ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ಭೂಕಂಪ: 22 ಮಂದಿ ಸಾವು

ಮೀರ್‌ಪುರದಲ್ಲಿ ಅಪಾರ ಹಾನಿ l ಬಿರುಕುಬಿಟ್ಟ ರಸ್ತೆಗಳು l ರಕ್ಷಣಾ ಕಾರ್ಯಾಚರಣೆಗೆ ಸೇನೆ ರವಾನೆ
Last Updated 24 ಸೆಪ್ಟೆಂಬರ್ 2019, 18:36 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಂಗಳವಾರ ಸಂಭವಿಸಿದ ಪ್ರಬಲ ಭೂಕಂಪದಿಂದ 22 ಮಂದಿಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಿಕ್ಟರ್‌ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೀರ್‌ಪುರ ನಗರ ಕೇಂದ್ರ ಬಿಂದುವಾಗಿತ್ತು. ಈ ನಗರದಲ್ಲೇ ಅಪಾರ ಹಾನಿ ಸಂಭವಿಸಿದೆ.

10 ಕಿಲೋ ಮೀಟರ್‌ ಆಳದಲ್ಲಿ ಕಂಪನವಾಗಿದೆ ಎಂದು ಅಮೆರಿಕದ ಭೂವಿಜ್ಞಾನ ಕೇಂದ್ರ ತಿಳಿಸಿದೆ.

ಇಸ್ಲಾಮಾಬಾದ್, ಪೆಶಾವರ, ರಾವಲ್ಪಿಂಡಿ, ಲಾಹೋರ್‌, ಫೈಸಲಾಬಾದ್‌, ಸಿಯಾಲಕೋಟ್‌ ಸೇರಿದಂತೆ ಹಲವು ನಗರಗಳಿಗೂ ಭೂಕಂಪದ ತೀವ್ರತೆ ತಟ್ಟಿದೆ. ಭೂಕಂಪದಿಂದ ಹಲವು ಕಟ್ಟಡಗಳು ಕುಸಿದಿವೆ. ಮೀರ್‌ಪುರದಲ್ಲಿ ರಸ್ತೆಗಳು ಬಿರುಕುಬಿಟ್ಟು ಕಂದಕಗಳು ನಿರ್ಮಾಣವಾಗಿವೆ. ಮೊಬೈಲ್‌ ಗೋಪುರಗಳು, ವಿದ್ಯುತ್‌ ಕಂಬಗಳಿಗೂ ಹಾನಿಯಾಗಿದ್ದು, ಮೀರ್‌ಪುರ ಸಮೀಪ ದ ಮಂಗ್ಲಾ ಜಲಾಶಯ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೂಲಸೌಕರ್ಯಗಳು ನಾಶವಾಗಿವೆ. ಹಲವರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ತುರ್ತು ಅಗತ್ಯವಾಗಿದೆ. ಜನರಿಗೆ ನೆರವಾಗಲುಎಲ್ಲ ರೀತಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಖ್‌ ಹೈದರ್‌ ತಿಳಿಸಿದ್ದಾರೆ.

‘ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸೇನೆ ಮತ್ತು ಸಂತ್ರಸ್ತರಿಗೆ ಅಗತ್ಯ ವಸ್ತು ರವಾನಿಸಲಾಗಿದೆ’ ಎಂದು ಮೇಜರ್‌ ಜನರಲ್‌ ಅಸೀಫ್‌ ಗಫೂರ್‌ ತಿಳಿಸಿದ್ದಾರೆ.

ಕಂಪಿಸಿದ ಉತ್ತರ ಭಾರತ

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲೂ ಭೂಕಂಪ ಸಂಭವಿಸಿದೆ.

ರಿಕ್ಟರ್‌ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕೇಂದ್ರೀಕೃತವಾಗಿದ್ದ ಈ ಭೂಕಂಪ ಮಧ್ಯಾಹ್ನ 4.33ಕ್ಕೆ ಸಂಭವಿಸಿದೆ.

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್‌), ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ. ಆತಂಕಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT