ಗುರುವಾರ , ಸೆಪ್ಟೆಂಬರ್ 23, 2021
22 °C

ರಾಜ್ಯೋತ್ಸವ| ಕೊಲ್ಲಿಯ ಕುವೈತ್‌ನಲ್ಲಿ ಕರುನಾಡ ನುಡಿ ಹಬ್ಬ

ಡಾ. ಆಜಾದ್ ಐ.ಎಸ್‌. Updated:

ಅಕ್ಷರ ಗಾತ್ರ : | |

ಸಾಗರದಾಚೆಯ ಕೊಲ್ಲಿಯ ಕುವೈತ್‌ನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಆಚರಣೆಯ ಚಿತ್ರಣವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಕುವೈತ್‌ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಮತ್ಸ್ಯವಿಜ್ಞಾನಿ, ಕನ್ನಡಿಗ ಡಾ. ಆಜಾದ್ ಐ.ಎಸ್‌.

ಉದರನಿಮಿತ್ತ ಏನೆಲ್ಲ ವೇಷ! ಎಲ್ಲ ಪ್ರಾಣಿಗಳಂತೆ ಮಾನವನದೂ ಅದೇ ಚಿಂತೆ, ಆಹಾರಾನ್ವೇಷಣೆಯ ಜೊತೆಗೆ ಜೀವನದಲ್ಲಿ ಏನಾದರೂ ಒಳಿತು ಮಾಡಬೇಕೆಂಬ ಹಂಬಲ. ನೆಲೆಯೂರಲು ಸೂಕ್ತ ಕೆಲಸದ ಜೊತೆಗೆ ತಮ್ಮ ಆಶೋತ್ತರಗಳ ಪೂರೈಕೆಗೆ ತಕ್ಕ ಸಂಪಾದನೆ ಅವಶ್ಯಕ.

ನಾಡಿನಲ್ಲಿ ತಮಗೆ ತೃಪ್ತಿ ಕೊಡುವ ಕೆಲಸ ಸಿಗದೇ ಕೆಲಸದ ಬೇಟೆ ಮತ್ತಷ್ಟು ತೀವ್ರಗೊಂಡು ಕರ್ನಾಟಕದಿಂದ ಕನ್ನಡಿಗರ ದಂಡು ಕುವೈತ್‌ಗೆ ಆಗಮಿಸಿತು. ತಮ್ಮವರಿಂದ ದೂರವಿರುವ ಏಕಾಂತ ಬದುಕಿನಿಂದ ಬೇಸತ್ತು, ಮಡದಿ ಮಕ್ಕಳನ್ನು ವಿದೇಶಕ್ಕೆ ಕರೆಯುವ ಕಾಯಕದಲ್ಲೂ ಯಶಸ್ವಿಯಾದರು.

ಪ್ರತಿಕೂಲ ಪರಿಸ್ಥಿತಿಗೆ ಹೊಂದಿಕೊಂಡು ಬದುಕೆಂಬ ಬಂಡಿಯ ಸಾಗುತ್ತಿರಲು ಶ್ರೀಗಂಧದ ಗುಡಿಯ ಸವಿಗನ್ನಡ ನುಡಿ, ಕರುನಾಡಿನ ಶ್ರೀಮಂತ ಕಲೆ-ಸಾಹಿತ್ಯ-ಸಂಸ್ಕೃತಿ, ನಂಬಿದ ಭಕ್ತರನ್ನು ಬೆಂಬಿಡದೆ ಪೊರೆಯುವ ದೇವರ ಸನ್ನಿಧಿ, ವಚನಕಾರರ, ಸಂತರ, ಶರಣರ, ದಾರ್ಶನಿಕರ ನುಡಿಮುತ್ತುಗಳು, ಮೈಸೂರಿನ ಸಾಂಸ್ಕೃತಿಕ ವೈಭವ, ಹಂಪಿ, ಬೇಲೂರು-ಹಳೆಬೀಡು ಭವ್ಯ ಪರಂಪರೆ, ಮಲೆನಾಡಿನ‌ ಸೊಬಗು, ಕರಾವಳಿಯ ಸಮುದ್ರ ತೀರಗಳು, ಧುಮ್ಮಿಕ್ಕುವ ಜಲಪಾತ, ಸದಾ ಹಸಿರಿನ ಉಡುಗೆ ತೊಟ್ಟು ಕಂಗೊಳಿಸುವ ಪ್ರಕೃತಿ ಮಾತೆ, ಜೀವ ಸೆಲೆಯಾಗಿ ಹರಿಯುವ ಕೃಷ್ಣೆ, ತುಂಗೆ, ಕಾವೇರಿ, ಮನಕೆ ತಂಪೆರಚುವ ಮಳೆಹನಿಗಳ ಸ್ಪರ್ಶ, ಸುಮಗಳ ಚುಂಬಿಸುವ ತಂಗಾಳಿ... ಹೀಗೆ ಸಮೃದ್ಧ ಕನ್ನಡ ನಾಡಿನ ಸೊಬಗನ್ನು ಮನ ನೆನಪಿಸಿಕೊಳ್ಳತೊಡಗಿತು. ತಾವೇನೋ ಕಳೆದುಕೊಳ್ಳುತ್ತಿರುವೆವು ಎಂಬ ಕೊರಗು ಕನ್ನಡಿಗರನ್ನು ಕಾಡತೊಡಗಿತು. ತಮ್ಮ ಗೂಡು ಬಿಟ್ಟು ಸಾಗರ ಲಂಘಿಸಿ ದೂರದ ಮರುಳುಗಾಡಿಗೆ ಆಗಮಿಸಿದ ಕನ್ನಡಿಗರ ಮನಸ್ಸಿನ ಸುಪ್ತ ಭಾವನೆಗಳು ಗರಿಗೆದರಿ ನರ್ತಿಸತೊಡಗಿದವು. ತಾವು ಕಳೆದುಕೊಳ್ಳುತ್ತಿರುವ ಸಿರಿಸಂಪತ್ತನ್ನು ಪಡೆಯುವ ಪರ್ಯಾಯ ಮಾರ್ಗದ ಬಗ್ಗೆ ಚಿಂತಿಸತೊಡಗಿದರು.

ಇದೇ ಭಾವ ಬಹುಶಃ ಇಲ್ಲಿ ಬಂದು ನೆಲೆಯೂರಿದ ಪ್ರತಿಯೊಬ್ಬರಲ್ಲೂ ಮೂಡಿರಬೇಕು. ಇದೇ ಉತ್ಕಟ ಬಯಕೆ 35 ವರ್ಷಕ್ಕೂ ಮುನ್ನ ಸಮಾನಸ್ಕರ ಕುಟುಂಬಗಳ ಒಗ್ಗೂಡುವಿಕೆಯಿಂದ ಪ್ರಾರಂಭವಾಗಿ ‘ಕುವೈತ್‌ ಕನ್ನಡ ಕೂಟ’ ಅಸ್ತಿತ್ವಕ್ಕೆ ಬಂತು. ಎಲ್ಲರೂ ಒಂದೆಡೆ ಸೇರಿ ಆನಂದದಿಂದ ಕೆಲ ಸಮಯ ಕಳೆಯಲು ಕನ್ನಡ ರಾಜ್ಯೋತ್ಸವಕ್ಕಿಂತ ಉತ್ತಮ ಸಂದರ್ಭ ಬೇಕಿರಲಿಲ್ಲ. ಹೀಗೆ ಕುವೈತ್‌ ಕನ್ನಡ ಕೂಟ ತನ್ನ ಕುಟುಂಬಗಳ ಹಂತದಿಂದ ಮುಂದುವರೆದು ಸಾರ್ವಜನಿಕ ಕಾರ್ಯಕ್ರಮಕ್ಕೆ ಮುಂದಾಯಿತು. ಈಗ ಕರ್ನಾಟಕ ರಾಜ್ಯೋತ್ಸವ ಒಂದು ವಾರ್ಷಿಕ ಹಬ್ಬವಾಗಿ ಪರಿವರ್ತಿತಗೊಂಡಿದೆ. ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವನ್ನು ಆಚರಿಸಿದ ಕನ್ನಡ ಕೂಟ ತನ್ನ ಅಸ್ತಿತ್ವದ ರಜತ ಮಹೋತ್ಸವವನ್ನೂ ಬಹಳ ವಿಜೃಂಭಣೆಯಿಂದ ಆಚರಿಸಿದೆ.

ಸುಮಾರು 200 ಕುಟುಂಬಗಳಿಗೂ ಹೆಚ್ಚಿನ ಸದಸ್ಯಬಲದ ಕನ್ನಡ ಕೂಟ ಪ್ರತಿ ವರ್ಷ ತಾನೇ ಸಾರ್ವಾನುಮತದಿಂದ ಆರಿಸುವ ಕಾರ್ಯಕಾರಿ ಸಮಿತಿಯ ನಿರ್ದೇಶನದ ಮೇಲೆ ಕೆಲವು ಸಂಚಾಲಕ ಸಮಿತಿಗಳ ನೆರವಿನಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಅವುಗಳಲ್ಲಿ ಪ್ರಧಾನ ಕಾರ್ಯಕ್ರಮವೇ ನವೆಂಬರ್‌ 1ರಂದು ಆಚರಿಸುವ ಕನ್ನಡ ರಾಜ್ಯೋತ್ಸವ. ಕೂಟದ ಮಕ್ಕಳು, ಹಿರಿಯರು, ಹಾಗೂ ಹಲವೊಮ್ಮೆ ನಾಡಿನಿಂದ ಬಂದ ಆಹ್ವಾನಿತ ಕಲಾವಿದರ ಜೊತೆಗೂಡಿ ಕನ್ನಡ ರಾಜ್ಯೋತ್ಸವದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆಗಸ್ಟ್‌ ತಿಂಗಳಿಂದಲೇ ಇದಕ್ಕೆ ಬೇಕಾದ ಸಿದ್ಧತೆ ಪ್ರಾರಂಭವಾಗುತ್ತದೆ.

ಈ ಬಾರಿ ನವೆಂಬರ್‌ 1ರಂದು ಕುವೈತ್‌ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯೋತ್ಸವ ನೆರವೇರಲಿದೆ. ಇದಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುವಲ್ಲಿ ಕೂಟದ ಪ್ರಸಕ್ತ ಸಾಲಿನ ಅಧ್ಯಕ್ಷರಾದ ಡಾ. ಶಶಿಕಿರಣ್‌ ಜಿ. ಪ್ರಭು, ಉಪಾಧ್ಯಕ್ಷ ಪ್ರಭು ಆಚಾರ್‌, ಕಾರ್ಯದರ್ಶಿ ರವಿಕಿರಣ್‌ ಪ್ರಭಾಕರ್‌ ಹಾಗೂ ಖಜಾಂಚಿ ರಮೇಶ್‌ ನಾಯಕ್‌ರವರ ಕಾರ್ಯತತ್ಪರತೆ ಗಮನಾರ್ಹ. ಈ ಸಮಾರಂಭಕ್ಕೆ ನಾಡಿನ ಹೆಸರಾಂತ ರಂಗಕಲಾವಿದ, ಚಲನಚಿತ್ರ ನಿರ್ದೇಶಕ ಟಿ.ಎಸ್.‌ ನಾಗಾಭರಣ ಅವರು ಆಗಮಿಸಲಿದ್ದಾರೆ. ಪ್ರತಿವರ್ಷವೂ ಒಂದು ವಿಷಯಕೇಂದ್ರಿತ ಕಾರ್ಯಕ್ರಮದ ಆಯೋಜಿಸಲಾಗುತ್ತದೆ. ಈ ವರ್ಷದ ವಿಷಯ: ‘ಕಾಮನಬಿಲ್ಲು’. ಕಾರ್ಯಕ್ರಮಗಳಲ್ಲಿ ವೈವಿಧ್ಯತೆಯ ರಂಗುಗಳ ಚೆಲ್ಲಿ ಮನದಂಗಳದಲ್ಲಿ ಕಾಮನಬಿಲ್ಲು ಮೂಡುವಂತೆ ಮಾಡುವುದು ಎಂದು ನಮ್ಮೆಲ್ಲರ ಆಶಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು