಾರೆ.

ಸಿರಿಯಾದ ಡೀರ್‌ ಎಝ್‌–ಝೋರ್‌ ನಗರದಲ್ಲಿ ಅಮೆರಿಕ ಪಡೆಗಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಯಾವುದೇ ತೈಲ ನಿಕ್ಷೇಪಗಳನ್ನು ಐಎಸ್‌ ತನ್ನ ಬಳಿ ಉಳಿಸಿಕೊಂಡಿಲ್ಲ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕಾಗಿದೆ. ತೈಲ ನಿಕ್ಷೇಪಗಳಿಂದಲೂ ಐಎಸ್‌ ಆದಾಯ ಪಡೆಯುತ್ತಿತ್ತು. ಹೀಗಾಗಿ, ಈ ಕ್ರಮಕೈಗೊಳ್ಳಲಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಐಎಸ್‌ ಒಪ್ಪಿಗೆ: ಬಗ್ದಾದಿ ಸಾವಿಗೀಡಾಗಿದ್ದಾನೆ ಎನ್ನುವುದನ್ನು ಐಎಸ್‌ ಗುರುವಾರ ಒಪ್ಪಿಕೊಂಡಿದೆ.

ಪ್ರತಿಕ್ರಿಯಿಸಿ (+)