ಮಂಗಳವಾರ, ಫೆಬ್ರವರಿ 25, 2020
19 °C

ಕೇಮ್ ಚೊ ಟ್ರಂಪ್: ಗುಜರಾತಿಗೆ ಬರಲಿದ್ದಾರೆ ಅಮೆರಿಕ ಅಧ್ಯಕ್ಷ  ಡೊನಾಲ್ಡ್ ಟ್ರಂಪ್

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೇ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ವೇತ ಭವನ ಮಂಗಳವಾರ ಹೇಳಿದೆ. ಶ್ವೇತಭವನದ ಹೇಳಿಕೆ ನಂತರ ಓವಲ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, ಭಾರತಕ್ಕೆ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನನ್ನ ಗೆಳೆಯ. ಅವರೊಬ್ಬ ಜಂಟಲ್‌ಮ್ಯಾನ್. ವಾರಾಂತ್ಯದಲ್ಲಿ ನಾನು ಅವರೊಂದಿಗೆ  ಮಾತನಾಡಿದ್ದೆ. ಭಾರತಕ್ಕೆ ಬಂದರೆ ವಿಮಾನ ನಿಲ್ದಾಣದಲ್ಲಿ ದಶಲಕ್ಷ ಜನರು ನಿಮ್ಮನ್ನು ಸ್ವಾಗತಿಸಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಕರೆದೊಯ್ಯಲಿದ್ದಾರೆ ಎಂದು ಅವರು ನನ್ನಲ್ಲಿ ಹೇಳಿದ್ದಾರೆ ಎಂದು ಟ್ರಂಪ್ ಭಾರತ ಪ್ರವಾಸ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಜಗತ್ತಿನಲ್ಲಿಯೇ ಅತೀ ದೊಡ್ಡ ಕ್ರೀಡಾಂಗಣ ಎಂದು ಬಣ್ಣಿಸಲ್ಪಡುವ ಅಹಮದಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರಿಕೆಟ್ ಕ್ರೀಡಾಂಗಣವನ್ನು ಟ್ರಂಪ್ ಉದ್ಘಾಟಿಸಲಿದ್ದಾರೆ. ಕೇಮ್ ಚೊ ಟ್ರಂಪ್ (ಹೌಡಿ ಟ್ರಂಪ್) ಎಂಬ ಕಾರ್ಯಕ್ರಮವನ್ನು ಗುಜರಾತಿನಲ್ಲಿ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ 1.25 ಲಕ್ಷ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಈಚೆಗೆ ನಡೆದ ನ್ಯೂ ಹ್ಯಾಂಪ್‌ಶೇರ್ ರ‍್ಯಾಲಿಯಲ್ಲಿ ಅಂದಾಜು 40,000ದಿಂದ 50,000 ಮಂದಿ ಭಾಗವಹಿಸಿದ್ದರು. ರ‍್ಯಾಲಿಯಲ್ಲಿ ಕಡಿಮೆ ಜನ ಭಾಗವಹಿಸಿದ್ದು ಬೇಸರವುಂಟು ಮಾಡಿತು ಎಂಬುದನ್ನು ಸೂಚ್ಯವಾಗಿ ಹೇಳಿದ ಟ್ರಂಪ್, 50,000 ಜನ ಭಾಗವಹಿಸಿದರೆ ನನಗೆ ಖುಷಿಯಾಗಲ್ಲ.  

ವಿಮಾನ ನಿಲ್ದಾಣದಿಂದ ಹೊಸ ಸ್ಟೇಡಿಯಂಗೆ ಕರೆದೊಯ್ಯಲು  5 ರಿಂದ 7 ದಶಲಕ್ಷ ಜನರು ಇರಲಿದ್ದಾರೆ. ನಿಮಗೆ ಗೊತ್ತಾ ಅದು ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ. ಅದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಅದು ಜಗತ್ತಿನ ಬೃಹತ್ ಸ್ಟೇಡಿಯಂ ಎಂದು  ಹೇಳಿದ್ದಾರೆ.

ಭಾರತದ ಜತೆ ವ್ಯಾಪಾರ ಒಪ್ಪಂದ ಏನಾದರೂ  ಇದೆಯೇ ಎಂಬ ಪ್ರಶ್ನೆ ಕೇಳಿದಾಗ, ಸೂಕ್ತವಾದ ಒಪ್ಪಂದ ಅನಿಸಿದರೆ ಅದನ್ನು ಮಾಡುತ್ತೇನೆ ಎಂದು ಟ್ರಂಪ್ ಉತ್ತರಿಸಿದ್ದಾರೆ.

ಹೇಗಿರಲಿದೆ  ಕೇಮ್ ಚೊ ಟ್ರಂಪ್ ಕಾರ್ಯಕ್ರಮ? : ಡೊನಾಲ್ಡ್  ಟ್ರಂಪ್ ಜತೆ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಕೂಡಾ ಭಾರತಕ್ಕೆ ಬರಲಿದ್ದಾರೆ. ಗಾಂಧೀನಗರದ ಹಿರಿಯ ಅಧಿಕಾರಿಗಳ ಪ್ರಕಾರ  ಟ್ರಂಪ್ ಅವರು ನೇರವಾಗಿ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿ ಮೋದಿಯವರೇ  ಟ್ರಂಪ್ ಅವರನ್ನು ಸ್ವಾಗತಿಸಲಿದ್ದಾರೆ.  ಆನಂತರ ಸಬರಮತಿ ಆಶ್ರಮಕ್ಕೆ  ಭೇಟಿ ನೀಡಲಿದ್ದಾರೆ. 
 ಮಹಾತ್ಮ ಗಾಂಧಿ ಆಶ್ರಮಕ್ಕೆ ಭೇಟಿ ನೀಡುವಾಗ ಹಿನ್ನೆಲೆ ಸಂಗೀತವಾಗಿ  ವೈಷ್ಣವ ಜನತೋ ಗೀತೆ ಮೊಳಗಲಿದೆ. ಸಂಜೆ ಸ್ಟೇಡಿಯಂನಲ್ಲಿ ಪ್ರಧಾನ ಸಮಾರಂಭ ನಡೆಯಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು